Site icon Vistara News

Bharat Jodo | ಕಾಂಗ್ರೆಸ್‌ನಿಂದ ಮಾತ್ರ ದೇಶದ ಜನರ ರಕ್ಷಣೆ ಸಾಧ್ಯ ಎಂದ ಡಿ.ಕೆ. ಶಿವಕುಮಾರ್

bharat Jodo

ರಾಯಚೂರು: ಕಾಂಗ್ರೆಸ್ ಇತಿಹಾಸವೇ ಈ ದೇಶದ ಇತಿಹಾಸ. ಕಾಂಗ್ರೆಸ್‌ನಿಂದ(Bharat Jodo) ಮಾತ್ರ ದೇಶದ ಎಲ್ಲ ಜನರ ರಕ್ಷಣೆ ಸಾಧ್ಯ, ಬ್ರಿಟಿಷರನ್ನು ಓಡಿಸಿದ ಹಾಗೆ ಬಿಜೆಪಿಯವರನ್ನು ಓಡಿಸಬೇಕಿದೆ. ಇದಕ್ಕಾಗಿ ನಾವು ಯಾವಾಗಲೂ ರಾಹುಲ್ ಗಾಂಧಿ ಜತೆ ಇರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ರಾಜ್ಯದಲ್ಲಿ ಭಾರತ್‌ ಜೋಡೋ ಯಾತ್ರೆಯ ಅಂತಿಮ ಹಂತದ ಬೃಹತ್‌ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ಐತಿಹಾಸಿಕ ಪಾದಯಾತ್ರೆಯಲ್ಲಿ ನಾವೆಲ್ಲಾ ಸೇರಿದ್ದೇವೆ. ಸೋನಿಯಾ ಗಾಂಧಿ ಅವರು ಭಾರತ್ ಜೊಡೋ ಯಾತ್ರೆ ಶುರು ಮಾಡಬೇಕೆಂಬ ಸಂದೇಶ ಕೊಟ್ಟಿದ್ದರು. ರಾಹುಲ್ ಗಾಂಧಿ ಅವರು 3571 ಕಿ.ಮೀ ಪಾದಯಾತ್ರೆ ಮಾಡಲು ತೀರ್ಮಾನ ಮಾಡಿದರು. ದೇಶದ ಜನರನ್ನು ಒಗ್ಗೂಡಿಸಬೇಕು, ಉದ್ಯೋಗ ಸೃಷ್ಟಿಸಬೇಕು ಎಂಬ ನಿರ್ಧಾರಕ್ಕೆ ಅವರು ಬಂದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | ವಿಸ್ತಾರ TOP 10 NEWS | 10 ಲಕ್ಷ ಉದ್ಯೋಗದ ಮೊದಲ ಕಂತಿನಿಂದ ಸರ್ಕಾರಿ ಶಾಲೆ ತಿಂಗಳ ಕಂತಿನ ಸುತ್ತೋಲೆ ವಾಪಸ್‌ವರೆಗೆ ಪ್ರಮುಖ ಸುದ್ದಿ

ಸೋನಿಯಾ ಗಾಂಧಿ ಅವರು ನಮ್ಮ ರಾಜ್ಯಕ್ಕೆ ಬಂದು ದಸರಾ ಆಚರಣೆ ಮಾಡಿ ಆಶೀರ್ವಾದ ಮಾಡಿದ್ದಾರೆ. ಎಐಸಿಸಿ ಚುನಾವಣೆಯಲ್ಲಿ ನಮ್ಮ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ. ದೀಪಾವಳಿಯ ಹಬ್ಬದಲ್ಲಿ ಕರ್ನಾಟಕಕ್ಕೆ ಬೆಳಕು ಸಿಗಬೇಕು. ಈ ನಿಟ್ಟಿನಲ್ಲಿ ಬಡವರು, ಕಾರ್ಮಿಕರು ಹಾಗೂ ಯುವಜನತೆಯೊಂದಿಗೆ ರಾಹುಲ್‌ ಗಾಂಧಿ ಅವರು ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಮುಂದಿನ‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅ.23ರಂದು(ಭಾನುವಾರ) ಭಾರತ್‌ ಜೋಡೋ ಯಾತ್ರೆ ತೆಲಂಗಾಣಕ್ಕೆ ಪ್ರವೇಶ ಮಾಡಲಿರುವ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಎಂ.ಬಿ.ಪಾಟೀಲ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ ಮಾಡಿದರು.

