Site icon Vistara News

Operation Hasta : ಬಂಗಾರಪ್ಪ ಕುಟುಂಬ ಒಂದು ಮಾಡಲು ಡಿಕೆಶಿ ಪ್ಲ್ಯಾನ್!‌ ಕುಮಾರ್‌ಗೆ ಶಿವಮೊಗ್ಗ ಟಿಕೆಟ್?

Madhu Bangarappa DK Shivakumar and Kumar Bangarappa

ಬೆಂಗಳೂರು: ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ (Congress troubleshooter) ಎಂದೇ ಖ್ಯಾತಿ ಹೊಂದಿರುವ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (Deputy CM and KPCC president DK Shivakumar) ಅವರು ಈಗ ಕಾಂಗ್ರೆಸ್‌ ವಲಯದಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಕಾಂಗ್ರೆಸ್‌ನ ರಾಷ್ಟ್ರೀಯ ಮಟ್ಟದಲ್ಲಿಯೂ ಅವರು ಗಮನ ಸೆಳೆದಿದ್ದಾರೆ. ಈ ನಡುವೆ ಲೋಕಸಭಾ ಚುನಾವಣೆಯ (Lok Sabha Election 2023) ಹಿನ್ನೆಲೆಯಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಅವರು ತಂತ್ರಗಾರಿಕೆಯನ್ನು ಹೆಣೆದಿದ್ದಾರೆ. ಇನ್ನು ತಮ್ಮ ರಾಜಕೀಯ ಗುರುಗಳಾದ ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ (Former Chief Minister Sarekoppa Bangarappa) ಅವರ ಕುಟುಂಬವನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಆಪರೇಷನ್‌ ಹಸ್ತದ (Operation Hasta) ಭಾಗವಾಗಿರುವ ಅವರ ಈ ನಡೆ ಈಗ ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯವಾಗಿ ಬದ್ಧ ವೈರಿಗಳಾಗಿರುವ ಮಧು ಬಂಗಾರಪ್ಪ (Madhu Bangarappa) ಹಾಗೂ ಕುಮಾರ್‌ ಬಂಗಾರಪ್ಪ (Kumar Bangarappa) ಅವರನ್ನು ಒಂದಾಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಈಗ ಕಾಂಗ್ರೆಸ್‌ ವಲಯದಲ್ಲಿ ಕುಮಾರ್ ಬಂಗಾರಪ್ಪ ‌ಅವರಿಗೆ ಗಾಳ ಹಾಕಿರುವ ವಿಚಾರವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದೆಡೆ ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಕುಮಾರ್ ಬಂಗಾರಪ್ಪ‌ ಅವರನ್ನು ಕಾಂಗ್ರೆಸ್ ಕರೆ ತರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಅವರೇ ಉತ್ತಮ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ್‌ ಸಹ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಇದನ್ನೂ ಓದಿ: BRICS Summit: ಬ್ರಿಕ್ಸ್‌ ಶೃಂಗಸಭೆ; ದಕ್ಷಿಣ ಆಫ್ರಿಕಾಗೆ ತೆರಳಿದ ಮೋದಿ, ಕ್ಸಿ ಜಿನ್‌ಪಿಂಗ್‌ ಜತೆ ಗಡಿ ಬಿಕ್ಕಟ್ಟು ಚರ್ಚೆ?

ಒಂದು ಕಡೆ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ನಿಲ್ಲಿಸುವಂತೆ ಸಹೋದರ, ಸಚಿವ ಮಧು ಬಂಗಾರಪ್ಪ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಬಂಧ ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದಿದ್ದ ಶಿವಮೊಗ್ಗ ಜನಪ್ರತಿನಿಧಿಗಳ ಸಭೆಯಲ್ಲಿಯೂ ಚರ್ಚೆ ನಡೆದಿತ್ತು. ಹಲವರು ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಕಣಕ್ಕಿಳಿಸಿದರೆ ಲಾಭವಾಗುತ್ತದೆ ಎಂದು ಹೇಳಿದ್ದರು. ಆದರೆ, ಈ ಮಧ್ಯೆ ಗೀತಾ ಶಿವರಾಜ್‌ ಕುಮಾರ್‌ ಅವರಿಗಿಂತ ಕುಮಾರ್‌ ಬಂಗಾರಪ್ಪ ಅವರಿಗೇ ಟಿಕೆಟ್‌ ನೀಡಿದರೆ ಹೆಚ್ಚಿನ ಲಾಭ ಆಗುತ್ತದೆ ಎಂಬ ವಾದವನ್ನು ಶಿವಮೊಗ್ಗ ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ.

