Site icon Vistara News

DK Shivakumar: ವೃದ್ಧೆಗೆ ಪಿಂಚಣಿ ಕೊಡಲು ಲಂಚ ಕೇಳಿದ ಅಧಿಕಾರಿ ಸಸ್ಪೆಂಡ್‌ಗೆ ಡಿಕೆಶಿ ಸೂಚನೆ

DK Shivakumar GOVERNMENT PROGRAMME

ಬೆಂಗಳೂರು: ವಿಧವಾ ವೇತನ ನೀಡಲು ವೃದ್ಧೆ ಬಳಿ 4 ಸಾವಿರ ರೂಪಾಯಿ ಲಂಚ ಕೇಳಿದ ಅಧಿಕಾರಿ ಕೂಡಲೇ ಕ್ರಮ ಕೈಗೊಳ್ಳುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಸ್ಥಳದಲ್ಲಿದ್ದ ಅಧಿಕಾರಿಗೆ ಸೂಚಿಸಿದರು. ಅಲ್ಲದೆ, ಸರ್ಕಾರಿ ಪ್ರೌಢಶಾಲೆಯನ್ನು ಕಟ್ಟಿಸಿಕೊಡಿ, ನಮ್ಮ ಏರಿಯಾ ಜನರಿಗೆ ಕುಡಿಯುವ ನೀರು, ಸ್ಮಶಾನಕ್ಕೆ ಜಾಗ ಬೇಕು, ಅಂಗನವಾಡಿ ಕಟ್ಟಡ ಬೇಕು, ಸಂಚಾರ ದಟ್ಟಣೆ, ಪಾರ್ಕ್ ಸಮಸ್ಯೆ ಬಗೆಹರಿಸುವ ಬಗ್ಗೆ ಜನರು ಸಾವಿರಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಎಲ್ಲವನ್ನೂ ಆದ್ಯತೆ ಮೇರೆಗೆ ಬಗೆಹರಿಸಿಕೊಡುವ ಬಗ್ಗೆ ಡಿಕೆಶಿ ಭರವಸೆ ನೀಡಿದ್ದಾರೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ, ಜರಗನಹಳ್ಳಿ ಸರ್ಕಾರಿ ಶಾಲಾ ಆಟದ ಮೈದಾನದಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಜನರ ಸಮಸ್ಯೆಗಳನ್ನು ಆಲಿಸಿದರು. ‌

ಅವಿರತವಾಗಿ ಅಹವಾಲು ಆಲಿಕೆ

ಒಂದಷ್ಟು ಹೊತ್ತು ವೇದಿಕೆಯ ಮೇಲೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಅಪಾರ ಸಂಖ್ಯೆಯಲ್ಲಿ ಜನರು ಅಹವಾಲು ಸಲ್ಲಿಸಲು ಬಂದಿದ್ದನ್ನು ಕಂಡು ವೇದಿಕೆಯಿಂದ ಇಳಿದು ಜನರು ಇದ್ದಲ್ಲಿಯೇ ತೆರಳಿ ಅವರ ಮನವಿಗಳನ್ನು ಆಲಿಸಿ ಪರಿಹಾರ ಸೂಚಿಸಿದರು. ಸುಮಾರು 5 ಗಂಟೆಯ ಹೊತ್ತಿಗೆ ಊಟಕ್ಕೆ ತೆರಳಿದ ಡಿಸಿಎಂ, ಆನಂತರ ಮತ್ತೆ ಅಹವಾಲು ಸ್ವೀಕರಿಸಲು ಪ್ರಾರಂಭಿಸಿದರು.

