ಬೆಂಗಳೂರು: ಒಂದು ಕಡೆ ಡಿ.ಕೆ. ಶಿವಕುಮಾರ್ (DK Shivakumar) ಅವರು ರಾಜ್ಯದ ಮುಖ್ಯಮಂತ್ರಿಯಾಗಲು ಭಾರಿ ಪ್ರಯತ್ನ ನಡೆಸುತ್ತಿರುವ ನಡುವೆಯೇ ಕೇಂದ್ರೀಯ ತನಿಖಾ ಮಂಡಳಿ (Central bureau of investigation) ಅವರ ಬೆನ್ನು ಹತ್ತಲು ಶುರು ಮಾಡಿದೆ. ಅವರ ಮೇಲಿರುವ ಪ್ರಕರಣಗಳ ವಿಚಾರಣೆಗೆ ರಾಜ್ಯ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯ ತೆರವು ಕೋರಿ ಸಿಬಿಐ ಬುಧವಾರ ಸುಪ್ರೀಂಕೋರ್ಟ್ (Supreme court) ಮೆಟ್ಟಿಲು ಹತ್ತಿದೆ. ಆದರೆ, ಸುಪ್ರೀಂಕೋರ್ಟ್ ಈ ಹಂತದಲ್ಲಿ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ಈ ಮೂಲಕ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚಿನ ಆಸ್ತಿ ಸಂಗ್ರಹ ಮಾಡಿದ ಆರೋಪಕ್ಕೆ ಸಂಬಂಧಿಸಿ ಡಿ.ಕೆ. ಶಿವಕುಮಾರ್ ವಿರುದ್ಧ ತನಿಖೆಗೆ ಸಿಬಿಐ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ನಾನಾ ಹಂತಗಳಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆಯ ತೆರವಿಗೆ ಹೈಕೋರ್ಟ್‌ಗೆ ಸಿಬಿಐ ಮನವಿ ಸಲ್ಲಿಸಿದೆ.
ಈ ನಡುವೆ ಕೇಂದ್ರೀಯ ತನಿಖಾ ಮಂಡಳಿ ಗುರುವಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ತನಿಖೆಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ರದ್ದುಗೊಳಿಸಬೇಕು, ತನಿಖೆಗೆ ಅವಕಾಶ ನೀಡಬೇಕು ಕೇಳಿಕೊಂಡಿದೆ.
ಈ ಅರ್ಜಿಯ ವಿಚಾರಣೆಯ ವೇಳೆ ಡಿ.ಕೆ. ಶಿವಕುಮಾರ್ ಅವರ ಪರ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಅವರು, ಇದೇ ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ಮಂಗಳವಾರ (ಮೇ 23) ಹೈಕೋರ್ಟ್‌ನಲ್ಲೇ ವಿಚಾರಣೆ ಇದೆ. ಇದು ಮಧ್ಯಂತರ ಆದೇಶ ಅಷ್ಟೇ. ಹೀಗಾಗಿ ನೀವು ಇದರ ಬಗ್ಗೆ ಈಗ ವಿಚರಣೆ ಮಾಡಬೇಡಿʼʼ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ಸಿಬಿಐ ಪರ ವಕೀಲ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರು, ಸುಪ್ರೀಂಕೋರ್ಟ್ ರಜೆ ಇರುವುದರಿಂದ ನಾವು ತ್ವರಿತ ವಿಚರಣೆಗೆ ಕೇಳಿದ್ದೇವೆ ಎಂದು ಹೇಳಿದರು.
ಆದರೆ, ಮೇ 23ರಂದು ಹೈಕೋರ್ಟ್‌ನಲ್ಲೇ ವಿಚಾರಣೆ ಇರುವುದರಿಂದ ತಕ್ಷಣಕ್ಕೆ ವಿಚಾರಣೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಾದವನ್ನು ಹೈಕೋರ್ಟ್‌ನಲ್ಲೇ ಮಂಡಿಸಿ ಎಂದು ಸೂಚಿಸಿತು. ಸುಪ್ರೀಂಕೋರ್ಟ್‌ಗೆ ರಜೆ ಇದ್ದರೂ ಬೇಸಗೆ ರಜೆ ನ್ಯಾಯಪೀಠ ಪ್ರತಿ ದಿನವೂ ಕಾರ್ಯ ನಿರ್ವಹಿಸಲಿದೆ. ಏನೇ ಸಮಸ್ಯೆ ಇದ್ದರೂ ಆಗ ನೀವು ಬರಬಹುದು ಎಂದ ನ್ಯಾ ಗವಾಯ್ ನೇತೃತ್ವದ ನ್ಯಾಯಪೀಠ ಹೇಳಿತು.
ಹೀಗಾಗಿ ಈ ಯಾವುದೇ ತಡೆಯಾಜ್ಞೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಿದೆ.
ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳು ಹಲವಾರು ಪ್ರಕರಣಗಳನ್ನು ದಾಖಲಿಸಿವೆ. ಎಲ್ಲ ಪ್ರಕರಣಗಳು ವಿಚಾರಣೆಯ ನಾನಾ ಹಂತದಲ್ಲಿವೆ. ಇದೀಗ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಮುಂದಾಗುತ್ತಿದ್ದಂತೆಯೇ ಪ್ರಕರಣಗಳು ಮೇಲೆದ್ದು ಬರುತ್ತಿವೆ. ಅದರ ನಡುವೆ ಸಿಬಿಐ ನಿರ್ದೇಶಕರಾಗಿ, ಡಿ.ಕೆ.ಶಿ ಅವರು ಕಟುವಾಗಿ ಟೀಕಿಸಿದ ಪ್ರವೀಣ್ ಸೂದ್ ಅವರೇ ನೇಮಕಗೊಂಡಿದೆ.