ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ಮೇಲೆ ಗುತ್ತಿಗೆದಾರರಿಂದ 40% ಕಮಿಷನ್ ಪಡೆದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕಾಂಗ್ರೆಸ್ ಅಭಿಯಾನವನ್ನೇ ಮಾಡಿತ್ತು. ಅಲ್ಲದೆ, ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೂ ಕಾರಣವಾಗಿತ್ತು. ಈಗ ಇಂಥದ್ದೇ ಆರೋಪ ಕಾಂಗ್ರೆಸ್ ಸರ್ಕಾರದ ಮೇಲೂ ಕೇಳಿ ಬಂದಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಮೇಲೆ ಕೇಳಿಬಂದಿದೆ. ಬಿಬಿಎಂಪಿ ಬಿಲ್‌ಗೆ (BBMP Bill) ಸಂಬಂಧಪಟ್ಟಂತೆ ಡಿಕೆಶಿ ಕಮಿಷನ್ ಕೇಳಿದ್ದಾರೆ. ಬೇಕಿದ್ದರೆ ಅವರು ನಂಬಿರುವ ಅಜ್ಜಯ್ಯನ ಮಠಕ್ಕೆ (Ajjayya Mutt) ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಸೋಮವಾರ (ಆಗಸ್ಟ್ -07) ಗುತ್ತಿಗೆದಾರರ ಸಂಘದವರು (Contractors Association) ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಬಿಎಂಪಿ ವತಿಯಿಂದ 2 ವರ್ಷಗಳಿಂದ ಬಿಲ್ ಪಾವತಿಯಾಗಿಲ್ಲ. ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ (BBMP Commissioner Tushar Girinath) ಅವರು ಬೇಕೆಂದೇ ಬಿಲ್ ಅನ್ನು ತಡೆ ಹಿಡಿದಿದ್ದಾರೆ ಎಂದು ಆಕ್ರೋಶವನ್ನು ಹೊರಹಾಕಿದ್ದರು. ಅಲ್ಲದೆ, ಸಿಎಂ ಸಿದ್ದರಾಮಯ್ಯ ಹೇಳಿದರೂ ಅವರು ಕೇಳುತ್ತಿಲ್ಲ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಗಂಭೀರ ಆರೋಪವನ್ನು ಮಾಡಿದ್ದರು. ಸುದ್ದಿಗೋಷ್ಠಿ ಮುಗಿದ ಬಳಿಕ ಸಂಘದ ಸದಸ್ಯರು ಅಧ್ಯಕ್ಷರನ್ನು ಪ್ರಶ್ನೆ ಮಾಡಿದ್ದು, ಡಿ.ಕೆ. ಶಿವಕುಮಾರ್ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಈಗ ಈ ವಿಡಿಯೊ ಸಖತ್ ವೈರಲ್ (Video Viral) ಆಗಿದೆ.
ಇದನ್ನೂ ಓದಿ:HD Devegowda: ದೇವೇಗೌಡರು ಇಂದು ರಾಜ್ಯಸಭೆ ಕಲಾಪಕ್ಕೆ ಗೈರು, ಅನಾರೋಗ್ಯ ಕಾರಣ
ಗುತ್ತಿಗೆದಾರರ ಆರೋಪ ಏನು?
ನೀವು ಬರೀ ಬಿಬಿಎಂಪಿ ಆಯುಕ್ತರ ಹೆಸರನ್ನಷ್ಟೇ ಏಕೆ ಹೇಳಿದ್ದೀರಿ? ಇರುವ ಸತ್ಯವನ್ನು ಹೇಳಬೇಕು ತಾನೇ? ಬಿಬಿಎಂಪಿ ಅಧಿಕಾರಿಗಳು ಏನು ಮಾಡುತ್ತಾರೆ? ಮೇಲೆ ಆಡಳಿತ ನಡೆಸುವವರು ಬಿಲ್ ಅನ್ನು ತಡೆ ಹಿಡಿದಿದ್ದಾರೆ. ಈಗ ಹಣವನ್ನು ತಡೆ ಹಿಡಿದವರು (ಡಿ.ಕೆ. ಶಿವಕುಮಾರ್) ನಂಬಿರುವ ಅಜ್ಜಯ್ಯನ ಮಠಕ್ಕೆ ಬರಲಿ. ನಾವೂ ಅಲ್ಲಿಗೆ ಹೋಗೋಣ. ತಾವು ದುಡ್ಡು ಕೇಳಿಲ್ಲ ಎಂದು ಅವರು ಅಲ್ಲಿಯೇ ಪ್ರಮಾಣ ಮಾಡಲಿ, ಕೇಳಿದ್ದಾರೆ ಎಂದು ನಾವು ಪ್ರಮಾಣ ಮಾಡುತ್ತೇವೆ ಎಂದು ನೊಂದ ಗುತ್ತಿಗೆದಾರರೊಬ್ಬರು ಅಧ್ಯಕ್ಷರ ಬಳಿ ಆಕ್ರೋಶವನ್ನು ಹೊರಹಾಕಿದ್ದರು. ನಾವೆಲ್ಲ ಒಗ್ಗಟ್ಟಾಗಿ ಇರಬೇಕು. ನಾವು ಕೇಳದೆ ಇನ್ಯಾರು ಪ್ರಶ್ನೆ ಕೇಳಬೇಕು? ಈಗಾಗಲೇ ನಾವು ಬೀದಿಗೆ ಬಿದ್ದಿದ್ದೇವೆ ಎಂದು ಅವರು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದರು.
