ಬೆಂಗಳೂರು: ಪ್ರಭಾವಿ ಅಪಾರ್ಟ್ಮೆಂಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊಸಕೆರೆಹಳ್ಳಿ ಕೆರೆ (Hosakerehalli Lake) ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ ಹಾಗೂ ಅನುಷ್ಠಾನಕ್ಕೆ ತಂದ ಎಲ್ಲ ಅಧಿಕಾರಿಗಳು, ಎಂಜಿನಿಯರ್‌ಗಳನ್ನು ಸೋಮವಾರ (ಜೂನ್ 5) ಸಂಜೆ ಒಳಗೆ ಸೇವೆಯಿಂದ ಅಮಾನತು ಮಾಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದರು.
ಈ ಕೆರೆ ಮಧ್ಯೆ ರಸ್ತೆ ನಿರ್ಮಾಣ ಮಾಡುವ ಐಡಿಯಾ ಕೊಟ್ಟವರು ಯಾರು? ಯೋಜನೆ ರೂಪಿಸಿದವರು ಯಾರು? ಅನುಷ್ಠಾನಕ್ಕೆ ತಂದವರು ಯಾರು? ಯಾಕಾಗಿ ಇದನ್ನು ಮಾಡಿದಿರಿ? ಯಾರಿಗೆ ಅನುಕೂಲ ಮಾಡಿಕೊಡಲು ಮಾಡಿದಿರಿ? ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದೀರಿ ಎಂದು ಶಿವಕುಮಾರ್ ಅವರು ಸಭೆಯಲ್ಲಿ ಪ್ರಶ್ನಿಸಿದರು.
ಅಧಿಕಾರಿಗಳು ಇದಕ್ಕೆ ಉತ್ತರಿಸಲು ತಡಬಡಾಯಿಸಿದರು. ತಕ್ಷಣವೇ ಉಪ ಮುಖ್ಯಮಂತ್ರಿಗಳು ಹೊಸಕೆರೆಹಳ್ಳಿ ಕೆರೆ ಭಾಗ ಮಾಡಿ ರಸ್ತೆ ನಿರ್ಮಾಣ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚನೆ ನೀಡಿದರು.
ಈ ಹಿನ್ನೆಲೆಯಲ್ಲಿ ಯೋಜನೆಗಳ ವಿಭಾಗದ ವಿಶೇಷ ಆಯುಕ್ತ ರವೀಂದ್ರ, ಪಾಲಿಕೆಯ ಮುಖ್ಯ ಪ್ರಧಾನ ಅಭಿಯಂತರ ಪ್ರಹ್ಲಾದ್ ತಲೆದಂಡ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈಜಿಪುರ ಮೇಲ್ಸೇತುವೆ ಶೀಘ್ರ ಪೂರ್ಣಗೊಳಿಸಲು ಆದೇಶ
ಈಜಿಪುರ ಮೇಲ್ಸೇತುವೆ ಯೋಜನೆಯನ್ನು ತಕ್ಷಣ ಪೂರ್ಣಗೊಳಿಸಬೇಕು. ಈ ಬಗ್ಗೆ ಅಗತ್ಯವಿರುವ ಆಡಳಿತಾತ್ಮಕ ನಿರ್ಣಯಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ಅವರು ತುಷಾರ್ ಗಿರಿನಾಥ್ ಅವರಿಗೆ ಸೂಚನೆ ಕೊಟ್ಟರು.
ಬೆಂಗಳೂರಿನ ಮುಂದಿನ 20 ವರ್ಷಗಳ ಅಗತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದರು. ಬೆಂಗಳೂರು ಬಗ್ಗೆ ದೂರದೃಷ್ಟಿ ಯೋಜನೆಗಳನ್ನು ರೂಪಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Budget 2023: ಜುಲೈ 7ಕ್ಕೆ ರಾಜ್ಯ ಬಜೆಟ್; ಸಿದ್ದರಾಮಯ್ಯ ಮುಂದಿರುವ ಸವಾಲೇನು?
ಬೆಂಗಳೂರಿನ ಕೆಲವೆಡೆ ಹೋರ್ಡಿಂಗ್ಸ್ ಇವೆ. ಇದಕ್ಕೆ ಅನುಮತಿ ಕೊಟ್ಟವರು ಯಾರು? ಒಂದೊಂದು ಪ್ರದೇಶಕ್ಕೆ ಒಂದೊಂದು ನೀತಿ ಹೇಗೆ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು. ಎಲ್ಲೆಡೆ ಅನ್ವಯ ಆಗುವಂತೆ ಸಾಮಾನ್ಯ ನೀತಿ ರೂಪಿಸುವಂತೆ ಇದೇ ವೇಳೆ ಡಿ.ಕೆ. ಶಿವಕುಮಾರ್ ಸೂಚಿಸಿದರು.