ಬೆಂಗಳೂರು: `ನಾನು ಬಂಗಾರಪ್ಪನವರ ಶಿಷ್ಯ, ಎಸ್‌ಎಂ ಕೃಷ್ಣ ಶಿಷ್ಯನಲ್ಲʼ ಎಂದು ಹೇಳುವ ಮೂಲಕ ನೂತನ ಉಪಮುಖ್ಯಮಂತ್ರಿ (Deputy Chief Minister) ಡಿ.ಕೆ.ಶಿವಕುಮಾರ್ (DK Shivakumar) ಅಚ್ಚರಿ ಮೂಡಿಸಿದ್ದಾರೆ. ಸಾಮಾನ್ಯವಾಗಿ ಡಿ.ಕೆ. ಶಿವಕುಮಾರ್ ಎಂದರೆ ಎಸ್.ಎಂ. ಕೃಷ್ಣ (SM Krishna) ಎಂದೇ ಗುರುತಿಸಲ್ಪಟ್ಟವರು. ಆದರೆ, ಇದೀಗ ಡಿಕೆಶಿ ಬೇರೊಂದು ಕಥೆ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯ ಇಂದಿರಾ ಭವನದಲ್ಲಿ ನಡೆದ ಸಮಾರಂಭ ರಾಜೀವ್ ಗಾಂಧಿ (Rajiv Gandhi) ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಅವರು ತಮ್ಮ ಹಿಂದಿನ ನೆನಪು ಮಾಡಿಕೊಂಡರು.
1990ರ ಅಕ್ಟೋಬರ್ 10ರಂದು ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ (Veerendra patil) ಅವರನ್ನು ಬದಲಾಯಿಸಿ ಎಸ್. ಬಂಗಾರಪ್ಪ ಅವರನ್ನು ನೇಮಿಸಿದ ವಿದ್ಯಮಾನದ ಬಗ್ಗೆ ವಿವರಿಸುತ್ತಾ ತಾನು ಬಂಗಾರಪ್ಪ ಶಿಷ್ಯ ಎಂದು ಹೇಳಿದರು ಡಿ.ಕೆ.ಶಿವಕುಮಾರ್.
ಆವತ್ತು ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಅವರ ಆರೋಗ್ಯ ಸ್ಥಿತಿ ಸರಿ ಇರಲಿಲ್ಲ. ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅವರನ್ನು ನೋಡಲು ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಆಗಮಿಸಿದ್ದರು. ನಾನು, ಚಂದ್ರಶೇಖರ ಮೂರ್ತಿ ಸೇರಿದಂತೆ ಕೆಲವು ಯುವಕರು ರಾಜೀವ್ ಗಾಂಧಿ ಅವರ ಬಳಿ ವಿಷಯ ಪ್ರಸ್ತಾಪ ಮಾಡಿದ್ದೆವು. ಆರೋಗ್ಯ ಸ್ಥಿತಿ ಸರಿ ಇಲ್ಲದಿರುವುದರಿಂದ ಮುಖ್ಯಮಂತ್ರಿ ಬದಲಾವಣೆ ಮಾಡಬಹುದು ಎಂದು ಹೇಳಿದ್ದೆವು. ಆವತ್ತು ಬಂಗಾರಪ್ಪ ಅವರ ಹೆಸರು ಹೇಳಿದ್ದು ನಾವೇ ಎಂದು ಹೇಳಿದರು.
ಈ ವಿಚಾರವನ್ನು ಬಂಗಾರಪ್ಪ ಅವರ ಬಳಿಗೆ ಹೋಗಿ ಚರ್ಚಿಸಿದೆವು. ನನ್ನದೇ ಕಾರಿನಲ್ಲಿ ಬಂಗಾರಪ್ಪನವರ ಮನೆಗೆ ಹೋದೆವು. ನಮ್ಮ ವಿಚಾರ ತಿಳಿಸಿದಾಗ ಅವರು ನಮಗೇ ಬೈದರು. ಏನು ಹೇಳುತ್ತಿದ್ದೀರಿ ನೀವು? ವೀರೇಂದ್ರ ಪಾಟೀಲರನ್ನು ಬದಲಿಸಿ ನನ್ನನ್ನು ಸಿಎಂ ಮಾಡುವುದಾ ಎಂದು ಪ್ರಶ್ನಿಸಿದರು. ಪರಿಸ್ಥಿತಿಯ ಅನಿವಾರ್ಯತೆ ಇದೆ ಎಂದು ನಾವು ಅವರನ್ನು ಒಪ್ಪಿಸಿದೆವು.
