ಬೆಂಗಳೂರು: ರಾಜ್ಯದಲ್ಲಿ ಕಾವೇರಿ ಜಲ ವಿವಾದ (Cauvery water dispute) ತಾರಕಕ್ಕೇರಿದೆ. ಕರ್ನಾಟಕದಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಮೊದಲೇ ಇಲ್ಲಿನ ಹಲವು ಜಿಲ್ಲೆಗಳಲ್ಲಿ ಕುಡಿಯಲೇ ಸರಿಯಾಗಿ ನೀರು ಸಿಗುತ್ತಿಲ್ಲ. ಇನ್ನು ಬೆಳೆಗಳಿಗಂತೂ ಬಹಳವೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು (Water to Tamil Nadu) ಬಿಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ (State Congress Government) ಕ್ರಮ ಖಂಡಿಸಿ ರೈತ ಸಂಘಟನೆಗಳು (Farmers Union) ಸೇರಿದಂತೆ ಅನೇಕ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿವೆ. ಈಗ ಹೋರಾಟದ ವಿರುದ್ಧ ಡಿಸಿಎಂ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ಗರಂ ಆಗಿದ್ದಾರೆ. ಹೋರಾಟಗಾರರ ಮೇಲೆ ಕಿಡಿಕಾರಿದ್ದಾರೆ. ಈ ಹೋರಾಟಕ್ಕೆ ಧನ್ಯವಾದಗಳು. ಆದರೆ, ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ನೀವೆಲ್ಲ ಎಲ್ಲಿ ಹೋಗಿದ್ದಿರಿ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕಾವೇರಿ ನೀರು ಬಿಡದಂತೆ ರೈತ ಸಂಘಟನೆಗಳಿಂದ ಹೋರಾಟ ಮಾಡುತ್ತಿರುವ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಸಂಘಟನೆಗಳು ತಮಿಳುನಾಡಿಗೆ ನೀರು ಬಿಡದಂತೆ ಹೋರಾಟ ನಡೆಸುತ್ತಿವೆ. ಅದಕ್ಕೆ ಧನ್ಯವಾದಗಳು. ಆದರೆ, ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಈ ಸಂಘಟನೆಗಳು ಎಲ್ಲಿ ಹೋಗಿದ್ದವು? ಆಗ ಯಾಕೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಬೇಕು ಅಂತ ಕೇಂದ್ರ ಸರ್ಕಾರಕ್ಕೆ (Central Government) ಕೇಳಲಿಲ್ಲ? ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.
ಅನುಮತಿಗಾಗಿ ಕೇಂದ್ರಕ್ಕೆ ಏಕೆ ಕೇಳುತ್ತಿಲ್ಲ?
ಬಿಜೆಪಿ, ಜೆಡಿಎಸ್ ಪಕ್ಷದವರೂ ಕೇಂದ್ರಕ್ಕೆ ಮೇಕೆದಾಟು ಯೋಜನೆಗೆ ಅನುಮತಿ ಬೇಕು ಎಂದು ಏಕೆ ಕೇಳುತ್ತಿಲ್ಲ. ಹೋರಾಟಗಾರರು ಕೇಂದ್ರಕ್ಕೆ ಅನುಮತಿ ಕೊಡಿ ಅಂತ ಕೇಳಲಿ. ನಾವು ನಮ್ಮ ರೈತರ ಹಿತ ಕಾಪಾಡಲು ಬದ್ಧವಾಗಿದ್ದೇವೆ. ತಮಿಳುನಾಡು ಸರ್ಕಾರ 20 ಸಾವಿರ ಕ್ಯೂಸೆಕ್ ನೀರಿಗೆ ಆಗ್ರಹಿಸಿತ್ತು. ನಾವು ಆಗುವುದಿಲ್ಲ ಎಂದು ವಾದ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 5 ಸಾವಿರ ಕ್ಯೂಸೆಕ್ ನೀರನ್ನು ಬಿಟ್ಟಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ
ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ವಕೀಲರು ಉತ್ತಮವಾಗಿ ವಾದವನ್ನು ಮಂಡಿಸುತ್ತಿದ್ದಾರೆ. ನಾನು ಕೂಡಾ ದೆಹಲಿಗೆ ಹೋಗಿ ವಕೀಲರ ಜತೆ ಮಾತನಾಡಿದ್ದೇನೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಬಂದು ವಸ್ತುಸ್ಥಿತಿಯ ಅಧ್ಯಯನ ನಡೆಸುವಂತೆ ಕೇಳಿದ್ದೇವೆ. ಸುಪ್ರೀಂ ಕೋರ್ಟ್‌ನಲ್ಲೂ ಮೇಲ್ಮನವಿ ಸಲ್ಲಿಸಿ, ನೀರು ಬಿಡಲು ಆಗಲ್ಲ ಅಂತ ಮನವಿ ಮಾಡಿಕೊಳ್ಳುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.