Site icon Vistara News

ರಾಜ್ಯದ ಸುಭದ್ರತೆಗೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತನ್ನಿ: ಡಿ.ಕೆ.ಶಿವಕುಮಾರ್‌

ಕಾಂಗ್ರೆಸ್‌

ಶಿವಮೊಗ್ಗ: ರಾಜ್ಯದಲ್ಲಿ ಕಷ್ಟದ ಕಾಲ ನಡೆಯುತ್ತಿದೆ. ಭ್ರಷ್ಟಾಚಾರ ಹೆಚ್ಚಾಗಿದ್ದು, 40 ಪರ್ಸೆಂಟ್‌ ಸರ್ಕಾರ ಅಧಿಕಾರದಲ್ಲಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್‌ ಸೇರಿ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಿದೆ, ಆದರೆ ಆದಾಯ ಮಾತ್ರ ಪಾತಾಳಕ್ಕೆ ಇಳಿದಿದೆ. ಹೀಗಾಗಿ ರಾಜ್ಯದ ಸುಭದ್ರತೆಗೆ ನಮ್ಮನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳ್ಳಿರಿಸಬೇಕು. ಕಾಂಗ್ರೆಸ್‌ ಅನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಜಿಲ್ಲೆಯ ಭದ್ರಾವತಿಯ ಕನಕಮಂಟಪ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಸಂಗಮೇಶ್ವರ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳಲೂ ಬಂದಿಲ್ಲ. ಬಿಜೆಪಿ ಅಲೆ ಇದ್ದಾಗಲೂ ಭದ್ರಾವತಿಯಲ್ಲಿ ಸಂಗಮೇಶ್ವರ ಅವರನ್ನು ಗೆಲ್ಲಿಸಿ ಕಳುಹಿಸಿದ ಜನತೆಗೆ ಧನ್ಯವಾದ ಹೇಳಲು ಬಂದಿದ್ದೇನೆ. ಎರಡು ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಇಲ್ಲಿನ ಜನತೆ ಪಟ್ಟ ಕಷ್ಟ ಗೊತ್ತು. ಬಿಜೆಪಿ ನಡೆಸಿದ ದಬ್ಬಾಳಿಕೆಯ ಬಗ್ಗೆಯೂ ತಿಳಿದಿದೆ. ನಾನು, ಸಿದ್ದರಾಮಯ್ಯ ಅವರು ಶಿವಮೊಗ್ಗ ಚಲೋ ಕೈಗೊಂಡು ನಿಮ್ಮ ಬೆಂಬಲಕ್ಕೆ ನಿಂತಿದ್ದೆವು ಎಂದು ಹೇಳಿದರು.

ಇದನ್ನೂ ಓದಿ Invest Karnataka 2022 | ಆರು ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ

ಕಾರ್ಯಕರ್ತರಿಲ್ಲದೆ ಕಾಂಗ್ರೆಸ್ ಇಲ್ಲ. ಡಿಕಿಶಿ, ಸಿದ್ದರಾಮಯ್ಯ ಕೂಡ ಇಲ್ಲ. ಕಷ್ಟ ಕಾಲದಲ್ಲಿ ಸಂಗಮೇಶ್ವರ ಅವರ ಬೆಂಬಲಕ್ಕೆ ನಿಂತಿದ್ದೀರಿ. ಬಿಜೆಪಿ, ಜೆಡಿಎಸ್ ಒಂದೇ, ಜೋಕರ್ ಆಟ ಆಡುತ್ತಾರೆ, ಹಲವಾರು ಕುತಂತ್ರ ಮಾಡುತ್ತಾರೆ. ಸಂಗಮೇಶ್ವರ ಅವರಿಗೆ ಕೋಟ್ಯಂತರ ರೂಪಾಯಿ ಹಣ, ಮಂತ್ರಿ ಸ್ಥಾನ ಆಫರ್ ಕೊಟ್ಟಿದ್ದರು. ಅದನ್ನು ತಿರಸ್ಕರಿಸಿ ನಿಮ್ಮ ಜತೆ ಇದ್ದಾರೆ. ಅವರ ಇಡೀ ಕುಟುಂಬ ಇಲ್ಲಿನ ಜನತೆಯ ಸೇವೆ ಮಾಡುತ್ತಿದೆ. ಜಿಲ್ಲೆಯಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಕೆಲಸ ಮಾಡಿದ್ದಾರೆ. ಆದರೆ, ಶಿವಮೊಗ್ಗದಲ್ಲಿ ಶಾಂತಿ ಹದಗೆಟ್ಟಿದೆ. ಯಾರೂ ಬಂಡವಾಳ ಹೂಡಲು ಬರುತ್ತಿಲ್ಲ. ಈಗಿನ ಸಿಎಂ ಜಿಲ್ಲೆಗೆ ಬಂಡವಾಳದಾರರನ್ನು ಕರೆಯಿಸಲಿ ನೋಡೋಣ ಎಂದ ಅವರು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರಬೇಕು ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಂಗಮೇಶ್ವರ ಷಷ್ಟ್ಯಬ್ದಿ ಆಚರಿಸಿಕೊಳ್ಳುತ್ತಿದ್ದಾರೆ. ಅವರು 100 ವರ್ಷ ಆರೋಗ್ಯದಿಂದ ಬದುಕಬೇಕು. ಸಂಗಮೇಶ್ವರಗೆ ಸಂಪತ್ತು ಬೇಡ, ಮತದಾರರೇ ಅವರಿಗೆ ಸಂಪತ್ತು. ಪಕ್ಷ ನಿಷ್ಠನ ಮೇಲೆ ಆಪರೇಷನ್ ಕಮಲ ಅಸ್ತ್ರ ಪ್ರಯೋಗಿಸಿದರು. 50 ಕೋಟಿ ರೂಪಾಯಿ ಆಮಿಷ ಒಡ್ಡಿದ್ದರು. ಆದರೆ, ಅಂತಹ ಆಫರ್ ತಿರಸ್ಕರಿಸಿ ಪಕ್ಷದಲ್ಲಿ ಉಳಿದುಕೊಂಡಿದ್ದಾರೆ. ಹಾಗಾಗಿ ಅವರ ಮೇಲೆ ನನಗೆ ಬಹಳ ಪ್ರೀತಿ ಎಂದರು.