ಕುಮಾರ್‌ ಬಂಗಾರಪ್ಪ ಸೇರ್ಪಡೆ ಹಿಂದಿನ ಲೆಕ್ಕಾಚಾರ ಏನು?

ಕುಮಾರ್‌ ಬಂಗಾರಪ್ಪ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ಮಾಡಿದರೆ ಹಲವು ಲಾಭ ಇದೆ ಎಂಬ ಲೆಕ್ಕಾಚಾರವನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಕೆಲವು ನಾಯಕರು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಮೊದಲನೆಯದಾಗಿ ಕುಮಾರ್‌ ಬಂಗಾರಪ್ಪ ಅವರಿಗೆ ರಾಜಕೀಯ ಅನುಭವ ಇದೆ. ಅಲ್ಲದೆ, ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದವರು. ಅಲ್ಲದೆ, ಅವರ ತಂದೆ ಬಂಗಾರಪ್ಪ ಅವರ ಬಗ್ಗೆ ಜಿಲ್ಲೆಯ ಜನರಲ್ಲಿ ಈಗಲೂ ಸಾಫ್ಟ್‌ ಕಾರ್ನರ್‌ ಇದೆ. ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿಯಾಗಬೇಕಿದ್ದರೆ ಇವರೇ ಸೂಕ್ತ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

ಮಾಜಿ ಸಿಎಂ ಬಂಗಾರಪ್ಪ ಅವರ ಜತೆ ಮಕ್ಕಳಾದ ಕುಮಾರ್‌ ಹಾಗೂ ಮಧು ಬಂಗಾರಪ್ಪ (ಸಂಗ್ರಹ ಚಿತ್ರ)

ಗೀತಾ ಶಿವರಾಜ್‌ ಕುಮಾರ್‌ಗೆ ಏಕೆ ವಿರೋಧ?

ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಕಣಕ್ಕಿಳಿಸಲು ಬಹಳ ವಿರೋಧ ವ್ಯಕ್ತವಾಗದಿದ್ದರೂ ಅವರ ಸ್ಪರ್ಧೆಯಿಂದ ಬಿಜೆಪಿಯನ್ನು ಮಣಿಸುವುದು ಅಷ್ಟು ಸುಲಭ ಅಲ್ಲ ಎಂಬ ವಾದವನ್ನು ಮುಂದಿಡಲಾಗುತ್ತಿದೆ. ಕಾರಣ, ಗೀತಾ ಅವರು ಇನ್ನೂ ಒಂದು ಚುನಾವಣೆಯನ್ನೂ ಗೆದ್ದಿಲ್ಲ. ಅಲ್ಲದೆ, ಅವರು ಪತಿ ಜತೆ ಬೆಂಗಳೂರಿನಲ್ಲಿ ಇರುವುದರಿಂದ ಇಲ್ಲಿ ಗೆದ್ದರೂ ಎಷ್ಟು ಸಮಯ ಇರುತ್ತಾರೆ ಎಂಬ ಪ್ರಶ್ನೆ ಮತದಾರರಲ್ಲಿ ಮೂಡಿದರೆ ಪಕ್ಷಕ್ಕೆ ಇದರಿಂದ ಹಿನ್ನಡೆಯಾಗುತ್ತದೆ. ಆದರೆ, ಕುಮಾರ್‌ ಬಂಗಾರಪ್ಪ ಹಾಗಲ್ಲ. ಅವರು ಕ್ಷೇತ್ರದಲ್ಲಿಯೇ ಇರುತ್ತಾರೆ. ಇದರಿಂದ ಅನುಕೂಲವಾಗುತ್ತದೆ ಎಂಬ ವಾದವನ್ನು ಮುಂದಿಡಲಾಗಿದೆ.