ಏನು ಮಾಡುತ್ತಾರೋ ನೋಡೋಣ: ಡಿ.ಕೆ. ಶಿವಕುಮಾರ್
ಕಂಟ್ರಾಕ್ಟರ್ ಸುದ್ದಿಗೋಷ್ಠಿ ನಡೆಸಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಡಿ.ಕೆ. ಶಿವಕುಮಾರ್, ಬಹಳ ಜನರ ಸ್ಟಿಂಗ್ ಆಪರೇಷನ್ ಆಗಬೇಕು. ಕಂಟ್ರಾಕ್ಟರ್ ಕಮಿಷನ್ ಹೇಳಿಕೆಯನ್ನು ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ಏನು ಮಾಡ್ತಾರೆ ನೋಡೋಣ ಎಂದು ಹೇಳಿದ್ದರು.
ಗುತ್ತಿಗೆದಾರರು ಹೇಳಿದ್ದೇನು?
ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ, ಬಿಬಿಎಂಪಿಯು 26 ತಿಂಗಳಿನಿಂದ ಬಾಕಿ ಬಿಲ್ ಉಳಿಸಿಕೊಂಡಿದೆ. ಪಾಲಿಕೆಯ ಮುಖ್ಯ ಆಯುಕ್ತರು ಬಿಲ್ ಪಾವತಿಗೆ ಮೀನಮೇಷ ಎಣಿಸುತ್ತಿದ್ದಾರೆ. ಬಿಲ್ ಬಾಕಿ ಉಳಿಸಿಕೊಂಡು, ಈಗ ತನಿಖೆ ಆಗಬೇಕು ಅಂತಿದ್ದಾರೆ. ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸಿಎಂ ಕೂಡ ಬಿಲ್ ಹಣ ಬಿಡುಗಡೆಗೆ ಸೂಚಿಸಿದ್ದಾರೆ. ಆದರೆ, ಬಿಬಿಎಂಪಿ ಮುಖ್ಯ ಆಯುಕ್ತರು ಸ್ಪಂದಿಸುತ್ತಿಲ್ಲ. ಈಗಾಗಲೇ ಹಲವರು ದಯಾಮರಣ ಕೋರಿದ್ದಾರೆ. ಮಂಗಳೂರಿನಲ್ಲಿ ಗುತ್ತಿಗೆದಾರ, ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಪಾಲಿಕೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾ? ಎಂದು ಪ್ರಶ್ನಿಸಿದ್ದರು.
ಕಾಮಗಾರಿಗಳ ಸಂಬಂಧ ಎಲ್ಲ ಕಡೆಯಿಂದ ರಿಪೋರ್ಟ್ ಕೊಟ್ಟಿದ್ದಾರೆ. ಅಧಿಕಾರಿಗಳು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಪಾಲಿಕೆ ಆಯುಕ್ತರು ಮಾತ್ರ ಗಮನಹರಿಸುತ್ತಿಲ್ಲ. ನಾವೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕಾ? ಗುತ್ತಿಗೆದಾರರು ಕೆಲಸ ಮಾಡದೇ ರಿಪೋರ್ಟ್ ಕೊಟ್ಟಿದ್ದಾರಾ? ಗುತ್ತಿಗೆದಾರರು ಸಾಯುತ್ತೇವೆ ಅಂದರೆ ಸಾಯಿರಿ ಅಂತಾರೆ. ಆಯುಕ್ತರಿಗೆ ಸಾಯಿರಿ ಅಂತಾ ಹೇಳೋಕೆ ಅಧಿಕಾರ ಯಾರು ಕೊಟ್ಟರು? ನಾವೆಲ್ಲ ಕಳ್ಳರು ಅಂತಾದರೆ, ಏಕೆ ನಮ್ಮನ್ನು ಇಟ್ಟುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: HD Kumaraswamy : ಮತ್ತೆ ವಿದೇಶಕ್ಕೆ ಹಾರಿದ ಎಚ್.ಡಿ ಕುಮಾರಸ್ವಾಮಿ; ಈ ಸಾರಿ ಅವರ ಜತೆ ಹೋಗಿದ್ದು ಬೇರೆ ಫ್ಯಾಮಿಲಿ!
ತುಷಾರ್ ಗಿರಿನಾಥ್ ಅವರೇ, ನಿಮಗೆ ಮಾನವೀಯತೆ ಇಲ್ವಾ? ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದವರಲ್ಲ. ಕಾಮಗಾರಿ ನಿರ್ವಹಿಸೋದು ನಮ್ಮ ಕೆಲಸ. ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು. ಬಾಕಿ ಇರುವ ಹಣವನ್ನು ಪಾವತಿ ಮಾಡಬೇಕು. ನಾವು ರಾಷ್ಟ್ರಪತಿಗಳಿಗೆ, ಪ್ರಧಾನಮಂತ್ರಿ, ಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆದಿದ್ದೇವೆ. ನಾವು ಆತ್ಮಹತ್ಯೆ ಮಾಡಿಕೊಳ್ಳುವವರೆಗೆ ಕಾಯಬೇಡಿ ಎಂದು ಆಗ್ರಹಿಸಿದ್ದರು.