ಬೆಂಗಳೂರು: ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ (Deputy Chief minister) ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ (DK Shivakumar) ಅವರು ಭರ್ಜರಿ ವಿಜಯದ ಬಳಿಕ ಮೊದಲ ಬಾರಿ ವಿಧಾನಸೌಧವನ್ನು ಪ್ರವೇಶಿಸುವಾಗ (Entering Vidhana soudha) ಭವ್ಯ ಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿದ್ದು (Bowing to the steps of Vidhana soudha) ಎಲ್ಲರ ಗಮನ ಸೆಳೆದಿದೆ. ಇದು ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ (Prime Minister Narendra Modi) ಅವರು 2014ರಲ್ಲಿ ಮೊದಲ ಬಾರಿ ಸಂಸತ್ ಪ್ರವೇಶಿಸುವ ವೇಳೆ ನಡೆದುಕೊಂಡ ಮಾದರಿ ರೀತಿಯ ಅನುಕರಣೆಯಾಗಿದೆ.
ಅಚ್ಚರಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ರೀತಿ ಮೆಟ್ಟಿಲುಗಳ ಮೇಲೆ ತಲೆ ಇಟ್ಟು ನಮಸ್ಕರಿಸಿ ಸಂಸತ್ ಪ್ರವೇಶಿಸಿದ ಸರಿಯಾಗಿ ಒಂಬತ್ತು ವರ್ಷಗಳ ಬಳಿಕ ಅದೇ ದಿನ ಡಿ.ಕೆ. ಶಿವಕುಮಾರ್ ಅವರು ಕೂಡಾ ತಲೆ ಇಟ್ಟು ನಮಸ್ಕರಿಸಿ ವಿಧಾನಸಭೆ ಪ್ರವೇಶಿಸಿದ್ದು ಕಾಕತಾಳೀಯವಾಗಿದೆ.
ವಿಧಾನ ಸೌಧ ಒಂದು ದೇವ ಮಂದಿರವಿದ್ದಂತೆ
ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸೌಧದ ಮೆಟ್ಟಿಲುಗಳಿಗೆ ನಮಿಸಿ ಪ್ರವೇಶಿಸಿದೆ. ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳನ್ನು ಕಾಪಾಡುವ ವಿಧಾನಸೌಧವು ಒಂದು ದೈವ ಮಂದಿರವಿದ್ದಂತೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರು 2014ರ ಮೇ 20ರಂದು ಸಂಸತ್ ಪ್ರವೇಶದ ವೇಳೆ ನಮಸ್ಕರಿಸಿದ್ದರೆ, ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರವೇಶ ಮಾಡಿದ್ದು 2023ರ ಮೇ 20ರಂದು!
ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ನಡೆದಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಿತ್ತು. ಮತ ಎಣಿಕೆಯ ಬಳಿಕ 224 ವಿಧಾನಸಭಾ ಕ್ಷೇತ್ರಗಳ ಪೈಕಿ 135 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಬಿಜೆಪಿ 66 ಸ್ಥಾನಕ್ಕೆ ಸೀಮಿತವಾಗಿತ್ತು. ಜೆಡಿಎಸ್ ಕೇವಲ 19 ಸ್ಥಾನಗಳನ್ನು ಪಡೆದಿತ್ತು. ಪಕ್ಷೇತರರು ಸೇರಿ ಇತರ ನಾಲ್ವರು ಜಯ ಗಳಿಸಿದ್ದರು.
ರಾಜ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಸಿಎಂ ಯಾರಾಗಬೇಕು ಎನ್ನುವ ವಿಚಾರದಲ್ಲಿ ಐದು ದಿನಗಳ ಕಾಲ ಸಮಾಲೋಚನೆ ನಡೆದು ಅಂತಿಮವಾಗಿ ಮುಖ್ಯಮಂತ್ರಿ ಪಟ್ಟವನ್ನು ಸಿದ್ದರಾಮಯ್ಯ ಅವರಿಗೆ, ಡಿಸಿಎಂ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ನೀಡಲಾಯಿತು.
ಮೇ 20ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸಿಎಂ, ಡಿಸಿಎಂ ಮತ್ತು ಎಂಟು ಸಚಿವರ ಪ್ರಮಾಣವಚನ ಸಮಾರಂಭ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ, ದೇಶದ ನಾನಾ ರಾಜ್ಯಗಳ ಕಾಂಗ್ರೆಸ್ ಸಿಎಂಗಳು ಮತ್ತು ಮಿತ್ರ ಪಕ್ಷಗಳ ನಾಯಕರು ಇದರಲ್ಲಿ ಭಾಗವಹಿಸಿದ್ದರು.
ಪ್ರಮಾಣವಚನ ಸ್ವೀಕಾರದ ಬಳಿಕ ಪ್ರಮಾಣವಚನ ಸ್ವೀಕರಿಸಿದ ಎಲ್ಲ ನಾಯಕರು ವಿಧಾನಸೌಧಕ್ಕೆ ಆಗಮಿಸಿದರು. ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಮೆಟ್ಟಿಲುಗಳಿಗೆ ನಮಸ್ಕರಿಸಿದರು.
ಇದನ್ನೂ ಓದಿ : Karnataka CM: … ಎಂಬ ಹೆಸರಿನವನಾದ ನಾನು…: ರಾಜ್ಯದ ನೂತನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರ ಪ್ರಮಾಣ