Site icon Vistara News

DK Shivakumar : ಕಾಂಗ್ರೆಸ್‌ ಗೆಲುವು, ಸಿಎಂ ಗಾದಿ ಮೇಲೆ ಕಣ್ಣಿಟ್ಟು ಶೃಂಗೇರಿಯಲ್ಲಿ ಚಂಡಿಕಾ ಯಾಗ ಮಾಡ್ತಿದಾರಾ ಡಿಕೆಶಿ?

DK Shivakumar in Shringeri

#image_title

ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಭಾನುವಾರ ಶೃಂಗೇರಿಯಲ್ಲಿ ಚಂಡಿಕಾ ಯಾಗ ಮಾಡಿಸುತ್ತಿದ್ದಾರೆ. ಅದಕ್ಕಾಗಿ ಶನಿವಾರ ಮಧ್ಯಾಹ್ನವೇ ಕ್ಷೇತ್ರಕ್ಕೆ ಆಗಮಿಸಿ ಸಂಕಲ್ಪ ಕೈಗೊಂಡಿದ್ದಾರೆ. ಇದು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಮತ್ತು ಮುಖ್ಯ ಮಂತ್ರಿ ಗಾದಿಗೇರಬೇಕು ಎಂಬ ಸಂಕಲ್ಪ ತೊಟ್ಟು ಡಿ.ಕೆ. ಶಿವಕುಮಾರ್‌ ಅವರು ಮಾಡುತ್ತಿರುವ ಯಾಗ ಎಂದು ಹೇಳಲಾಗುತ್ತಿದೆ.

ಶನಿವಾರ ಬೆಳಗ್ಗೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅವರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್‌ ಶಿವರಾಮ್‌ ಅವರ ಪರವಾಗಿ ಉಜಿರೆಯಲ್ಲಿ ನಡೆದ ಸಮಾವೇಶದಲ್ಲಿ ಮತ ಯಾಚನೆ ಮಾಡಿದರು. ಅಲ್ಲಿಂದ ಶೃಂಗೇರಿಗೆ ಆಗಮಿಸಿದ ಅವರು ಚಂಡಿಕಾ ಯಾಗದ ಸಿದ್ಧತೆಯಲ್ಲಿ ಪಾಲ್ಗೊಂಡರು.

ಡಿ.ಕೆ.ಶಿವಕುಮಾರ್‌ ಅವರು ಪತ್ನಿ ಸಮೇತರಾಗಿ ಶೃಂಗೇರಿಗೆ ಆಗಮಿಸಿದ್ದು, ಡಿಕೆಶಿ ಆಪ್ತ ಜ್ಯೋತಿಷಿ ದ್ವಾರಕನಾಥ್ ನೇತೃತ್ವದಲ್ಲಿ ಚಂಡಿಕಾ ಯಾಗ ನಡೆಯಲಿದೆ. ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯುವ ಯಾಗಕ್ಕೆ ಶನಿವಾರ ಸಂಜೆ ಶಾರದಾಂಬೆ ಸನ್ನಿಧಿಯಲ್ಲಿ ಡಿಕೆಶಿ ದಂಪತಿ ಸಂಕಲ್ಪ ಮಾಡಿದರು.

ಒಳ್ಳೆಯ ಆಡಳಿತ ಕೊಡಬೇಕು ಎಂಬ ಉದ್ದೇಶ

ಈ ನಡುವೆ, ಡಿ.ಕೆ.ಶಿ ಅವರ ಜ್ಯೋತಿಷ್ಯ ಮಾರ್ಗದರ್ಶಕರಾದ ದ್ವಾರಕಾನಾಥ್‌ ಅವರು ಮಾತನಾಡಿ, ಡಿಕೆಶಿ ಯಾರ ಸಲಹೆ ಮೇರೆಗೂ ಶೃಂಗೇರಿಗೆ ಬಂದಿಲ್ಲ. ನಮಗೆ ಪ್ರತ್ಯಕ್ಷವಾದ ದೇವರು ಗುರುಗಳು ಹಾಗೂ ಶೃಂಗೇರಿ ಮಹಾ ಸಂಸ್ಥಾನ. ಅವರ ಆಶೀರ್ವಾದಕ್ಕಾಗಿ ಬಂದಿದ್ದಾರೆʼʼ ಎಂದರು.

ʻʻಒಳ್ಳೆಯ ಆಡಳಿತ ಕೊಡಬೇಕು, ರಾಜ್ಯ ಮತ್ತು ರಾಷ್ಟ್ರಕ್ಕೆ ಒಳ್ಳೆಯದಾಗಬೇಕು ಎಂಬ ಉದ್ದೇಶವನ್ನು ಡಿ.ಕೆ. ಇಟ್ಟುಕೊಂಡಿದ್ದಾರೆ. ಈ ಬಾರಿ ಡಿಕೆಶಿ ಅವರಿಗೆ ಒಂದು ಅವಕಾಶ ಸಿಗಲಿ. ಎಲ್ಲಾ ಹಂತದಲ್ಲೂ ಅವರಿಗೆ ಯಶಸ್ಸು ಕಲ್ಪಿಸಲಿ. ಅವರು ಒಳ್ಳೆ ಆಡಳಿತ ಕೊಡುವಂತಾಬೇಕುʼʼ ಎಂದು ಅವರು ಹೇಳಿದರು.