ಬಿಜೆಪಿ, ಆರ್‌ಎಸ್ಎಸ್ ಜನರ ನಡುವೆ ದ್ವೇಷ ಸೃಷ್ಟಿಸುತ್ತಿದೆ: ರಾಹುಲ್‌ ಗಾಂಧಿ
ಭಾರತ್ ಜೋಡೋ ಯಾತ್ರೆ ಕನ್ಯಾಕುಮಾರಿಯಿಂದ ಶುರುಮಾಡಿದ್ದು ಕಾಶ್ಮೀರದಲ್ಲಿ ಕೊನೆಯಾಗುತ್ತದೆ. ಕರ್ನಾಟಕದಲ್ಲಿ‌ ಸುಮಾರು 500 ಕಿ.ಮೀ ‌ಗಿಂತ ಹೆಚ್ಚು ದೂರ ನಡೆದಿದ್ದೇವೆ. ಬಿಸಿಲು ಮಳೆಯೆನ್ನದೆ ಪಾದಯಾತ್ರೆಯಲ್ಲಿ ಭಾಗವಹಿಸಿ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ರಾಹುಲ್ ಗಾಂಧಿ ಹೇಳಿದರು.

ಬಿಜೆಪಿ, ಆರ್‌ಎಸ್ಎಸ್ ನಮ್ಮ ಭಾರತ ದೇಶದಲ್ಲಿ ಜನರ ನಡುವೆ ದ್ವೇಷ, ಅಸೂಯೆ ಸೃಷ್ಟಿಸಿ ಭಾರತವನ್ನು ವಿಭಜನೆ ಮಾಡಲು ಪ್ರಯತ್ನ ಮಾಡುತ್ತಿವೆ. ಇದರ ವಿರುದ್ಧ ಹೋರಾಡಲು ಪಾದಯಾತ್ರೆ ಮಾಡುತ್ತಿದ್ದೇವೆ. ದ್ವೇಷವನ್ನು ಕಡಿಮೆ ಮಾಡಲು ಮಹಾನ್‌ ವ್ಯಕ್ತಿಗಳಾದ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಇವರೆಲ್ಲಾ ಹಾದಿ ತೋರಿಸಿದ್ದಾರೆ, ಈ ಪಾದಯಾತ್ರೆಯಲ್ಲಿ ದ್ವೇಷ ಇಲ್ಲ ಎಂದು ಹೇಳಿದರು.