ಅಧಿಕಾರಿ ಸಸ್ಪೆಂಡ್‌ಗೆ ಸೂಚನೆ

ಗೊಟ್ಟಿಗೆರೆಯ ಮಣಿಯಮ್ಮ ಎಂಬುವವರು ತಾವು ಪಿಂಚಣಿ ಪಡೆಯಲು ಹೋಗಿದ್ದಾಗ ಅಧಿಕಾರಿಯೊಬ್ಬರು ಲಂಚ ಕೇಳಿದ್ದಾರೆ ಎಂದು ದೂರಿದರು. ಬನಶಂಕರಿ ತಾಲೂಕು ಕಚೇರಿಯಲ್ಲಿ ಪಿಂಚಣಿ ಪಡೆಯಲು ಹೋದಾಗ ಅಧಿಕಾರಿಗಳೇ ಏಜೆಂಟರ ಬಳಿ ಕಳುಹಿಸಿದ್ದಾರೆ. ಗೇಟ್ ಬಳಿ ಇರುವ ರಮೇಶ್ ಎಂಬುವವರು ಹಾಗೂ ಕೊಠಡಿ ಸಂಖ್ಯೆ 24ರಲ್ಲಿರುವ ಅಧಿಕಾರಿ ನಾಲ್ಕು ಸಾವಿರ ಲಂಚ ಕೇಳುತ್ತಾರೆ ಎಂದು ದೂರು ನೀಡಿದರು. ಆಗ ಬನಶಂಕರಿ ಉಪ ತಹಸೀಲ್ದಾರರನ್ನು ಕರೆದ ಶಿವಕುಮಾರ್ ಅವರು ಕೂಡಲೇ ಆ ಮಹಿಳೆಯಿಂದ ಲಂಚ ಕೇಳಿದ ಅಧಿಕಾರಿ ಮಾಹಿತಿ ಪಡೆದು ಆತನನ್ನು ಅಮಾನತು ಮಾಡಿ ಎಂದು ಸೂಚಿಸಿದರು.

ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಬದಲಾವಣೆಯಾಗಿದೆ

ಈ ಮೊದಲು ಯಾವ ಅಧಿಕಾರಿಗಳೂ ತಮ್ಮ ಹುದ್ದೆ ಮತ್ತು ಹೆಸರಿನ ಬೋರ್ಡನ್ನು ಹಾಕಿಕೊಳ್ಳುತ್ತಿರಲಿಲ್ಲ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಜೆ.ಪಿ.ನಗರದ ಸುರೇಂದ್ರನಾಥ್ ಅವರು ಸರ್ಕಾರ ಮತ್ತು ಡಿಸಿಎಂ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೋನಾ ಸಮಯದಲ್ಲಿ ಮುಚ್ಚಿರುವ ಉದ್ಯಾನಗಳನ್ನು ತೆರೆಯಿರಿ ಎಂದು ಸುರೇಂದ್ರನಾಥ ಅವರು ಮನವಿ ನೀಡಿದಾಗ, “ಉದ್ಯಾನಗಳನ್ನು ಸಾರ್ವಜನಿಕರ ಬಳಕೆಗೆ ತೆರೆಯಿರಿ” ಎಂದು ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದರು.

ಎಸ್‌ಡಿಎಂಸಿ ಸಮಿತಿಗಳಲ್ಲಿ ಎಲ್ಲರಿಗೂ ಅವಕಾಶ

ಎಸ್‌ಡಿಎಂಸಿ, ಸಿಡಿಸಿ ಸಮಿತಿಗಳಲ್ಲಿ ಕಳೆದ 15 ವರ್ಷಗಳಿಂದ ಒಂದೇ ಪಕ್ಷದವರು ಆಡಳಿತ ಮಾಡುತ್ತಿದ್ದಾರೆ. ನಮಗೂ ಅವಕಾಶ ನೀಡಿ ಎಂಬ ಬೊಮ್ಮನಹಳ್ಳಿಯ ಅನಿಲ್ ಅವರ ಮನವಿಗೆ “ಸಮಿತಿಗಳಲ್ಲಿ ಎಲ್ಲ ಸಾರ್ವಜನಿಕರಿಗೂ ಅವಕಾಶ ಕಲ್ಪಿಸುವಂತೆ ನೋಡಿಕೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

‘ರೋಗ- ರುಜಿನಗಳು, ಅಂಗವಿಕಲವಾಗಿರುವ ಪ್ರಾಣಿಗಳನ್ನು ಸಾಕಲು ಒಂದು ಜಾಗ ನೀಡಿ’ ಎಂದು ವೀಣಾ ಕೇಶವಮೂರ್ತಿ ಎಂಬುವರು ಮನವಿ ಸಲ್ಲಿಸಿದಾಗ “ಜಾಗ ನೀಡುವ ಕುರಿತು ಪರಿಶೀಲನೆ ಮಾಡಲಾಗುವುದು” ಎಂದು ಭರವಸೆ ನೀಡಿದರು. ಜರಗನಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಾಣ ಮಾಡಬೇಕು ಎಂದು ಸತ್ಯನಾರಾಯಣ ಅವರು ಮನವಿ ನೀಡಿದಾಗ “ಜಾಗ ಇದೆಯೇ” ಎಂದು ಡಿಸಿಎಂ ಕೇಳಿದರು. “ಪ್ರಸ್ತುತ ಕಾರ್ಯಕ್ರಮ ನಡೆಯುತ್ತಿರುವ ಜಾಗದಲ್ಲೇ ನಿರ್ಮಾಣ ಮಾಡಬಹುದು” ಎಂದು ಮನವಿದಾರರು ತಿಳಿಸಿದಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು “ಶೀಘ್ರದಲ್ಲಿಯೇ ಮಾಡೋಣ” ಎಂದರು.

