Site icon Vistara News

Karnataka Election: ಡಿಕೆಶಿ, ಸಿದ್ದರಾಮಯ್ಯ ಸಿಎಂ ಆಗಲು ನಂಬರ‍್ರೇ ಬಂದಿಲ್ಲ; ಈ ಬಾರಿ ಬಿಜೆಪಿಯವರೇ ಸಿಎಂ: ಅಮಿತ್‌ ಶಾ

Amit Shah talks at BJP rally in Bagalkot. Karnataka Election updates.

ಬಾಗಲಕೋಟೆ/ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D K Shivakumar) ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿ ಆಗಲು ಗುದ್ದಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಆಗಲು ನಿಮ್ಮ ನಂಬರ‍್ರೇ ಬಂದಿಲ್ಲ. ಈ ಬಾರಿ‌ಯ ಚುನಾವಣೆಯಲ್ಲಿ (Karnataka Election) ಮತ್ತೆ ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿ ಆಗುತ್ತಾರೆ. ಇದಕ್ಕಾಗಿ ನೀವು ಏಕೆ ಕಿತ್ತಾಡುತ್ತೀರ? ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದರು.

ರಬಕವಿ ಪಟ್ಟಣದ ಎಂ.ವಿ ಪಟ್ಟಣ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಬೃಹತ್‌ ಸಭೆಯಲ್ಲಿ ಮಾತನಾಡಿದ ಶಾ, ಈ ಬಾರಿಯೂ ಜನರು ಡಬಲ್ ಇಂಜಿನ್ ಸರ್ಕಾರಕ್ಕೆ ಮತ ನೀಡುತ್ತಾರೆ. ನಾವು ಮಾಡಿದ ಕೆಲಸಗಳಲ್ಲಿ ಕೇವಲ ಶೇಕಡಾ 10ರಷ್ಟು ಮಾಡಿದ್ದರೆ, ಇಂದು ನೀವು ಮತ ಕೇಳಲು ಬರುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ಕಾಂಗ್ರೆಸ್‌ನವರಿಗೆ ತಿವಿದರು. ಅಲ್ಲದೆ, 2024ರಲ್ಲಿ ಮತ್ತೆ ಮೋದಿ ನೇತೃತ್ವದ ಸರ್ಕಾರವನ್ನು ರಚಿಸಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಮನವಿ‌ ಮಾಡಿದರು.

ತೇರದಾಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಸೇರಿರುವ ಜನ

ಯಾರ ಮೀಸಲಾತಿ ತೆಗೆಯುತ್ತೀರಾ?: ಡಿಕೆಶಿಗೆ ಶಾ ಪ್ರಶ್ನೆ

ಕಾಂಗ್ರೆಸ್ ಸರ್ಕಾರ ಬಂದರೆ, ರಿವರ್ಸ್ ಗೇರ್ ಸರ್ಕಾರ ಆಗುತ್ತದೆ. ನನ್ನ ಈ ಮಾತನ್ನು ನೆನಪಿಟ್ಟುಕೊಳ್ಳಿ. ಯಾವುದೇ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೂರ್ಣ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತದೆ. ಕಾಂಗ್ರೆಸ್‌ನವರು ಪಿಎಫ್ಐ ಬ್ಯಾನ್ ಮಾಡುವ ಜರೂರತ್ತಿಲ್ಲ ಅಂತಾರೆ. ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣದ ಹಿಂದೆ ಬಿದ್ದಿದೆ. ಮುಸ್ಲಿಂ ಮೀಸಲಾತಿ ತೆಗೆದು ಎಸ್.ಸಿ, ಎಸ್.ಟಿ, ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ಕಲ್ಪಿಸಿದ್ದೇವೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ಮೀಸಲಾತಿಯನ್ನು ರದ್ದು ಮಾಡುತ್ತೇನೆ ಎಂದು ಹೇಳುತ್ತಾರೆ. ನಾಲ್ಕು ಪರ್ಸೆಂಟ್ ಮೀಸಲಾತಿಯಲ್ಲಿ ಯಾರ ಮೀಸಲಾತಿಯನ್ನು ಕಡಿಮೆ ಮಾಡ್ತೀರಾ? ಲಿಂಗಾಯತರದ್ದಾ? ಒಕ್ಕಲಿಗರದ್ದಾ? ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: Karnataka Election: ಧರ್ಮಾಧಾರಿತ ಮೀಸಲಾತಿ ತಪ್ಪು ಎಂದ ಶೋಭಾ ಕರಂದ್ಲಾಜೆ; ಇದು ಅಜ್ಞಾನದ ಮಾತು ಎಂದ ದಿನೇಶ್‌ ಗುಂಡೂರಾವ್

