Site icon Vistara News

DK Shivakumar: ಬಿಎಸ್‌ವೈ, ಬೊಮ್ಮಾಯಿ ಕಾಲದಲ್ಲಿ 300 ಕೋಟಿಗೂ ಹೆಚ್ಚು ಅಕ್ರಮ: ಡಿಕೆಶಿ ಆರೋಪ

DK Shivakumar

ಬೆಂಗಳೂರು: “ಬಿಜೆಪಿಗರು ಭ್ರಷ್ಟಾಚಾರದ ಪಿತಾಮಹರು. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಕಾಲದಲ್ಲಿ ಹಲವಾರು ನಿಗಮಗಳ ಸುಮಾರು 300 ಕೋಟಿ ರೂ.ಗಳಿಗೂ ಹೆಚ್ಚು ಅಕ್ರಮ ನಡೆದಿದೆ. ಇದನ್ನು ನಾವು ಸದನದ ಮೂಲಕ ಜನರಿಗೆ ತಿಳಿಸುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು.

ವಿಧಾನಸೌಧದ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು “ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದ 87 ಕೋಟಿ ರೂ., ಎಪಿಎಂಸಿಯ 47 ಕೋಟಿ ರೂ., 2019ರಲ್ಲಿ ಅಂಗವಿಕಲ ಕಲ್ಯಾಣ ಇಲಾಖೆಯ 22 ಕೋಟಿ ರೂ., ಅಂಬೇಡ್ಕರ್ ನಿಗಮದ ಕೆನರಾ ಬ್ಯಾಂಕ್ ಅಲ್ಲಿನ ಹಣ ಜೂನ್ 2018 ರಲ್ಲಿ 5 ಕೋಟಿ ರೂ., ದೇವರಾಜ್ ಅರಸು ನಿಗಮದ 47 ಕೋಟಿ ರೂ., ಮಾಲಿನ್ಯ ನಿಯಂತ್ರಣ ಮಂಡಲಿಯ 10 ಕೋಟಿ ರೂ. ಹಾಗೂ ಕೆಐಡಿಬಿಯ ಹಣ ಸೇಲಂಗೆ ಅಕ್ರಮವಾಗಿ ವರ್ಗಾವಣೆಯಾಗಿದೆ” ಎಂದು ಆರೋಪಿಸಿದರು.

ಬಿಜೆಪಿಯ ಅಕ್ರಮಗಳನ್ನು ತನಿಖೆ ನಡೆಸುವಿರಾ ಎಂದು ಪ್ರಶ್ನಿಸಿದಾಗ “ಖಂಡಿತವಾಗಿಯೂ ತನಿಖೆ ನಡೆಸುತ್ತೇವೆ. ಆದರೆ ಎಲ್ಲವೂ ದಾಖಲೆಯಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಸದನದಲ್ಲಿ ಎಲ್ಲಾ ದಾಖಲೆಗಳನ್ನು ಬಯಲು ಮಾಡುತ್ತೇವೆ. ಅಕ್ರಮಗಳ ಹಿಂದೆ ಇರುವ ಯಾವ ಮಂತ್ರಿ, ಅಧ್ಯಕ್ಷರು, ಮುಖ್ಯಮಂತ್ರಿಗಳು ಇದ್ದರು ಎಂದು ಜನರಿಗೆ ತಿಳಿಸುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿ | Karnataka Assembly Live: ವಿಧಾನಸಭೆಯಲ್ಲಿ ಶಾಸಕರಿಗೆ ಮಧ್ಯಾಹ್ನ ಮಲಗಲು ವ್ಯವಸ್ಥೆ ಮಾಡಿಸಿದ ಸ್ಪೀಕರ್!

“ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ರೂ., ಮಂತ್ರಿ ಸ್ಥಾನಕ್ಕೆ 100 ಕೋಟಿ ರೂ. ನೀಡಬೇಕು ಎನ್ನುವ ಬಸನಗೌಡ ಪಾಟೀಲ ಯತ್ನಾಳ ಅವರ ಆರೋಪ ಹಾಗೂ ಭೋವಿ ನಿಗಮದ ಅಕ್ರಮದ ಬಗ್ಗೆ ಗೂಳಿಹಟ್ಟಿ ಶೇಖರ್ ಮಾಡಿದ ಆರೋಪಗಳ ಮೇಲೆ ಏಕೆ ಬಿಜೆಪಿ ತನಿಖೆ ನಡೆಸಲಿಲ್ಲ” ಎಂದು ಮರುಪ್ರಶ್ನಿಸಿದರು.

“ಯಾವುದೇ ಭ್ರಷ್ಟಾಚಾರದ ಮೇಲೆ ತನಿಖೆ ನಡೆಯುತ್ತಿದ್ದರೆ ಆ ವಿಚಾರದಲ್ಲಿ ವಿಧಾನಸಭೆಯಲ್ಲಿ ಚರ್ಚೆ ನಡೆಸಲು ಅವಕಾಶವಿಲ್ಲ. ಆದರೆ ನಾವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆಕೊಟ್ಟು ಸದನದಲ್ಲಿ ಚರ್ಚೆ ಅವಕಾಶ ಮಾಡಿಕೊಟ್ಟಿದ್ದೇವೆ. ಅಕ್ರಮ ಎಸಗಿದ್ದರೆ ಯಾವುದೇ ಅಧಿಕಾರಿ, ಮಂತ್ರಿ, ಶಾಸಕ, ಯಾರೇ ಆಗಿರಲಿ ಅವರನ್ನು ರಕ್ಷಿಸುವ ಉದ್ದೇಶ ನಮಗಿಲ್ಲ” ಎಂದು ಹೇಳಿದರು.

ಇದನ್ನೂ ಓದಿ | Sameer Nigam: 25,000 ಜನರಿಗೆ ಉದ್ಯೋಗ ಕೊಟ್ಟಿದ್ದೇನೆ, ನನ್ನ ಮಕ್ಕಳು ರಾಜ್ಯದಲ್ಲಿ ಕೆಲಸ ಮಾಡಬಾರದಾ?: ಫೋನ್‌ಪೇ ಸಿಇಒ ಆಕ್ರೋಶ

“ವಾಲ್ಮೀಕಿ ನಿಗಮದ 86 ಕೋಟಿ ರೂ. ಹಣ ತೆಲಂಗಾಣಕ್ಕೆ ಅಕ್ರಮವಾಗಿ ವರ್ಗಾವಣೆಯಾದ ತನಿಖೆ ನಡೆಸಲು ಎಸ್‌ಐಟಿ ರಚನೆ ಮಾಡಿದ್ದೇವೆ. ತನಿಖಾ ತಂಡವು ಸುಮಾರು 36 ಕೋಟಿ ರೂ.ಗಳಷ್ಟು ಹಣವನ್ನು ವಶಕ್ಕೆ ಪಡೆದುಕೊಂಡಿದೆ. ಬ್ಯಾಂಕ್ ಅಧಿಕಾರಿ ಒಂದೇ ದಿನದಲ್ಲಿ ಕೋಟ್ಯಂತರ ರೂಪಾಯಿ ಸಾಲ ಮಂಜೂರು ಮಾಡಿದ್ದಾನೆ. ಇದಕ್ಕೆ ಕೇಂದ್ರ ಹಣಕಾಸು ಸಚಿವರನ್ನು ಹೊಣೆಗಾರರನ್ನಾಗಿ ಮಾಡಲು ಆಗುತ್ತದೆಯೇ? ನಾವು ಪ್ರತಿಪಕ್ಷಗಳಿಗೆ ಈ ವಿಚಾರವಾಗಿ ಉತ್ತರ ಕೊಡಬೇಕಾಗಿದೆ” ಎಂದು ಖಾರವಾಗಿ ತಿಳಿಸಿದರು.

Exit mobile version