Site icon Vistara News

ಡಿಕೆಶಿಗೆ ಸಿಎಂ ಆಗೋ ಯೋಗ್ಯತೆ, ಅರ್ಹತೆ ಇಲ್ಲ: ಸಚಿವ ಅಶ್ವತ್ಥನಾರಾಯಣ ವ್ಯಾಖ್ಯಾನ

ಆಶ್ವತ್ಥನಾರಾಯಣ

ರಾಮನಗರ: ಯಾವುದೇ ಯೋಗ್ಯತೆ ಮತ್ತು ಅರ್ಹತೆ ಇಲ್ಲದಂತಹ ಡಿಕೆಶಿಯನ್ನ ಸಿಎಂ ಮಾಡಿ ಈ ನಾಡಿನ ಜನ ಏನನ್ನು ನೋಡಬೇಕು? ಇದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರ ವ್ಯಂಗ್ಯಭರಿತ ಪ್ರಶ್ನೆ. ಗೌಡಗೆರೆ ಚಾಮುಂಡೇಶ್ವರಿ ದರ್ಶನ ಬಳಿಕ ಅವರು ಈ ಹೇಳಿಕೆ ನೀಡಿದರು. ಅವರ ಮಾತಿನ ಸಾರ ಇಲ್ಲಿದೆ:

* ತಾನು ಮೊದಲ ಬಾರಿ ಬಿಜೆಯಲ್ಲಿ ಶಾಸಕನಾದಾಗ ಆರ್. ಅಶೋಕ್ ಮತ್ತು ಅಶ್ವತ್ಥನಾರಾಯಣ ಬಿಜೆಪಿಯಲ್ಲಿ‌ ಇರಲೇ ಇಲ್ಲ ಎಂದು ಮಾಜಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ. ಅದಕ್ಕೇನಂತೆ? ಬಾಲಕೃಷ್ಣ ಕನ್‌ಫ್ಯೂಸ್ ಆಗಿದ್ದಾರೆ. ಯಾಕಪ್ಪ ಕನ್‌ಫ್ಯೂಸ್ ಆಗಿದ್ಯಾ ಬಾಲಕೃಷ್ಣ? ಕನ್‌ಫ್ಯೂಸ್ ಆಗಬೇಡ ಸ್ಪಷ್ಟತೆ ತಿಳಿದುಕೋ.

* ಡಿಕೆಶಿಗೆ ಒಕ್ಕಲಿಗ ಸಮುದಾಯ ಬೆಂಬಲ ನೀಡಲಿ ಎಂದು ಬಾಲಕೃಷ್ಣ ಹೇಳಿದ್ದಾರೆ. ಮೊದಲು ಜನರ ವಿಶ್ವಾಸ ಗಳಿಸಿಕೊಳ್ಳಬೇಕು. ಅಧಿಕಾರ ಪಡೆದುಕೊಳ್ಳೋದು ನಮಗೋಸ್ಕರ ಅಲ್ಲ, ನಮ್ಮ ವ್ಯಕ್ತಿಗತ ಆಸೆ ಪೂರೈಸಿಕೊಳ್ಳೋದಕ್ಕೆ ಅಲ್ಲ. ಅಧಿಕಾರ ಪಡೆದುಕೊಳ್ಳೋದು ನಾಡಿನ ಶ್ರೇಯಸ್ಸಿಗಾಗಿ. ನನಗೊಂದಿಷ್ಟು ಕೊಡಿ ಅನ್ನೋದು ಅಂಗಡಿಯಲ್ಲಿ ವ್ಯಾಪಾರ ಮಾಡಿದಂತಲ್ಲ! ಬದ್ಧತೆ – ಕಾಳಜಿ ಮೊದಲು ಇರಬೇಕು. ರಾಜಕೀಯ ಎಂಬುದು ಬಹಳ ಪವಿತ್ರವಾದದ್ದು.

* ಸಿಎಂ ಸ್ಥಾನ ಬಯಸುವುದು ತಪ್ಪಲ್ಲ. ಆದರೆ ಅದಕ್ಕೆ ತಕ್ಕ ಅರ್ಹತೆ, ಯೋಗ್ಯತೆ ಇರಬೇಕು. ಯೋಗ್ಯತೆ, ಅರ್ಹತೆ ಬೆಳೆಸಿಕೊಂಡು ಯಾರು ಬೇಕಾದರೂ ಸಿಎಂ ಆಗಲಿ. ನಾಡಿನ ಕಷ್ಟಕ್ಕೆ ಸ್ಪಂದಿಸುವ ಒಳ್ಳೆಯ ನಾಯಕ ಬರಬೇಕು ಎಂದು ಜನ ಬಯಸುತ್ತಾರೆ. ಸ್ವಂತ ಆಸೆ ಪೂರೈಸಿಕೊಳ್ಳಲು ನಾಡಿನ ಜನರನ್ನು ಬಲಿ ಕೊಡಲು ಸಾಧ್ಯವೆ?

* ಅವರ ಭಾರವನ್ನು ಹೊರಲು ನಮ್ಮ ಜನ ಏನು ಕರ್ಮ ಮಾಡಿದ್ದಾರೆ? ಸತ್ಯವಂತರು ಸಿಎಂ ಆಗಲಿ, ಪಾಪಿಗಳನ್ನು ಸಂಪೂರ್ಣವಾಗಿ ದೂರ ಇರಿಸಲಿ ಎಂದು ಚಾಮುಂಡೇಶ್ವರಿ ತಾಯಿಯಲ್ಲಿ ಬೇಡಿಕೊಳ್ಳುತ್ತೇನೆ.

ಇದನ್ನೂ ಓದಿ | ಸಿದ್ದರಾಮಯ್ಯಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದು ಡಿ.ಕೆ.ಶಿವಕುಮಾರ್‌: ನಂಜಾವಧೂತ ಸ್ವಾಮೀಜಿ

Exit mobile version