ಶೆಟ್ಟರ್‌ಗೆ ಕುಟುಕಿದ ಅಮಿತ್‌ ಶಾ

ಇತ್ತೀಚೆಗೆ ನಮ್ಮ ನಾಯಕರೊಬ್ಬರು ಕಾಂಗ್ರೆಸ್‌ಗೆ ಹೋಗಿದ್ದಾರೆ. ಅಲ್ಲಿ ಹೋದರೆ ಚಾನ್ಸ್ ಆಗುತ್ತೆ ಎಂದು ಹೋಗಿದ್ದಾರೆ ಎಂದು ಪರೋಕ್ಷವಾಗಿ ಜಗದೀಶ್‌ ಶೆಟ್ಟರ್‌ ಕಾಲೆಳೆದ ಅಮಿತ್‌ ಶಾ, ಲಿಂಗಾಯತರಿಗೆ ಅವಮಾನ ಮಾಡಿದ ಪಕ್ಷಕ್ಕೆ ಹೋಗಿದ್ದೀರಾ? ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಸೇರಿ ಸರ್ಕಾರವನ್ನು ಕೆಡವಿದರು. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಮತ ಹಾಕಬೇಡಿ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಪಿಎಫ್ಐ ಅನ್ನು ಬ್ಯಾನ್ ಮಾಡಿದರು. ಕಾಶ್ಮೀರವನ್ನು ಭಾರತದ ಸ್ವತ್ತಾಗಿ‌ ಮಾಡಿದರು. ಅಲ್ಲಿ ರಕ್ತದ ಹೊಳೆ ಹರಿಯುತ್ತದೆ ಎಂದು ಕಾಂಗ್ರೆಸ್‌ನವರು, ಮಮತಾ ಬ್ಯಾನರ್ಜಿ ಸೇರಿದಂತೆ ಕೆಲವು ಎಡ ನಾಯಕರು ಕಾವ್… ಕಾವ್ ಎಂದು ಕೂಗಾಡಿದರು. ಆದರೆ, ಏನೂ ಆಗಲಿಲ್ಲ ಎಂದು ಶಾ ಹೇಳಿದರು.

ಪ್ರಾಮಾಣಿಕ, ಅಭಿವೃದ್ಧಿ ಪರ ಸರ್ಕಾರ ರಚನೆ

ಅಲ್ಲಮಪ್ರಭು, ಬಸವಣ್ಣ ಅವ್ರ ತತ್ವಗಳನ್ನು ಲೋಕಕ್ಕೆ ಸಾರಿದವರು ಅಲ್ಲಮಪ್ರಭು. ಜೀವನ ಪೂರ್ತಿ ಬಸವಣ್ಣನವರ ವಚನಗಳನ್ನು ಹೇಳುತ್ತಾ ಜೀವನ ಸಾಗಿಸಿದ್ದರು. ನರೇಂದ್ರ ಮೋದಿ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಬೇಕಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲಿದೆ. ಇದು ಕರ್ನಾಟಕದ ಭವಿಷ್ಯವನ್ನು ಮೋದಿಯವರ ಕೈಯಲ್ಲಿ ಕೊಡುವ ಚುನಾವಣೆಯಾಗಿದೆ. ಇದು ನವ ಕರ್ನಾಟಕದ ಚುನಾವಣೆಯಾಗಿದ್ದು, ಪ್ರಾಮಾಣಿಕ ಹಾಗೂ ಅಭಿವೃದ್ಧಿ ಪರ ಸರ್ಕಾರ ಬರಲಿದೆ ಎಂದು ಅಮಿತ್‌ ಶಾ ಹೇಳಿದರು.

