ಚಾಮರಾಜನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆ ಸಾಗುವ ಸ್ಥಳ ಪರಿಶೀಲನೆಗೆ ಮೈಸೂರು ಜಿಲ್ಲೆ ನಂಜನಗೂಡಿನ ಬದನವಾಳು ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜಕೀಯದ ಜಂಜಡ ಬಿಟ್ಟು, ಮಕ್ಕಳ ಜತೆ ವಾಲಿಬಾಲ್ ಆಡುವ ಮೂಲಕ ಬಾಲ್ಯದ ನೆನಪಿನಂಗಳಕ್ಕೆ ಜಾರಿದರು.
ಸೆ.30ಕ್ಕೆ ಭಾರತ್ ಜೋಡೋ ಯಾತ್ರೆ ಗುಡಿಬಂಡೆಗೆ ಆಗಮನ
ಭಾರತ್ ಜೋಡೋ ಯಾತ್ರೆ ತಮಿಳುನಾಡು ಗಡಿಯಿಂದ ಸೆಪ್ಟೆಂಬರ್ 30ರ ಬೆಳಗ್ಗೆ 9 ಗಂಟೆಗೆ ಗುಂಡ್ಲುಪೇಟೆಗೆ ಆಗಮಿಸುತ್ತದೆ. ಮೊದಲ ದಿನ ಯಾತ್ರೆ ಬೆಳಗ್ಗೆ 9ಕ್ಕೆ ಆರಂಭವಾಗುತ್ತದೆ. ಉಳಿದ ದಿನಗಳಲ್ಲಿ ಯಾತ್ರೆ ಪ್ರತಿದಿನ ಬೆಳಗ್ಗೆ 6.30ಕ್ಕೆ ಆರಂಭವಾಗುತ್ತದೆ. ಮೊದಲ ದಿನ ಮಧ್ಯಾಹ್ನ ಸಂವಾದ ಕಾರ್ಯಕ್ರಮವಿರಲಿದ್ದು, ಆದಿವಾಸಿಗಳ ಜತೆಗೆ ರಾಹುಲ್ ಗಾಂಧಿ ಸಂವಾದ ನಡೆಸಿ, ಕೊರೊನಾ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಅ. 4 ಮತ್ತು 5 ರಂದು ಆಯುಧ ಪೂಜೆ, ವಿಜಯದಶಮಿ ಪ್ರಯುಕ್ತ ಯಾತ್ರೆಗೆ ವಿರಾಮವಿರಲಿದೆ. ರಾಜ್ಯದಲ್ಲಿ ಮೊದಲ ದಿನದ ಯಾತ್ರೆಗೆ ಎಲ್ಲ ನಾಯಕರನ್ನು ಆಹ್ವಾನಿಸಿದ್ದೇವೆ. ಪಕ್ಷ ಭೇಧವಿಲ್ಲದೇ ಎಲ್ಲರೂ ಕೂಡ ಭಾಗವಹಿಸುತ್ತಾರೆ ಎಂದು ತಿಳಿಸಿದರು. ರಾಹುಲ್ ಗಾಂಧಿ ನಡಿಗೆ ಬಗ್ಗೆ ಐರನ್ ಲೆಗ್ ಎಂಬ ಬಿಜೆಪಿ ಟೀಕೆಗಳಿಗೆ ಉತ್ತರಿಸಿ, ಬಿಜೆಪಿಯವರು ಕಬ್ಬಿಣದ ಕತ್ತರಿ ಇಟ್ಟುಕೊಂಡಿದ್ದಾರೆ. ರಾಹುಲ್ ಗಾಂಧಿ ಸೂಜಿಯಿಟ್ಟುಕೊಂಡಿದ್ದಾರೆ. ಹೊಲಿಗೆ ಕೆಲಸದ ಮೂಲಕ ಸಮಾಜವನ್ನು ಬೆಸೆಯುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ | ದೇವೇಗೌಡರನ್ನು ಅಧಿಕಾರದಿಂದ ಇಳಿಸಿದ್ದು ಕಾಂಗ್ರೆಸ್: ಪ್ರಬಲ ಜಾತಿಗಳ ವಿರುದ್ಧ ʼಕೈʼ ನಿಲುವು ಎಂದ ಸಚಿವ ಸುಧಾಕರ್