ದಂಡ ಕಡಿಮೆ ಮಾಡಲು ಚಿಂತನೆ

ಈ ಭಾಗದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಖಾತೆ ಸಮಸ್ಯೆ, ತೆರಿಗೆ ಹೊರೆ ಹೆಚ್ಚಾಗಿದೆ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬಂದಿವೆ. ಜನರ ತೆರಿಗೆ ಹೊರೆ ಇಳಿಸುವ ವಿಚಾರದಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಪರಿಶೀಲಿಸಿ ಕಾನೂನಿಗೆ ತಿದ್ದುಪಡಿ ತರಬೇಕಾಗಿದೆ. 2020ರಲ್ಲಿ ಜಾರಿಗೆ ತಂದಿರುವ ಕಾಯ್ದೆಯಲ್ಲಿ ದುಪ್ಪಟ್ಟು ದಂಡ ಕಟ್ಟುವಂತಾಗಿದೆ. ಇದನ್ನು ಕಡಿಮೆ ಮಾಡಲು ಚರ್ಚೆ ಮಾಡುತ್ತಿದ್ದೇವೆ. ಈ ವಿಚಾರವಾಗಿ ಜನರಿಗೆ ಕಾಲಾವಕಾಶ ನೀಡಿ, ಪರಿಹಾರವನ್ನು ನೀಡಬೇಕಿದೆ.

ವಸತಿ ಪಡೆಯಲು ಹಣ ಕಟ್ಟಿದ್ದರು ಹಲವರಿಗೆ ಮನೆ ಸಿಕ್ಕಿಲ್ಲ. ಮತ್ತೆ ಕೆಲವರು ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಇವರೆಲ್ಲರನ್ನೂ ಭೇಟಿ ಮಾಡಿ ಅವರ ಅಹವಾಲು ಸ್ವೀಕಾರ ಮಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

110 ಹಳ್ಳಿಗಳ ಅಭಿವೃದ್ಧಿ ವಿಚಾರವಾಗಿ ಸ್ಥಳೀಯ ಶಾಸಕರು ಹಾಗೂ ಸಂಸದರು ಬೇಡಿಕೆ ಇಟ್ಟಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ಈ ಭಾಗದಲ್ಲಿ ಸಂಪರ್ಕ ಹಾಗೂ ಕುಡಿಯುವ ನೀರಿನ ಯೋಜನೆಗೆ ಆದ್ಯತೆ ನೀಡುತ್ತೇವೆ” ಎಂದು ತಿಳಿಸಿದರು.

ಇದನ್ನೂ ಓದಿ: ಹೆಚ್ಚುವರಿ ಡಿಸಿಎಂ ಹುದ್ದೆ ಬೇಕಾ? ಮೊದಲು ಲೋಕಸಭೆಗೆ ಸ್ಪರ್ಧಿಸಿ; 8 ಸಚಿವರಿಗೆ ಡಿಕೆಶಿ ಮಾಸ್ಟರ್‌ ಸ್ಟ್ರೋಕ್

ಧರ್ಮ ವಿಚಾರದಲ್ಲಿ ರಾಜಕೀಯ ಮಾಡಬಾರದು

ರಾಮ ಮಂದಿರ ವಿಚಾರದಲ್ಲಿ ರಾಜಕೀಯ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳು ಕೇಳಿದಾಗ, “ರಾಜಕೀಯದಲ್ಲಿ ಧರ್ಮ ಪಾಲನೆ ಮಾಡಬೇಕು, ಆದರೆ ಧರ್ಮದಲ್ಲಿ ರಾಜಕಾರಣ ಮಾಡಬಾರದು. ಈ ವಿಚಾರವನ್ನು ಹಿಂದೆಯೂ ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ” ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

Exit mobile version