ಇದನ್ನೂ ಓದಿ: Muslim quota issue : ಮುಸ್ಲಿಂ ಮೀಸಲು ಬಗ್ಗೆ ಮೇ 9ರವರೆಗೆ ಯಾವುದೇ ನಿರ್ಧಾರ ಇಲ್ಲ ಎಂದ ಸಿಎಂ ಬೊಮ್ಮಾಯಿ

ಮೋದಿಯವರು ರಾಮ ಮಂದಿರದ ಉದ್ಘಾಟನೆ ಮಾಡಲಿದ್ದಾರೆ. ನೀವೆಲ್ಲ ಟಿಕೆಟ್ ತೆಗೆಸಿ, ರಾಮಮಂದಿರದ ದರ್ಶನ ಪಡೆಯಿರಿ. ಮಹದಾಯಿ ಯೋಜನೆಯನ್ನು ಬಿಜೆಪಿ ಸರ್ಕಾರ ಮಾಡಿದೆ. ನಾಲ್ಕು ವರ್ಷದಲ್ಲಿ ಅನೇಕ ಕೆಲಸಗಳನ್ನು ಮಾಡಿದೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕೆಲಸ, ಕಾರ್ಯಗಳನ್ನು ಮಾಡಿದೆ. ನೇಕಾರರಿಗೆ 2 ಲಕ್ಷದಿಂದ 5 ಲಕ್ಷದವರೆಗೆ ಶೇಕಡಾ 3 ಪರ್ಸೆಂಟ್‌ನಲ್ಲಿ ಸಾಲ ನೀಡಲಾಗುತ್ತಿದೆ. 4 ಲಕ್ಷ ಬಡ ಕುಟುಂಬಗಳಿಗೆ ಮನೆ ನೀಡಲಾಗಿದೆ. 46 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಪರಿಹಾರವನ್ನು ನೀಡಲಾಗುತ್ತಿದೆ. ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿದೆ ಎಂದು ಹೇಳಿದರು.

ಜೈನ ಬಸದಿಯಲ್ಲಿ ಪೂಜೆ

ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅಮಿತ್‌ ಶಾ ಅವರು, ಅಲ್ಲಿಂದ ಜೈನ ಬಸದಿಗೆ ತೆರಳಿದರು. ಸುಮಾರು 20 ನಿಮಿಷಗಳ ಕಾಲ ಜೈನ ಬಸದಿಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ರಬಕವಿ ಬನಹಟ್ಟಿ ನಗರಕ್ಕೆ ಆಗಮಿಸಿದ ಅಮಿತ್ ಶಾ ತೇರದಾಳ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಪರ ಚುನಾವಣೆ ಪ್ರಚಾರ ಮಾಡಿದರು.

ಕಾನ್ವೆ ಬಿಟ್ಟು ಜನರತ್ತ ಬಂದ ಶಾ

ಹೆಲಿಪ್ಯಾಡ್‌ನಿಂದ ಜೈನ್ ಬಸದಿಗೆ ಹೊರಟಿದ್ದ ಅಮಿತ್ ಶಾ ಅವರು, ಜನರನ್ನು ನೋಡಿ ಕಾನ್ವೆ ಮಾರ್ಗ ಬದಲಿಸಿ ಸೀದಾ ಜನರ ಬಳಿಗೆ ತೆರಳಿದರು. ರಸ್ತೆ ಉದ್ದಕ್ಕೂ ನಿಂತಿದ್ದ ಜನಸ್ತೋಮವನ್ನು ಕಂಡು ಅವರತ್ತ ತೆರಳಿ ಕೈಬೀಸಿದರು. ಈ ಮೂಲಕ ದಿಢೀರ್‌ ರೋಡ್‌ ಶೋ ನಡೆಸಿದರು.