ಸಂಗಮೇಶ್ವರ ಜಾತ್ಯತೀತ ರಾಜಕಾರಣಿ. ಹಾಗಂತ ಅನೇಕ ಜಾತಿಗಳ ಮೇಲೆ ಜೋತು ಬೀಳುವ ಅಗತ್ಯ ಇಲ್ಲ. ಅವರು ಎಲ್ಲ ಜಾತಿ, ಧರ್ಮದ ಮೇಲೆ ಪ್ರೀತಿ ಹೊಂದಿದ್ದಾರೆ. ಇಲ್ಲದಿದ್ದರೆ ಇಂತಹ ಬೃಹತ್ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಶಾಸಕರ ಮೇಲಿನ ಪ್ರೀತಿ ನಿಮ್ಮನ್ನು ಕಟ್ಟಿ ಹಾಕಿದೆ. ದುಡ್ಡು ಕೊಟ್ಟರೆ ಇಷ್ಟು ಜನ ಹೀಗೆ ಕೂರುತ್ತಿರಲಿಲ್ಲ. ಇದನ್ನು ನೋಡಿದರೆ ಸಂಗಮೇಶ್ವರಗೆ ರಾಜಕೀಯ ಭವಿಷ್ಯ ಇದೆ ಎನ್ನಿಸುತ್ತದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು, ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಂಪಿಎಂ ಮರು ಆರಂಭಿಸುತ್ತೇವೆ
ಡಬಲ್ ಎಂಜಿನ್ ಸರ್ಕಾರ ಬಂದ ಮೇಲೆ ಅಭಿವೃದ್ಧಿಯಲ್ಲಿ ರಾಜ್ಯ 10 ವರ್ಷ ಹಿಂದಕ್ಕೆ ಹೋಯಿತು. 2013ರಲ್ಲಿ ಸಂಗಮೇಶ್ವರಗೆ ಟಿಕೆಟ್‌ ಕೊಡದೆ ತಪ್ಪು ಮಾಡಿದೆ. ಇಬ್ರಾಹಿಂ ಸೋಲುತ್ತಾನೆ ಎಂದು ಗೊತ್ತಿದ್ದರೂ ಟಿಕೆಟ್‌ ಕೊಟ್ಟೆ. ಆದರೂ ಸಂಗಮೇಶ್ವರ ಬೇಸರ ಮಾಡಿಕೊಳ್ಳಲಿಲ್ಲ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ(ವಿಐಎಸ್ಎಲ್‌) ಮೋದಿ ಸರ್ಕಾರ ಹಣ ಕೊಡಲಿಲ್ಲ. ಆದರೆ ಮೈಸೂರು ಕಾಗದ ಕಾರ್ಖಾನೆ(ಎಂಪಿಎಂ) ಉದ್ಯೋಗಿಗಳಿಗೆ ನಿವೃತ್ತಿ ಪಿಂಚಣಿಗಾಗಿ ನಮ್ಮ ಸರ್ಕಾರ 400 ಕೋಟಿ ರೂಪಾಯಿ ಕೊಟ್ಟಿತ್ತು. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಂಪಿಎಂ ಅನ್ನು ಮರು ಆರಂಭಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಆರ್. ಧ್ರುವನಾರಾಯಣ, ಕೆಪಿಸಿಸಿ ಒಬಿಸಿ ಅಧ್ಯಕ್ಷ ಮಧು ಬಂಗಾರಪ್ಪ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಿತರರು ಇದ್ದರು.

ಇದನ್ನೂ ಓದಿ | Bharat Jodo | ಸಿದ್ದು ಆರೋಗ್ಯ ಸೂಪರ್‌, ಡಿಕೆಶಿ ಕಾಳಜಿ ಅಪಾರ: ರಾಹುಲ್‌ ಗಾಂಧಿ Candid ಮಾತುಗಳು

Exit mobile version