ಈ ನಡುವೆ, ರಾಜೀವ್ ಗಾಂಧಿ ಅವರು ಏರ್ಪೋರ್ಟ್‌ನಲ್ಲಿ ನಿಮಗೆ ಹೊಸ ಸಿಎಂ ಬರ್ತಾರೆ ಎಂದು ಹೇಳಿದರು. ಆಗ ವೀರೇಂದ್ರ ಪಾಟೀಲರು ಬೆಡ್ ರೆಸ್ಟ್‌ನಲ್ಲಿದ್ದರು. ಈಗ ಬೇರೆ ಬೇರೆ ರೀತಿಯಲ್ಲಿ ಚರ್ಚೆ ಮಾಡುತ್ತಾರೆ, ಆದರೆ, ನಿಜವಾಗಿ ಆವತ್ತು ಆಗಿದ್ದು ಹೀಗೆ ಎಂದು ಶಿವಕುಮಾರ್ ಹೇಳಿದರು.
ಈ ಮಾತು ಹೇಳುವಾಗ ತಾನು ಬಂಗಾರಪ್ಪ ಶಿಷ್ಯ ಎಂದು ಹೇಳಿಕೊಂಡರು. ʻನಾನು ಬಂಗಾರಪ್ಪ ಗರಡಿಯಲ್ಲಿ ಬೆಳೆದವನು. ಮೊದಲ ಗುರು ಅವರೇ. ನಾನು ಎಸ್‌ಎಂ ಕೃಷ್ಣ ಅವರ ಶಿಷ್ಯ ಅಲ್ಲ. ಬಂಗಾರಪ್ಪನವರು ಪ್ರತಿ ಸಮುದಾಯದ ಯುವಕರನ್ನು ಗುರುತಿಸಿ ಎರಡನೇ ಹಂತದ ನಾಯಕರನ್ನ ಬೆಳೆಸಿದರುʼʼ ಎಂದು ಹೇಳಿದರು.
ಡಿಕೆಶಿ ತಾನು ಎಸ್‌ಎಂ ಕೃಷ್ಣ ಶಿಷ್ಯನಲ್ಲ, ಬಂಗಾರಪ್ಪ ಅವರ ಶಿಷ್ಯ ಎಂದು ಈ ಹಂತದಲ್ಲಿ ಹೇಳಿಕೊಂಡಿದ್ದೇಕೆ ಎಂಬ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಎಸ್‌ಎಂ ಕೃಷ್ಣ ಅವರು ಸೌಮ್ಯ ನಾಯಕರಾಗಿದ್ದವರು. ಆದರೆ, ಬಂಗಾರಪ್ಪ ಅವರು ಕಠಿಣ ನಿರ್ಧಾರಗಳಿಗೆ ಹೆಸರಾದವರು. ಹೀಗಾಗಿ ತಾನು ಅವರಂತೆಯೇ ಅಗ್ರೆಸಿವ್ ಎಂದು ಸ್ಪಷ್ಟಪಡಿಸುವುದಕ್ಕಾಗಿ ಅವರು ಈ ರೀತಿ ಹೇಳಿದರೇ ಎಂಬ ಮಾತು ಕೇಳಿಬರುತ್ತಿದೆ.
ಲಿಂಗಾಯತರ ಪ್ರತಿಕ್ರಿಯೆ ಏನಿರಬಹುದು?
ಇದೇವೇಳೆ, ವೀರೇಂದ್ರ ಪಾಟೀಲ್ ಅವರನ್ನು ಕಿತ್ತು ಹಾಕಲಾದ ವಿದ್ಯಮಾನ ಕಾಂಗ್ರೆಸ್ ಲಿಂಗಾಯತರಿಗೆ ಮಾಡಿದ ಮಹಾದ್ರೋಹ ಎಂಬ ಚರ್ಚೆಯೂ ಇದೆ. ಇದರಲ್ಲಿ ಡಿ.ಕೆ.ಶಿವಕುಮಾರ್ ಅವರು ಸಕ್ರಿಯರಾಗಿಯೇ ಇದ್ದರು ಎಂಬ ಅವರದೇ ಕ್ರೇಮು ಮುಂದೆ ಬೇರೆ ರೀತಿಯ ಚರ್ಚೆಗೆ ಕಾರಣವಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: DK Shivakumar: ನನ್ನ, ಸಿದ್ದರಾಮಯ್ಯ ಮನೆ ಸುತ್ತೋದು, ಚಾಡಿ ಹೇಳೋದು ಬಿಡಿ; ಡಿಕೆಶಿ ಖಡಕ್ ವಾರ್ನಿಂಗ್