ರಾಮನಗರ: ಕಾಮಗಾರಿ ಪೂರ್ಣಗೊಳಿಸದೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ (Bangalore-Mysore Expressway) ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಈ ಸರ್ಕಾರ ಜನಸಾಮಾನ್ಯರನ್ನು ಪಿಕ್ ಪಾಕೆಟ್ ಮಾಡುತ್ತಿದೆ. ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎಲ್ಲಿ ನನ್ನನ್ನು ವಶಕ್ಕೆ ಪಡೆಯುತ್ತಾರೋ ಎಂದು ಟೋಲ್ ಕಟ್ಟಿ ಬಂದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾಮಗಾರಿ ಪೂರ್ಣವಾಗದೆ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿಚಾರಕ್ಕೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ನನ್ನ ಕಾರಿನಲ್ಲಿ ಫಾಸ್ಟ್ಯಾ ಗ್ ಇರಲಿಲ್ಲ. ಹೀಗಾಗಿ 500 ರೂಪಾಯಿ ಕೊಟ್ಟಿದ್ದಕ್ಕೆ 230 ರೂಪಾಯಿ ವಾಪಸ್ ಕೊಟ್ಟಿದ್ದಾರೆ ಎಂದು ಟೋಲ್ ರಸೀದಿ ತೋರಿಸಿದರು.
ಇದನ್ನೂ ಓದಿ | ಒಂದು ಅವಕಾಶ ಕೊಟ್ಟರೆ 2 ವರ್ಷದ ನಂತರ ರಾಮನಗರ ಎತ್ತರಕ್ಕೆ ಹೋಗುತ್ತೆ; ಇಲ್ಲದಿದ್ರೆ ನನ್ನ ಹೆಸರು ಬದಲಿಸಿ: ಡಿಕೆಶಿ
ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋವಿಡ್ ಸಮಯದಲ್ಲಿ ನನ್ನ ಮೇಲೆ ಸಾಕಷ್ಟು ಕೇಸ್ ಹಾಕಿದ್ದರು. ಈಗಲೂ ನಾನು ಕೋರ್ಟ್‌ಗೆ ಅಲೆಯುತ್ತಿದ್ದೇನೆ. ಸದ್ಯ ನನ್ನನ್ನು ಎಲ್ಲಿ ವಶಕ್ಕೆ ಪಡೆಯುತ್ತಾರೋ ಎಂದು ಟೋಲ್ ಕಟ್ಟಿ ಬಂದಿದ್ದೇನೆ ಎಂದು ವ್ಯಂಗ್ಯವಾಡಿ ಕಿಡಿಕಾರಿದ ಅವರು, ಕಾಮಗಾರಿ ಪೂರ್ಣ ಮಾಡಿ ಟೋಲ್ ಆರಂಭಿಸಲಿ ಎಂದು ಒತ್ತಾಯಿಸಿದರು.
ನಂತರ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಕೇಂದ್ರದ ಬಳಿ ಜನ ಆಕ್ರೋಶ ವ್ಯಕ್ತಪಡಿಸಿದ್ದನ್ನು ಬೆಳಗಿನಿಂದ ಟಿವಿ, ಪತ್ರಿಕೆಯಲ್ಲಿ ನೋಡಿದ್ದೆ. ಬಿಡದಿಯಿಂದ ರಾಮನಗರಕ್ಕೆ ತೆರಳುವ ವೇಳೆ ನನಗೂ ಅನುಭವಕ್ಕೂ ಬಂತು. ಬಿಡದಿಯಿಂದ ರಾಮನಗರಕ್ಕೆ ತೆರಳಲು 135 ರೂಪಾಯಿ ಟೋಲ್ ಕೊಡಬೇಕಂತೆ, ಫಾಸ್ಟ್ಯಾ ಗ್ ಸ್ಕ್ಯಾನರ್ ತೊಂದರೆ ನೆಪ ಹೇಳಿ 270 ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Karnataka Election 2023: ಬನ್ರೋ ನನ್ ಮಕ್ಳಾ.. ಯಾರು ಬರ್ತೀರೋ ಬನ್ನಿ; ಬಿಜೆಪಿ ವಿರುದ್ಧ ಡಾ.ಜಿ. ಪರಮೇಶ್ವರ್ ಗುಡುಗು