ಚಿಕ್ಕಮಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ (R Ashok) ಹರಿಹಾಯ್ದಿದ್ದಾರೆ. ಅವರ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಆ್ಯಕ್ಟಿಂಗ್ ಸಿಎಂ ರೀತಿ ಮಾಡುತ್ತಿದ್ದಾರೆ. ಅವರದ್ದು ಒಂದು ರೀತಿ ಅತಿರೇಕದ ನಡೆ ಎಂದು ಅಶೋಕ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುವುದಿಲ್ಲ. ಅಲ್ಲದೆ, ನಾನೇ ಸಿಎಂ ಎಂದು ಸಿದ್ದರಾಮಯ್ಯ ದೆಹಲಿಯಲ್ಲಿ ಹೇಳಿದ್ದಾರೆ. ಇದೇನು ಸಮ್ಮಿಶ್ರ ಸರ್ಕಾರವಾ ಎಂದು ಸಿದ್ದರಾಮಯ್ಯ ಯಾರಿಗೆ ಹೇಳಿದ್ದಾರೆ? ಅದು ಡಿ.ಕೆ. ಶಿವಕುಮಾರ್‌ಗೆ ಎಂಬುದು ಜಗಜ್ಜಾಹೀರಾಗಿದೆ. ಹೀಗಾಗಿ ತಮಗೆ ಸಿಎಂ ಸ್ಥಾನ ಸಿಗುವುದಿಲ್ಲ ಎಂಬ ಗ್ಯಾರಂಟಿ ಇದೆ. ಅದಕ್ಕಾಗಿ ಈಗಿನಿಂದಲೇ ಓವರ್‌ಟೇಕ್ ಮಾಡಿ ಕಿರಿಕಿರಿ ಮಾಡಲು ಹೊರಟಿದ್ದಾರೆ. ಕಿರಿಕಿರಿ ಬೀದಿಗೆ ಬಂದರೆ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಶಾಸಕನ ಅಪ್ಪಿದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ; ಎಲ್ಲೋ ಲೆಕ್ಕಾಚಾರ ತಪ್ಪಿದೆ ಅಂದ್ರು ಜನ!
ಮುಖ್ಯಮಂತ್ರಿ ಆದವರು ಹಿಂದಿನ ಮುಖ್ಯಮಂತ್ರಿಯನ್ನು ಭೇಟಿ ಮಾಡುವುದು ಮಾಮೂಲಿ. ಆದರೆ, ಡಿಸಿಎಂ ಆದವರು ಭೇಟಿ ಮಾಡುವುದಿಲ್ಲ. ನಾನು ಡಿಸಿಎಂ ಆಗಿದ್ದೆ. ಆದರೆ, ಮಾಜಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿರಲಿಲ್ಲ ಎಂದು ಆರ್. ಅಶೋಕ್ ಹೇಳಿದರು.
ಜುಲೈ 3ರಂದು ವಿಪಕ್ಷ ನಾಯಕನ ಹೆಸರು ಪ್ರಕಟ
ಬಿಜೆಪಿಯಿಂದ ವಿರೋಧ ಪಕ್ಷದ ನಾಯಕರ ಹೆಸರು ಇನ್ನೂ ಪ್ರಕಟ ಆಗಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆರ್. ಅಶೋಕ್, ಜುಲೈ 3ರಂದು ವಿರೋಧ ಪಕ್ಷದ ನಾಯಕನ ಹೆಸರನ್ನು ಪ್ರಕಟ ಮಾಡಲಾಗುತ್ತದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಖಾಲಿ ಇಲ್ಲ
ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಖಾಲಿ ಇಲ್ಲ, ನಳಿನ್ ಕುಮಾರ್ ಕಟೀಲ್ ಇದ್ದಾರೆ. ಸೋಮಣ್ಣ ಹೇಳಿಕೆ ನನಗೆ ಗೊತ್ತಿಲ್ಲ. ಸದ್ಯಕ್ಕೆ ಕಟೀಲ್ ಅವರನ್ನು ತೆಗೆಯುವ ಸಂದರ್ಭ ಕಾಣುತ್ತಿಲ್ಲ. ಪಾರ್ಲಿಮೆಂಟ್ ಚುನಾವಣೆ ಇದೆ. ರಾಷ್ಟ್ರಾಧ್ಯಕ್ಷರ ತೀರ್ಮಾನ ಗೊತ್ತಿಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನನ್ನ ಬಳಿ ಯಾವ ಮಾಹಿತಿ ಇಲ್ಲ ಎಂದು ಹೇಳಿದರು.