ಯಾತ್ರೆ ಪ್ರತಿದಿನ ಬೆಳಗ್ಗೆ 6ಗಂಟೆಗೆ ಶುರುವಾಗುತ್ತದೆ, ಸಂಜೆ 6ಕ್ಕೆ ಮುಗಿಯುತ್ತದೆ. ಪ್ರತಿದಿನ ಕಾಲ್ನಡಿಗೆಯಲ್ಲಿ ಸಾವಿರಾರು ಜನರನ್ನು ಭೇಟಿಯಾಗುತ್ತೇವೆ. ಅವರೆಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗೆ ನೆರವು ಸಿಗುತ್ತಿಲ್ಲ, ಕೃಷಿಯಿಂದ ಲಾಭವಾಗುತ್ತಿಲ್ಲ ಎನ್ನುತ್ತಿದ್ದಾರೆ. ಸ್ವಾತಂತ್ರ್ಯಾ ನಂತರ ರೈತರಿಗೂ ತೆರಿಗೆ(ಜಿಎಸ್‌ಟಿ) ಕಟ್ಟುವ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಸ್ವತಂತ್ರ ಭಾರತದಲ್ಲಿ ಇಷ್ಟು ದೊಡ್ಡ ಸಾಹಸ ಯಾರೂ ಮಾಡಿಲ್ಲ ಎಂದ ಸಿದ್ದರಾಮಯ್ಯ
ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3571 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಸ್ವತಂತ್ರ ಭಾರತದಲ್ಲಿ ‌ಯಾರು ಇಷ್ಟು ದೊಡ್ಡ ಸಾಹಸ ಮಾಡಿರಲಿಲ್ಲ. ಬಹಳ ನಾಯಕರು ನಡೆದಿರಬಹುದು, ಆದರೆ ಸತತವಾಗಿ 150 ದಿನಗಳ ಕಾಲ‌ ನಡೆಯವುದು ಸಾಮಾನ್ಯ ಕೆಲಸವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ರಾಹುಲ್‌ ಗಾಂಧಿ ಪ್ರಧಾನಿಯಾಗಬೇಕೆಂಬ ಆಸೆಯಿಂದ ಪಾದಯಾತ್ರೆ ಮಾಡುತ್ತಿಲ್ಲ. ಮೋದಿ ಪ್ರಧಾನಿ ಆದಮೇಲೆ ಸಂಘ ಪರಿವಾರದವರು ಕಾನೂನು ಕೈಗೆ ತೆಗೆದುಕೊಂಡು, ದೇಶದಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾರೆ. ಇದರಿಂದ ಎಲ್ಲರೂ ಭಯದ ವಾತಾವರಣದಲ್ಲಿ ಬದುಕಬೇಕಿದೆ. ದ್ವೇಷದ ರಾಜಕಾರಣವನ್ನು ಪ್ರಶ್ನೆ ಮಾಡಿದರೆ ಕೇಸ್‌ಗಳನ್ನು ಹಾಕುತ್ತಿದ್ದಾರೆ. ಹೀಗಾಗಿ ಸಮಾಜದಲ್ಲಿ‌ ಶಾಂತಿ ನೆಲೆಸುವಂತೆ ಮಾಡಿ ಜನರಿಗೆ ಆತ್ಮವಿಶ್ವಾಸ ತುಂಬಲು ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದೆ. ಇದರಿಂದ ಜನಸಾಮಾನ್ಯರು ಜೀವನ ನಡೆಸಲು ಕಷ್ಟವಾಗುತ್ತಿದೆ. ಶ್ರೀಮಂತರ ಮೇಲೆ ತೆರಿಗೆ ಕಡಿಮೆ‌ ಮಾಡಿ ಜನ ಸಾಮಾನ್ಯರ ಮೇಲೆ‌ ತೆರಿಗೆ ಹಾಕಲಾಗುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರದ ಮೇಲೆ ಹೆಚ್ಚಿನ ತೆರಿಗೆ ಹಾಕುತ್ತಿದ್ದಾರೆ. ದೇಶದ ಜನರಿಗೆ ನರೇಂದ್ರ ಮೋದಿ ಆದಿಯಾಗಿ ಬಿಜೆಪಿಯ ಎಲ್ಲರೂ ಸುಳ್ಳು ಮಾತುಗಳನ್ನು ಹೇಳುತ್ತಿದ್ದಾರೆ. ರೈತರ ಆದಾಯ ದುಪ್ಪಟ್ಟು ಆಗಲಿಲ್ಲ, ಖರ್ಚು ಹೆಚ್ಚಾಗುತ್ತಿದೆ. ಬಿಜೆಪಿ ನಾಯಕರು ರಕ್ತ ಹೀರುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಮಕ್ಕಳಿಗೆ ಹಾಲು, ಸಮವಸ್ತ್ರ, ಶೂ ಹೀಗೆ ಹಲವು ವಸ್ತುಗಳನ್ನು ಉಚಿತವಾಗಿ ನೀಡುತ್ತಿದ್ದೆವು. ಈಗ ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು 100 ರೂಪಾಯಿ ಕೊಡಬೇಕಿದೆ. ಹೀಗಾಗಿ ಜನ ನೆಮ್ಮದಿಯಾಗಿ ಬದುಕಲು ವಿಧಾನಸಭೆ, ಲೋಕಸಭೆ ಚುನಾವಣೆಯವರೆಗೂ ಎಲ್ಲರೂ ರಾಹುಲ್ ಜತೆಯಲ್ಲಿದ್ದು, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ | Bharat jodo | ರಾಯಚೂರಿನಲ್ಲಿ ರಾಹುಲ್‌ ಹವಾ, ಸೈನಿಕರ ಜತೆ ನಡಿಗೆ, ನಾಯಕರ ಜತೆ ರನ್ನಿಂಗ್‌ ರೇಸ್‌

Exit mobile version