ʻʻಡಿ.ಕೆ ಶಿವಕುಮಾರ್‌ ಅವರು ಸ್ವಾರ್ಥಕ್ಕಾಗಿ ಪೂಜೆ ಮಾಡಲು ಬಂದಿಲ್ಲ. ಗುರುಗಳು ಹಾಗೂ ದೇವರ ಪ್ರಾರ್ಥನೆ ಮಾಡಿ ಒಂದು ಅವಕಾಶಕ್ಕಾಗಿ ಬಂದಿದ್ದಾರೆ. ಪ್ರಜಾ ಕಲ್ಯಾಣಕ್ಕಾಗಿ ಪೂಜೆ ಮಾಡಲು ಬಂದಿದ್ದಾರೆʼʼ ಎಂದು ದ್ವಾರಕಾನಾಥ್‌ ಅವರು ಹೇಳಿದರು.

ಇಲ್ಲಿಂದಲೇ ಚುನಾವಣಾ ಪ್ರಚಾರ ಆರಂಭ ಎಂದರು ಡಿಕೆಶಿ

ʻʻಬೆಳಗ್ಗೆ ಮಂಜುನಾಥ ಸ್ವಾಮಿ ಪೂಜೆ ಮಾಡಿಸಿದ್ದೇನೆ. ಈಗ ಶಾರದಾಂಬೆ ಪೂಜೆ ಮಾಡಿ ಪ್ರಾರ್ಥಿಸಿದ್ದೇನೆ. ನನ್ನ ಚುನಾವಣೆ ಪ್ರಚಾರ ಈ ಕ್ಷೇತ್ರದಿಂದಲೇ ಆರಂಭವಾಗುತ್ತದೆʼʼ ಎಂದು ಶೃಂಗೇರಿಯಲ್ಲಿ ಡಿಕೆ ಶಿವಕುಮಾರ್ ಹೇಳಿದರು.

ʻʻಯಾವ ಯಾಗ ಪೂಜೆ ಮಾಡಬೇಕೆಂಬುದು ಭಕ್ತ ಹಾಗೂ ತಾಯಿಗೆ ಬಿಟ್ಟ ವಿಚಾರ. ಅದು ಬೇರೆ ಯಾರಿಗೂ ಸಂಬಂಧಿಸಿದಲ್ಲ. ಇಲ್ಲಿ ಯಾವುದೇ ಕಲ್ಮಶವೂ ಇಲ್ಲ ರಾಜಕಾರಣವೂ ಇಲ್ಲ. ಯಾರು ಏನು ಬೇಕಾದರೂ ಪ್ರಾರ್ಥನೆ ಮಾಡಿಕೊಳ್ಳಬಹುದು.. ರಾಜೀವ್ ಗಾಂಧಿ ಕೂಡ ಇಲ್ಲಿ ದೊಡ್ಡ ಹೋಮ ಹಾಗೂ ಯಾಗ ನಡೆಸಿದ ಇತಿಹಾಸವಿದೆ. ಇಂದಿರಾ ಗಾಂಧಿ ಕಾಲದಿಂದಲೂ ಇಲ್ಲಿ ನಡೆದಿರುವುದು ಗೊತ್ತಿದೆ. ನಮಗೂ ಈ ಕ್ಷೇತ್ರಕ್ಕೂ ಭಾವನಾತ್ಮಕ ಸಂಬಂಧವಿದೆʼʼ ಎಂದರು.

ʻʻಕನಕಪುರದಲ್ಲಿ ನಾನು ಅಭ್ಯರ್ಥಿಯೇ ಅಲ್ಲ. ಪ್ರತಿ ಮನೆಯಲ್ಲೂ ಡಿಕೆ ಶಿವಕುಮಾರ್ ಇದ್ದಾನೆ. ಅವರೇ ಅಭ್ಯರ್ಥಿಗಳು. ಅವರೇ ಚುನಾವಣೆ ಮಾಡಿಕೊಳ್ಳುತ್ತಾರೆ. ನಾನು ನಾಮಪತ್ರ ಸಲ್ಲಿಸಿದ್ದೇನೆ ಅಷ್ಟೇ. ಉಳಿದಿದ್ದೆಲ್ಲ ಅವರೇ ಮಾಡಿಕೊಳ್ಳುತ್ತಾರೆʼʼ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ : Karnataka Elections :‌ ಹತ್ತು ಡಿಕೆಶಿಗಳು ಬಂದರೂ ಲಿಂಗಾಯತರ ಡ್ಯಾಂ ಒಡೆಯಲು ಅಸಾಧ್ಯ ಎಂದ ಸಿ.ಸಿ ಪಾಟೀಲ್

Exit mobile version