ತಾವು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಬಳ್ಳಾರಿಯಲ್ಲಿ ಸ್ವತಃ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆರ್. ಅಶೋಕ್, ನಮ್ಮದು ರಾಷ್ಟ್ರೀಯ ಪಕ್ಷ. ನವ ದೆಹಲಿಯಲ್ಲಿ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕಲ್ವಾ? ಪಾರ್ಲಿಮೆಂಟ್ ಚುನಾವಣೆ ಸಮೀಪ ಇದೆ. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಚರ್ಚಿಸುತ್ತಾರೆ. ಅಲ್ಲಿಯವರೆಗೆ ರಾಜ್ಯಾಧ್ಯಕ್ಷರ ಪದವಿ ಖಾಲಿ ಇಲ್ಲ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದರು.
ಕನಕಪುರದಲ್ಲಿ ಬಿಜೆಪಿಗೆ ಬೂತ್ ಏಜೆಂಟ್ ಕೂಡ ಇಲ್ಲ
ಕನಕಪುರ ಹಾಗೂ ಪದ್ಮನಾಭನಗರ ಎರಡೂ ಕಡೆ ಸ್ಪರ್ಧೆ ಮಾಡಿರುವುದು ಸರಿಯೋ? ತಪ್ಪೋ? ನನಗೆ ಗೊತ್ತಿಲ್ಲ. ಪಕ್ಷ ಸ್ಪರ್ಧೆ ಮಾಡಲು ಹೇಳಿತ್ತು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನು ಸ್ಪರ್ಧೆ ಮಾಡಿದೆ. ಕನಕಪುರದಲ್ಲಿ ಬಿಜೆಪಿಗೆ ಬೂತ್ ಏಜೆಂಟ್ ಕೂಡ ಇಲ್ಲ. ಕನಕಪುರದಲ್ಲಿ 75 ವರ್ಷದ ಇತಿಹಾಸ ನೋಡಿದರೆ ಬಿಜೆಪಿಗೆ 5000 ಮತ ದಾಟಿಲ್ಲ. ಹೋರಾಟ ಮಾಡಿ 19,500 ಮತಗಳನ್ನು ತೆಗೆದುಕೊಂಡಿದ್ದೇನೆ. ಈ ಸೋಲು ಬಿಜೆಪಿಗೆ ಸಾಂದರ್ಭಿಕವಷ್ಟೇ ಎಂದು ಆರ್. ಅಶೋಕ್ ಹೇಳಿದರು.
ಇದನ್ನೂ ಓದಿ: Rain News: ಮಳೆಗಾಗಿ ಮುಸ್ಲಿಮರಿಂದ ಕಣ್ಣೀರ ಪ್ರಾರ್ಥನೆ; ಇಂದು ಮಳೆಯಾಗದಿದ್ದರೆ ನಾಳೆಯೂ ಅಲ್ಲಾಗೆ ಮೊರೆ
ಒಳಮೀಸಲಾತಿ, ಎಸ್‌ಟಿಗಳಿಗೆ 5% ಮೀಸಲಾತಿ ಜಾಸ್ತಿ ಮಾಡಲಾಗಿತ್ತು. ಇದರ ಲಾಭ ಪಡೆದವರು, ನಮ್ಮ ಜತೆ ನಿಂತರೋ ಇಲ್ಲವೋ ಗೊತ್ತಿಲ್ಲ. ಯಾರಿಗೆ ಸೌಲಭ್ಯ ಸಿಕ್ಕಿಲ್ಲವೋ ಅವರು ನಮ್ಮ ವಿರುದ್ಧ ನಿಂತಿರುವುದು ಗೊತ್ತಾಗುತ್ತದೆ. ಮೀಸಲಾತಿ ಹೊಡೆತ ಬಿದ್ದಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲಿ ಇದನ್ನೆಲ್ಲ ಚರ್ಚೆ ಮಾಡುತ್ತೇವೆ ಎಂದು ಅಶೋಕ್ ಹೇಳಿದರು.