ಬೆಂಗಳೂರು: ಕನಕಪುರದಲ್ಲಿ ನೈತಿಕ ಪೊಲೀಸ್ ಗಿರಿ ಮೂಲಕ ವ್ಯಕ್ತಿಯ ಹತ್ಯೆಯಾಗಿದ್ದುಮ ಇದಕ್ಕೆ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರೇ ಹೊಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಕನಕಪುರದಲ್ಲಿ ಗೋಸಾಗಣೆ ತಡೆಯುವ ಸಮಯದಲ್ಲಿ ವ್ಯಕ್ತಿಯ ಹತ್ಯೆ ಹಾಗೂ ಸಿಂದು ಸಂಘಟನೆ ನಾಯಕ ಪುನೀತ್ ಕೆರೆಹಳ್ಳಿ ಬಂಧನದ ಕುರಿತು ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಪುನೀತ್ ಕೆರೆಹಳ್ಳಿ ಜತೆಗೆ ಬಿಜೆಪಿ ನಾಯಕರ ಫೋಟೊ ಪ್ರದರ್ಶಿಸಿದ ಶಿವಕುಮಾರ್, ನನ್ನ ಕ್ಷೇತ್ರದ ಸಾತನೂರಿನಲ್ಲಿ ನೈತಿಕ ಪೊಲೀಸ್ ಗಿರಿಯ ಭಾಗವಾಗಿ ಒಬ್ಬನ ಕೊಲೆಯಾಗಿದೆ. ಪೊಲೀಸರು ಈ ವಿಚಾರವಾಗಿ ದೂರು ದಾಖಲಿಸಿಕೊಳ್ಳುವವರೆಗೂ ನಾನು ಪ್ರತಿಕ್ರಿಯೆ ನೀಡಿರಲಿಲ್ಲ. ಸ್ಥಳೀಯವಾಗಿ ನಮ್ಮ ನಾಯಕರು ಅಲ್ಲಿ ಕಾರ್ಯಪ್ರವೃತ್ತರಾಗಿ ನಮಗೆ ನಿರಂತರವಾಗಿ ಮಾಹಿತಿ ನೀಡಿದ್ದಾರೆ.
ಈ ಕೊಲೆಗೆ ಕಾರಣರಾದ ವ್ಯಕ್ತಿ ಬಿಜೆಪಿ ನಾಯಕರಿಗೆ ಆಪ್ತನಾಗಿದ್ದು, ಈ ನೈತಿಕ ಪೊಲೀಸ್ ಗಿರಿಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ಹೊಣೆ ಮಾಡುತ್ತೇನೆ. ಕಾರಣ ಅವರು ಈ ಹಿಂದೆ ನೈತಿಕ ಪೊಲೀಸ್ ಗಿರಿಗೆ ಅವರು ಬೆಂಬಲ ನೀಡಿದ್ದರು. ರೈತ ಜಾನುವಾರುಗಳನ್ನು ಸಂತೆಯಲ್ಲಿ ಖರೀದಿಸಿದ ರಸೀದಿ ಇದ್ದರೂ ಅವನಿಗೆ 2 ಲಕ್ಷ ಹಣದ ಬೇಡಿಕೆ ಇಟ್ಟು, ಹತ್ಯೆ ಮಾಡಿದ್ದಾರೆ.
ಈ ಕೊಲೆಗೆ ಸರ್ಕಾರವೇ ಕಾರಣ. ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅಲ್ಪಸಂಖ್ಯಾತರು ಬದುಕಲು ಅವಕಾಶ ಮಾಡಿಕೊಡಬೇಕು. ಚುನಾವಣೆ ಸಮಯದಲ್ಲಿ ಇಂತಹ ಗೊಂದಲ ಮಾಡುವುದು ಸರಿಯಲ್ಲ. ಸರ್ಕಾರ ಕೂಡಲೇ ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇನೆ. ಈ ಹತ್ಯೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು. ಅವರನ್ನು ಬಂಧಿಸದೇ ಅವರನ್ನು ರಕ್ಷಣೆ ಮಾಡಿದರೆ, ಇದಕ್ಕೆ ಅಧಿಕಾರಿಗಳು ಜವಾಬ್ದಾರಿಯಾಗಲಿದ್ದಾರೆ. ಹತ್ಯೆ ಮಾಡಿರುವವರು ನಿಮ್ಮ ಕಾರ್ಯಕರ್ತನೋ, ಆತ್ಮೀಯನೋ ಅವನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.