ಬೆಂಗಳೂರು: ಗ್ಯಾಸ್ ಸಿಲಿಂಡರ್ ಸೇರಿ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೆಪಿಸಿಸಿ ಕಚೇರಿಯಲ್ಲಿ ಗ್ಯಾಸ್ ಸಿಲಿಂಡರ್‌ಗೆ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ಸರ್ಕಾರದ (Karnataka Election) ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ತಂತ್ರವನ್ನೇ ಅನುಸರಿಸಿ ಡಿಕೆಶಿ ತಿರುಗೇಟು ನೀಡಿದ್ದಾರೆ.
2014ರಲ್ಲಿ ಯುಪಿಎ ಸರ್ಕಾರವಿದ್ದಾಗ ಮತದಾರರು ಮನೆಯಿಂದ ಹೊರಡುವಾಗ ಗ್ಯಾಸ್ ಸಿಲಿಂಡರ್‌ಗೆ ಕೈ ಮುಗಿದು ಹೋಗಿ ವೋಟು ಹಾಕುವ ಮೂಲಕ ಬೆಲೆ ಏರಿಕೆ ವಿರೋಧಿಸಬೇಕು ಎಂದು ನರೇಂದ್ರ ಮೋದಿ ಅವರು ಕರೆ ನೀಡಿದ್ದರು. ಇದೀಗ ಅದೇ ತಂತ್ರಗಾರಿಕೆಯನ್ನು ಡಿಕೆಶಿ ಬಳಸಿಕೊಂಡು ಬಿಜೆಪಿ ಸರ್ಕಾರಕ್ಕೆ ಕೌಂಟರ್ ಕೊಟ್ಟಿದ್ದಾರೆ.
ಇದನ್ನೂ ಓದಿ | Karnataka Election: ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಒಟ್ಟು 379 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ
ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ಗ್ಯಾಸ್ ಸಿಲಿಂಡರ್‌ಗೆ ಹೂವಿನ ಹಾರ ಹಾಕಿ, ಗಂಧದಕಡ್ಡಿ ಬೆಳಗಿ, ಮಂಗಳಾರತಿ ಮಾಡಿದ ನಂತರ ತೀರ್ಥ ವಿತರಿಸಿದರು. ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಕೋವಿಡ್ ಸಮಯದಲ್ಲಿ ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ ಎಂದು ಪ್ರಧಾನಿಗಳು ಹೇಳಿದ್ದರು. ಅದರಂತೆ ಎಲ್ಲರೂ ಪಾಲಿಸಿದ್ದರು. 2014ರಲ್ಲಿ ಮತಗಟ್ಟೆಗೆ ಹೋಗುವುದಕ್ಕೂ ಮೊದಲು ಗ್ಯಾಸ್ ಸಿಲಿಂಡರ್‌ಗೆ ನಮಿಸಿ ಮತದಾನ ಮಾಡಲು ಹೋಗಿ ಎಂದು ಜನರಿಗೆ ಕರೆ ನೀಡಿದ್ದರು. ಅದರಂತೆ ನಾನು ಕೂಡ ನಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದೇನೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಸೇರಿ ನಾಲ್ವರ ವಿರುದ್ಧ ಎಫ್ಐಆರ್
ಚಾಮರಾಜನಗರ: ದಲಿತ ಸಂಘಟನೆ ಹೆಸರಲ್ಲಿ ಕರಪತ್ರ ಮುದ್ರಿಸಿ ಅಪಪ್ರಚಾರದ ಆರೋಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಸೇರಿ ನಾಲ್ವರ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚಾಮರಾಜನಗರ ಬಿಎಸ್‌ಪಿ ಅಭ್ಯರ್ಥಿ ಹ.ರಾ.ಮಹೇಶ್ ಬೇರೆ ಪಕ್ಷದಿಂದ ಹಣ ಪಡೆದಿದ್ದಾರೆ ಎಂದು ದಲಿತ ಸಂಘಟನೆ ಹೆಸರಲ್ಲಿ ಕರಪತ್ರ ಮುದ್ರಿಸಿ ಬಿಎಸ್ಪಿ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿ ಬಿಎಸ್‌ಪಿಯಿಂದ ದೂರು ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ, ಮಾಜಿ ಸಂಸದ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಎಸ್.ನಂಜುಂಡಸ್ವಾಮಿ ಹಾಗೂ ಬಿ.ಕೆ. ರವಿಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.