ವಿಜಯಪುರದಲ್ಲಿ ಶಾ ಮೋಡಿ

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಏರ್ಪಡಿಸಲಾಗಿದ್ದ ಬೃಹತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್‌ ಶಾ, ಮೇ 10ರಂದು ಸೋಮನಗೌಡ ಪಾಟೀಲ್ ಸಾಸನೂರ ಅವರನ್ನು ಚುನಾಯಿಸಬೇಕು. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಬರುವಂತೆ ಮಾಡಬೇಕು. ಹೊಸ ಕರ್ನಾಟಕದ ವಿಶ್ವಾಸ, ಹೊಸ ಕರ್ನಾಟಕದ ಕನಸನ್ನು ಕೇವಲ ಮೋದಿ ಮಾತ್ರ ನನಸು ಮಾಡಲು ಸಾಧ್ಯ ಎಂದು ಹೇಳಿದರು.

ಪಿಎಫ್ಐ ಬ್ಯಾನ್ ತೆಗೆಯಲು ಬಿಡುವುದಿಲ್ಲ

ಕರ್ನಾಟಕದಲ್ಲಿ ಪಾಪ್ಯುಲರ್‌ ಫ್ರಂಟ್‌ನವರು ಹಿಂಸಾಚಾರ ಮಾಡುತ್ತಿದ್ದರು. ಅವರನ್ನು ಬ್ಯಾನ್ ಮಾಡುವ ಮೂಲಕ ಅದನ್ನು ತಡೆದಿದ್ದೇವೆ. ಆದರೆ, ಸಿದ್ದರಾಮಯ್ಯ ಅವರು ಪಿಎಫ್‌ಐ ಅವರನ್ನು ಬಿಡುಗಡೆ ಮಾಡಿದ್ದರು. ಕಾಂಗ್ರೆಸ್ ಬಂದರೆ ಪಿಎಫ್ಐ ಬ್ಯಾನ್ ಅನ್ನು ಹಿಂಪಡೆಯುತ್ತಾರೆ. ಅದು ಬೇಕಾ? ಪಿಎಫ್ಐನಿಂದ ಕರ್ನಾಟಕಕ್ಕೆ ಕಂಟಕ ಇದೆ. ಯಾರೂ ಚಿಂತಿಸಬೇಡಿ, ಪಿಎಫ್ಐ ಬ್ಯಾನ್ ತೆಗೆಯಲು ಬಿಡುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: IPL 2023 : ಐಪಿಎಲ್​ ಟಿಕೆಟ್​ ಕೊಳ್ಳುವಾಗ ಎಚ್ಚರ; ನಕಲಿ ಟಿಕೆಟ್​ ಮಾರಾಟ ಜಾಲ ಜೋರಾಗಿದೆ!

ಸರ್ಜಿಕಲ್‌ ಸ್ಟ್ರೈಕ್ ಮಾಡಿಸಿದ್ದ ಮೋದಿ

ಮನಮೋಹನ ಸಿಂಗ್ ಸರ್ಕಾರ ಇದ್ದಾಗ ಪಾಕಿಸ್ತಾನದವರು ನಮ್ಮ ಯೋಧರ ಮೇಲೆ ದಾಳಿ ಮಾಡುತ್ತಿದ್ದರು. ಅವರನ್ನು ತಡೆಯಲು ಅವರು ಧೈರ್ಯ ಮಾಡಿರಲಿಲ್ಲ. ಆದರೆ, ನಮ್ಮ ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ಅವರ ಮನೆಗೆ ನುಗ್ಗಿ ಸರ್ಜಿಕಲ್‌ ಸ್ಟ್ರೈಕ್ ಮಾಡಿ ಹೊಡೆದರು. ಇದಕ್ಕೆಲ್ಲ ರಾಹುಲ್ ಗಾಂಧಿ ಪುರಾವೆ ಕೇಳುತ್ತಾರೆ. ಇಷ್ಟೆಲ್ಲ‌ ಮಾಡಿದ್ದೇ ಕಣ್ಣ ಮುಂದೆ ಸಾಕ್ಷಿ‌ ಇದೆ ಎಂದು ಹೇಳಿದರು.

Exit mobile version