ಬೆಂಗಳೂರು: ಒಂದು ಕಡೆ ನಿರಂತರವಾಗಿ ಕಾಡುತ್ತಿರುವ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆಗಳ ಕಿರಿಕಿರಿ, ರಾಜ್ಯದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸುಸ್ತು, ಕಾಂಗ್ರೆಸ್ ಟಿಕೆಟ್ ಹಂಚಿಕೆ, ಮುಖ್ಯಮಂತ್ರಿ ಚರ್ಚೆಗೆ ಉತ್ತರ ಕೊಟ್ಟು ಕೊಟ್ಟು ಆಗಿರುವ ಸುಸ್ತಿನಿಂದ ದಣಿವಾರಿಸಿಕೊಳ್ಳಲು ದುಬೈಗೆ ತೆರಳಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar).
ಕಳೆದ ಡಿಸೆಂಬರ್ ೧ರಂದು ತೆರಳಿರುವ ಡಿ.ಕೆ.ಶಿವಕುಮಾರ್ ಡಿಸೆಂಬರ್ ೮ರವರೆಗೆ ಅಲ್ಲಿರಲಿದ್ದಾರೆ. ಅವರ ದುಬೈ ಭೇಟಿ ಕೂಡಾ ಅಷ್ಟು ಸುಲಭವಾಗಿ ಕೈಗೂಡಲಿಲ್ಲ. ಅವರು ಎದುರಿಸುತ್ತಿರುವ ಹಲವು ಪ್ರಕರಣಗಳಿಂದಾಗಿ ವಿದೇಶ ಪ್ರಯಾಣಕ್ಕೆ ಅವಕಾಶವಿಲ್ಲ. ಹೀಗಾಗಿ ಅವರು ಕೋರ್ಟ್ ಮೂಲಕ ಇ.ಡಿಯ ಅನುಮತಿ ಪಡೆದು ತೆರಳಿದ್ದಾರೆ. ಅಲ್ಲಿ ವಿವಿಧ ಕಾರ್ಯಕ್ರಮಗಳು ಮತ್ತು ಉದ್ಯಮಿಗಳ ಜತೆ ಮಾತುಕತೆ ನಡೆಸಲಿದೆ ಎಂಬ ಕಾರಣವನ್ನು ಡಿ.ಕೆ. ನೀಡಿದ್ದರು.
ಕಳೆದ ಒಂದು ವಾರದಿಂದ ದುಬೈನಲ್ಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ಸಾಥ್ ನೀಡಿದ್ದಾರೆ. ದುಬೈಯಲ್ಲಿರುವ ಅವರು ಅಲ್ಲಿನ ಮ್ಯೂಸಿಯಂ ಆಫ್ ಫ್ಯೂಚರ್ ಮುಂದೆ ತೆಗೆಸಿಕೊಂಡಿರುವ ಫೋಟೊಗಳು ಬಯಲಾಗಿವೆ. ಡಿ.ಕೆ. ಶಿವಕುಮಾರ್ ಮತ್ತು ಹ್ಯಾರಿಸ್ ಜತೆಯಾಗಿ ನಿಂತು ತೆಗೆಸಿಕೊಂಡಿರುವ ಫೋಟೊಗಳು ಗಮನ ಸೆಳೆದಿವೆ.
ಡಿಸೆಂಬರ್ ೮ರಂದು ದುಬೈನಿಂದ ಹೊರಟು ಕರ್ನಾಟಕಕ್ಕೆ ಮರಳಲಿರುವ ಡಿ.ಕೆ. ಶಿವಕುಮಾರ್ ಅವರು ಮುಂದೆ ಮತ್ತೆ ರಾಜ್ಯ ರಾಜಕೀಯದಲ್ಲಿ ಇನ್ನಷ್ಟು ಹುರುಪಿನೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ | Karnataka Elections | ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಗುಂಪುಗಾರಿಕೆಗೆ ಡಿಕೆಶಿ ಗರಂ, 4 ಅಂಶಗಳ ಎಚ್ಚರಿಕೆ ಸಂದೇಶ ರವಾನೆ