ನವದೆಹಲಿ: ಕಾಂಗ್ರೆಸ್ ಪಕ್ಷ ಸರಳ ಬಹುಮತ ಪಡೆದಿದೆಯಾದರೂ ಸಿಎಂ ಆಯ್ಕೆ ವಿಚಾರದಲ್ಲಿ ಗೊಂದಲ ಮುಂದುವರಿದಿದೆ. ತಮಗೆ ಸಿಎಂ ಸ್ಥಾನವೇ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.
ಇಷ್ಟು ಕಷ್ಟ ಪಟ್ಟು ಪಕ್ಷವನ್ನು ಗೆಲ್ಲಿಸಿದ ತಮಗೇ ಸಿಎಂ ಸ್ಥಾನ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆಗೆ ಒಂದು ಗಂಟೆಗೂ ಹೆಚ್ಚು ಸಮಯ ನಡೆದ ಸಭೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಇಬ್ಬರೂ ಸಿದ್ದರಾಮಯ್ಯ ಪರ ಇದ್ದಾರೆ ಎನ್ನಲಾಗಿದ್ದು,. ಇದು ಡಿ.ಕೆ. ಶಿವಕುಮಾರ್ ಅವರಿಗೆ ಅಸಮಾಧಾನ ಉಂಟುಮಾಡಿದೆ. ಸಿಎಂ ಸ್ಥಾನ ನೀಡಿದರೆ ನೀಡಿ, ಇಲ್ಲವಾದರೆ ಸಾಮಾನ್ಯ ಕಾಂಗ್ರೆಸ್ ಶಾಸಕನಾಗಿ ಇದ್ದುಬಿಡುತ್ತೇನೆ ಎಂದಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ತ್ಯಜಿಸುವ ಪರೋಕ್ಷ ಸಂದೇಶವನ್ನು ಅವರು ರವಾನೆ ಮಾಡಿದ್ದಾರೆ.
ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿದ್ದು ಸೋನಿಯಾ ಗಾಂಧಿಯವರು ಎಂದು ಪದೇಪದೆ ಹೇಳುವ ಮೂಲಕ ತಮ್ಮ ಆಯ್ಕೆಯ ಎಲ್ಲ ಹೊಣೆಗಾರಿಕೆಯನ್ನೂ ಸೋನಿಯಾ ಅವರ ಹೆಗಲಿಗೆ ಹಾಕಿದ್ದಾರೆ. ಈ ಹಿಂದೆ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದೂ ಸೇರಿ ಅನೇಕ ಕಾರಣಗಳಿಂದಾದರೂ ಸೋನಿಯಾ ಗಾಂಧಿ ತಮ್ಮ ಕಡೆ ಮನಸ್ಸು ಮಾಡಬಹುದು ಎಂಬ ನಿರೀಕ್ಷೆಯನ್ನು ಶಿವಕುಮಾರ್ ಹೊಂದಿದ್ದಾರೆ.
ಡಿ. ಕೆ. ಶಿವಕುಮಾರ್ ಅವರನ್ನು ಸಮಾಧಾನಪಡಿಸಲು ಮಲ್ಲಿಕಾರ್ಜುನ ಖರ್ಗೆ ಸಾಕಷ್ಟು ಹೊತ್ತು ಕಸರತ್ತು ನಡೆಸಿದ್ದಾರೆ. ಪ್ರಾರಂಭದಲ್ಲಿ ಸಿದ್ದರಾಮಯ್ಯ, ನಂತರ ತಮ್ಮನ್ನು ಸಿಎಂ ಮಾಡಲಾಗುತ್ತದೆ ಎಂಬ ಸೂತ್ರಕ್ಕೆ ಡಿ.ಕೆ. ಶಿವಕುಮಾರ್ ಒಪ್ಪಿಲ್ಲ. ಪಕ್ಷ ಸಂಘಟನೆಗಾಗಿ ಸಿದ್ದರಾಮಯ್ಯ ಅವರಿಗಿಂತ ನಾನು ಹೆಚ್ಚು ಶ್ರಮ ಪಟ್ಟಿದ್ದೇನೆ. ನನ್ನನ್ನು ಮಾಡಲು ಆಗದಿದ್ದರೆ ನೀವೇ ಸಿಎಂ ಆಗಿಬಿಡಿ. ನೀವು ಪಕ್ಷಕ್ಕಾಗಿ ಕೆಲಸ ಮಾಡಿದ್ದೀರ ಎಂದು ಖರ್ಗೆಗೇ ಆಫರ್ ನೀಡಿ ಹೊಸ ಗೂಗ್ಲಿ ಎಸೆದಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: dk shivakumar : ಡಿ ಕೆ ಶಿವಕುಮಾರ್ ಸಿಎಂ ಹುದ್ದೆಗೆ ಪಟ್ಟು ಹಿಡಿಯಲು ಅಜ್ಜಯ್ಯನ ಮಠದ ಶಕುನ ಕಾರಣವೇ?