ರಾಮನಗರ: ತಾಲೂಕಿಗೆ ಇನ್ನೂ ಅಭ್ಯರ್ಥಿ ಯಾರು ಎಂಬುದನ್ನು ತೀರ್ಮಾನಿಸಿಲ್ಲ. ಯಾರೇ ಅಭ್ಯರ್ಥಿ ಆದರೂ ನಾನೇ ಅಭ್ಯರ್ಥಿ ಎಂದು ಭಾವಿಸಿ ಚುನಾವಣೆಯಲ್ಲಿ (Karnataka Election 2023) ಗೆಲ್ಲಿಸಬೇಕು. ಇನ್ನೆರಡು ವರ್ಷ ಆದ ಮೇಲೆ ರಾಮನಗರ ಎತ್ತರಕ್ಕೆ ಹೋಗುತ್ತದೆ. ಇಲ್ಲವೆಂದರೆ ನನ್ನ ಹೆಸರು ಡಿ.ಕೆ. ಶಿವಕುಮಾರ್ ಅಂತ ಕರೆಯಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಮನಗರ ತಾಲೂಕಿನ ಸುಗ್ಗನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ವಿಧಾನ ಸೌಧ ಕಟ್ಟಿದವರ ಜಿಲ್ಲೆ ರಾಮನಗರವಾಗಿದೆ. ಹೆಸರು ಮಾತ್ರ ರಾಮನಗರ ಅಷ್ಟೇ, ಇದಕ್ಕೆ ಬೆಂಗಳೂರು ದಕ್ಷಿಣ ಎಂದು ಕರೆಯಬೇಕಿತ್ತು. ನಮ್ಮ ಅಧಿಕಾರ ಇರುವುದು ನಿಮ್ಮ ಸೇವೆ ಮಾಡಲು, ನನಗೆ ಒಂದು ಅವಕಾಶ ಮಾಡಿಕೊಡಿ. ನಾನು ಕೆಲಸ ಮಾಡಲಿಲ್ಲ ಎಂದರೆ ಕತ್ತಿನ ಪಟ್ಟಿ ಹಿಡಿದು ಕೇಳಿ ಎಂದು ಹೇಳಿದರು.
ರಾಮನಗರದಲ್ಲಿ ಬದಲಾವಣೆ ತರಬೇಕು. ಈ ಹಿಂದೆ ಎಲ್ಲ ಚುನಾವಣೆಯಲ್ಲೂ ಸೋತಿದ್ದೇವೆ. ಗೌಡರನ್ನು ಪ್ರಧಾನ ಮಂತ್ರಿ, ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದೀರಿ. ಅವರು ಪ್ರತ್ಯೇಕ ಜಿಲ್ಲೆ ಮಾಡುವುದು ಬಿಟ್ಟು ಬೇರೆ ಏನೂ ಮಾಡಿಲ್ಲ. ಗೌಡರು, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿಗೆ ಅವಕಾಶ ಕೊಟ್ಟಿದ್ದೀರಿ, ಅದನ್ನು ನಾವು ಸ್ವೀಕರಿದ್ದೇವೆ. ಈಗ ಜಾತಿ, ಧರ್ಮ ಎಲ್ಲ ಹೋಗಿದೆ. ಈಗ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಕೇಳುತ್ತಾರೆ. ಅಶ್ವತ್ಥನಾರಾಯಣ ಜಿಲ್ಲೆಯನ್ನು ಕ್ಲೀನ್ ಮಾಡುತ್ತೇವೆ ಎಂದು ಬಂದಿದ್ದ. ಜಿಲ್ಲೆಯಲ್ಲಿ ಲಂಚ ಪಡೆಯುವುದು ನಿಂತಿದೆಯಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | JDS ticket : ಜೆಡಿಎಸ್ ಟಿಕೆಟ್ ಹಂಚಿಕೆ ಗೊಂದಲ, ಕುಮಾರಸ್ವಾಮಿ ಕಾರಿಗೆ ಕಾರ್ಯಕರ್ತರ ಮುತ್ತಿಗೆ
ನಾವು ಅಧಿಕಾರ ಇಲ್ಲವೆಂದರೂ ಏನು ಮಾಡಿದ್ದೇವೆ ಎಂಬುದು ಗೊತ್ತಾಗಬೇಕು. ಕನಕಪುರದಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ನರೇಗಾ ಯೋಜನೆ ಮಾಡಿದ್ದೇವೆ. ರಾಮನಗರದಲ್ಲಿ ಯಾಕೆ ಮಾಡಿಲ್ಲ? ಬಿಜೆಪಿ ಸೋಮಣ್ಣನ ಕೈ, ಕಾಲು ಹಿಡಿದು ಕನಕಪುರದಲ್ಲಿ ಬಡವರಿಗೆ ಸೈಟ್ ಕೊಡಿಸಿದ್ದೇನೆ. ಈ ರೀತಿ ಜೆಡಿಎಸ್ ಶಾಸಕರು ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ನಾವು ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮ ಮಾಡಿದ ಮೇಲೆ ಬಿಜೆಪಿಯವರು ನಮ್ಮ ಕಾರ್ಯಕ್ರಮದ ರೀತಿಯಲ್ಲಿ ಮಾಡುತ್ತಿದ್ದಾರೆ. ಇನ್ನು 3 ತಿಂಗಳಲ್ಲಿ ನಮ್ಮ ಸರ್ಕಾರ ಬರುತ್ತದೆ. ಆಗ ನಾನು ನಿಮಗೆ ಟ್ರಾನ್ಸ್‌ಫಾರ್ಮರ್ ಕೊಡುತ್ತೇನೆ. ಬೇರೆಯವರಿಗೆ ವಿದ್ಯುತ್ ಮಾರುವುದು ಬೇಡ. ನಮ್ಮ ಜನಕ್ಕೆ ಕೊಡಿ ಎಂಬುದು ನನ್ನ ವಾದ. ನಾನು ಗ್ಯಾರಂಟಿ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರಲಿಲ್ಲವೆಂದರೆ ನಿಮ್ಮ ಬಳಿ ಮತ ಕೇಳಲೂ ಬರುವುದಿಲ್ಲ ಎಂದು ಹೇಳಿದರು.