ಮಧು ಬಂಗಾರಪ್ಪ ವಿರೋಧ

ಈ ನಡುವೆ ಶಿವಮೊಗ್ಗದಿಂದ ಬೇಡಿಕೆ ಹೆಚ್ಚಿದ ಕಾರಣಕ್ಕೆ ಕುಮಾರ್‌ ಬಂಗಾರಪ್ಪ ಅವರಿಗೆ ಕಾಂಗ್ರೆಸ್‌ ಸೇರ್ಪಡೆಯಾಗುವಂತೆ ಡಿ.ಕೆ. ಶಿವಕುಮಾರ್‌ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರ ಗೊತ್ತಾಗುತ್ತಿದ್ದಂತೆ ಮಧು ಬಂಗಾರಪ್ಪ ಕೆಂಡವಾಗಿದ್ದಾರೆ. ಯಾವುದೇ ಕಾರಣಕ್ಕೂ ಕುಮಾರ್‌ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಆಗಬಾರದು ಎಂದು ಹೇಳಿದ್ದಾರೆ. ಕುಟುಂಬದಲ್ಲಿನ ವೈಯಕ್ತಿಕ ಕಾರಣಕ್ಕಾಗಿ ಅವರ ಸೇರ್ಪಡೆಗೆ ವಿರೋಧ ಮಾಡಿದ್ದಾರೆ.

ಮಧು ಬಂಗಾರಪ್ಪಗೆ ಡಿ.ಕೆ. ಶಿವಕುಮಾರ್ ಸಲಹೆ

ರಾಜಕೀಯದಲ್ಲಿ ಕೌಟುಂಬಿಕ ವಿಚಾರ ಅಡ್ಡ ಬರಬಾರದು. ಅದು ಪಕ್ಷದ ಸಂಘಟನೆಗೂ ಅಡ್ಡಿಯಾಗಬಾರದು. ನಮಗೆ ಲೋಕಸಭೆ ಚುನಾವಣೆ ಅತಿ ಮುಖ್ಯ. ಹಾಗಾಗಿ ಕುಮಾರ್‌ ಬರಲಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಮಧು ಬಂಗಾರಪ್ಪ ಅವರಿಗೆ ಡಿ.ಕೆ. ಶಿವಕುಮಾರ್‌ ಅವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Power Cut : ಗಮನಿಸಿ, ಇಂದಿನಿಂದ 3 ದಿನ ಬೆಂಗಳೂರಿನ ಹಲವೆಡೆ ಕರೆಂಟ್‌ ಇರಲ್ಲ; ನಿಮ್ಮ ಏರಿಯಾ ಹೇಗಿದೆ ನೋಡಿ

ಪುಷ್ಟಿ ನೀಡಿರುವ ಮಧು ಬಂಗಾರಪ್ಪ ಹೇಳಿಕೆ

ಈ ಎಲ್ಲ ಬೆಳವಣಿಗೆಗೆ ಮಧು ಬಂಗಾರಪ್ಪ ಅವರ ಹೇಳಿಕೆ ಸಹ ಪುಷ್ಟಿ ನೀಡುತ್ತಿದೆ. ಸೊರಬದಿಂದ ಯಾರೇ ಕಾಂಗ್ರೆಸ್‌ಗೆ ಬಂದರೂ ಬರಬಹುದು. ಈ ನಿರ್ಧಾರ ನನ್ನ ಕೈಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಅಂದರೆ, ಇಲ್ಲಿ ತಮ್ಮ ವಿರೋಧ ಲೆಕ್ಕಕ್ಕೆ ಇಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಹೀಗಾಗಿ ಕುಮಾರ್‌ ಬಂಗಾರಪ್ಪ ಅವರು ಕಾಂಗ್ರೆಸ್‌ಗೆ ಬರಲು ಒಪ್ಪಿದರೆ ಸೇರ್ಪಡೆ ಖಚಿತ ಎಂದು ಹೇಳಲಾಗುತ್ತಿದೆ.

Exit mobile version