ಬೆಂಗಳೂರು: ಡಿ.ಕೆ. ಶಿವಕುಮಾರ್ (DK Shivakumar) ಒಬ್ಬ ಜನಪ್ರತಿನಿಧಿ, ಸಮಾಜ ಸೇವಕ. ಅವರ ಆದಾಯದ ಲೆಕ್ಕಕ್ಕೆ ಕುಟುಂಬದ ಸದಸ್ಯರ ಆದಾಯವನ್ನು ಸೇರಿಸುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ನ (Karnataka High court) ಮುಂದೆ ಹಿರಿಯ ವಕೀಲರೊಬ್ಬರು ವಾದ ಮಂಡಿಸಿದ್ದಾರೆ.
ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್ಐಆರ್ ವಜಾ ಮಾಡುವಂತೆ ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಈ ವೇಳೆ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ ಅವರು, ಕುಟುಂಬ ಸದಸ್ಯರ ಆದಾಯ, ಖರ್ಚು-ವೆಚ್ಚಗಳನ್ನು ಶಿವಕುಮಾರ್ ಅವರ ಲೆಕ್ಕಕ್ಕೆ ಸೇರಿಸುವ ಮೂಲಕ ಅವರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಹೇಳಲಾಗದು ಎಂದು ವಾದಿಸಿದರು.
ತನಿಖೆಗೆ ಆದೇಶ ನೀಡಿದ್ದೂ ಸರಿಯಿಲ್ಲ
“ಭ್ರಷ್ಟಾಚಾರ ನಿಷೇಧ ಕಾಯಿದೆಯ ಸೆಕ್ಷನ್ 17 ಗಳಿಕೆ ಮೀರಿದ ಆಸ್ತಿಗೆ ಸಂಬಂಧಿಸಿದೆ. ಈ ವಿಚಾರದ ತನಿಖೆಗೆ ಎಸ್ಪಿ ಶ್ರೇಣಿಗಿಂತ ಕೆಳಗಿನವರಲ್ಲದ ಅಧಿಕಾರಿ ಆದೇಶ ಮಾಡಬೇಕು. ಈ ಆದೇಶ ಎಫ್ಐಆರ್ನಲ್ಲಿ ಪ್ರತಿಫಲಿತವಾಗುತ್ತಿಲ್ಲ” ಎಂದು ವಕೀಲ ಸಂದೇಶ್ ಚೌಟ ಹೇಳಿದರು. ಆದರೆ “ಆ ಆದೇಶ ಇದೆ” ಎಂದು ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್ ಅವರು ಪೀಠದ ಗಮನ ಸೆಳೆದರು. ಈ ಪ್ರಕರಣದ ವಿಚಾರಣೆ ಶುಕ್ರವಾರ (ಜುಲೈ 7) ಮುಂದುವರಿಯಲಿದೆ.
ಡಿ.ಕೆ. ಶಿವಕುಮಾರ್ ವಕೀಲರ ವಾದದ ಹುರುಳೇನು?
- ಸಾರ್ವಜನಿಕ ಸೇವಕರೊಬ್ಬರು ಆದಾಯ ಮೀರಿದ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸುವಾಗ ಅವರ ಕುಟುಂಬ ಸದಸ್ಯರ ಆದಾಯವನ್ನು ಸೇರಿಸಲಾಗದು.
- ಇದು ಬೇನಾಮಿ ಪ್ರಕರಣವಲ್ಲ. ಆದರೆ, ಸಿಬಿಐ ಕುಟುಂಬ ಸದಸ್ಯರ ಆದಾಯ ಮತ್ತು ಖರ್ಚನ್ನು ಸಾರ್ವಜನಿಕ ಸೇವಕನ ಲೆಕ್ಕಕ್ಕೆ ಹಾಕುವ ಮೂಲಕ ಇಷ್ಟು ಮೌಲ್ಯದ ಅಕ್ರಮ ಆಸ್ತಿ ಗಳಿಕೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ.
- ಎರಡು ವರ್ಷ ನಾಲ್ಕು ತಿಂಗಳಿಂದ ಡಿ ಕೆ ಶಿವಕುಮಾರ್ ಅವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಸಿಬಿಐಗೆ ಸಾಕಷ್ಟು ವಕೀಲರ ಮಾರ್ಗದರ್ಶನವಿದ್ದರೂ ದೋಷಪೂರಿತವಾಗಿ ಎಫ್ಐಆರ್ ದಾಖಲಿಸಲಾಗಿದೆ.
- ಆರೋಪಕ್ಕೆ ಹೊಂದಿಕೆ ಆಗದ ಸೆಕ್ಷನ್ಗಳನ್ನು ಎಫ್ಐಆರ್ನಲ್ಲಿ ಅಳವಡಿಸಲಾಗಿದೆ.
- ಶಿವಕುಮಾರ್ ಅವರ ಕುಟುಂಬ ಸದಸ್ಯರು ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿದ್ದಾರೆ ಎಂದು ಆಕ್ಷೇಪಣೆಯಲ್ಲಿ ಸಿಬಿಐ ಹೇಳಿದೆ. ಆದರೆ, ಈ ಅಂಶ ಎಫ್ಐಆರ್ನಲ್ಲಿ ಇಲ್ಲ.
- ಡಿ ಕೆ ಶಿವಕುಮಾರ್ ಅವರ ವಿರುದ್ಧ ರಾಜಕೀಯ ದುರುದ್ದೇಶ ಇಟ್ಟುಕೊಂಡು ಪ್ರಕರಣ ದಾಖಲಿಸಲಾಗಿದೆ.
- ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್ 17ಎ ಅಡಿ ಪ್ರಕರಣ ದಾಖಲಿಸುವಾಗ ಸಕ್ಷಮ ಪ್ರಾಧಿಕಾರದ ಒಪ್ಪಿಗೆ ಪಡೆಯಲಾಗಿಲ್ಲ.
ಇದನ್ನೂ ಓದಿ: High court order: ಹೆಣ್ಣು ಎಂಬ ಕಾರಣಕ್ಕೆ ಡಿಲ್ಲಿ ರಾಣಿಗೆ ಜಾಮೀನು ಕೊಡೋಕಾಗುತ್ತಾ? ಹೈಕೋರ್ಟ್ ಪ್ರಶ್ನೆ