ರಾಮನಗರದಿಂದ ಸಂಸದ ಡಿ.ಕೆ.ಸುರೇಶ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಹೈಕಮಾಂಡ್‌ನಲ್ಲೂ ಚರ್ಚೆ ಆಗಿರುವುದು ನಿಜ. ಬಹಳ ದಿನದಿಂದ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಡಿ.ಕೆ.ಸುರೇಶ್ ಯಾವತ್ತೂ ಸ್ಟೇಜ್ ಹತ್ತಿರಲಿಲ್ಲ, ಮೈಕ್ ಹಿಡಿದಿರಲಿಲ್ಲ. ಈ ಹಿಂದೆ ಸೋನಿಯಾಗಾಂಧಿ ಅವರು ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದರು. ಯಾವ ಸಂದರ್ಭದಲ್ಲಿ ಏನು ಆಗಬೇಕೋ ಅದು ಆಗುತ್ತದೆ ಎಂದು ಪರೋಕ್ಷವಾಗಿ ಡಿ.ಕೆ.ಸುರೇಶ್ ಸ್ಪರ್ಧೆ ಬಗ್ಗೆ ಸುಳಿವು ನೀಡಿದರು.
ಮಾಜಿ ಸಂಸದ ಧ್ರುವನಾರಾಯಣ್ ಪುತ್ರ ದರ್ಶನ್ ಅವರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಜಡ್ಜ್. ನಾನು ಧ್ರುವನಾರಾಯಣ್ ಪುತ್ರ ದರ್ಶನ ಪರ ವಕೀಲ. ಧ್ರುವನಾರಾಯಣ್ ಅಂತಿಮ ದರ್ಶನ ಮಾಡಲು ಸ್ವತಃ ಮಲ್ಲಿಕಾರ್ಜುನ ಖರ್ಗೆ ಬಂದಿದ್ದರು. ಅಭಿಮಾನಿಗಳ ಆಕ್ರಂದನ ನೋಡಿದ್ದು, ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
ಇದನ್ನೂ ಓದಿ | BY Vijayendra: ಸಿ.ಟಿ. ರವಿ ಹೇಳಿದ್ದು ಸರಿ ಇದೆ; ವಿಜಯೇಂದ್ರನಿಗಾದರೂ ಚುನಾವಣಾ ಸಮಿತಿಯಿಂದಲೇ ಟಿಕೆಟ್ ತೀರ್ಮಾನ: ಬಿಎಸ್‌ವೈ
ಹೆದ್ದಾರಿ ಕಾಮಗಾರಿ ಪೂರ್ಣ ಮಾಡಿ ಟೋಲ್ ಸಂಗ್ರಹ ಆರಂಭಿಸಲಿ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್ ಕೇಂದ್ರಗಳ ಆರಂಭದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, ಈ ಸರ್ಕಾರ ಜನಸಾಮಾನ್ಯರ ಪಿಕ್ ಪಾಕೆಟ್ ಮಾಡುತ್ತಿದೆ. ಕಾಮಗಾರಿ ಪೂರ್ಣ ಮಾಡಿ ಟೋಲ್ ಆರಂಭಿಸಲಿ ಎಂದು ಒತ್ತಾಯಿಸಿದರು.
ನಾನು ಕೂಡ ಟೋಲ್ ಕಟ್ಟಿ ಬಂದಿದ್ದೇನೆ. ನನ್ನ ಕಾರಿನಲ್ಲಿ ಫಾಸ್ಟ್ ಟ್ಯಾಗ್ ಇರಲಿಲ್ಲ. 500 ರೂಪಾಯಿ ಕೊಟ್ಟಿದ್ದಕ್ಕೆ 230 ರೂಪಾಯಿ ವಾಪಸ್ ಕೊಟ್ಟಿದ್ದಾರೆ. ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನನ್ನನ್ನೂ ವಶಕ್ಕೆ ತೆಗೆದುಕೊಳ್ಳುತ್ತಾರೆ ಎಂದು ಟೋಲ್ ಕಟ್ಟಿ ಬಂದಿದ್ದೇನೆ ಎಂದ ಅವರು, ಕೋವಿಡ್ ಸಮಯದಲ್ಲಿ ನನ್ನ ಮೇಲೆ ಸಾಕಷ್ಟು ಕೇಸ್ ಹಾಕಿದರು. ಈಗಲೂ ನಾನು ಕೋರ್ಟ್‌ಗೆ ಅಲೆಯುತ್ತಿದ್ದೇನೆ ಎಂದರು.