ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಭ್ರಷ್ಟಾಚಾರ, ಕಮಿಷನ್ ದಂಧೆ, ವಾಮ ಮಾರ್ಗದ ಸರ್ಕಾರದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈಗ ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರತಿಕ್ರಿಯೆ ನೀಡಿ, ಅವರ ಖುಷಿಗೆ ಅವರು ಮಾತನಾಡಲಿ. ನಮ್ಮಣ್ಣ ಕುಮಾರಸ್ವಾಮಿ ಮಾತನ್ನು ನಾನು ಕೇಳುತ್ತಾ ಇರಬೇಕು ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಈಗೇನಿದ್ದರೂ ನಮ್ಮದು ಜನರ ಋಣ ತೀರಿಸುವ ಕೆಲಸ ಎಂದು ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ಖುಷಿ ಇದೆ ಮಾತನಾಡಲಿ. ಸಮಾಧಾನಕ್ಕೆ ಅವರು ಏನಾದರೂ ಮಾತನಾಡಿಕೊಳ್ಳಲಿ. ಪಾಪ ಅವರು ವಿಶ್ರಾಂತಿ ತೆಗೆದುಕೊಂಡು ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಾಯಾನೋ ಮಾಟಾನೋ
ವಾಮ ಮಾರ್ಗದಿಂದ ಅಧಿಕಾರಕ್ಕೆ ಕಾಂಗ್ರೆಸ್ ಬಂದಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಅವರ ಆಶೀರ್ವಾದ, ಮಾರ್ಗದರ್ಶನ ಬಹಳ ಮುಖ್ಯವಾಗುತ್ತದೆ. ಮಾಯಾನೋ, ಮಾಟಾನೋ, ಜೋತಿಷ್ಯನೋ, ಧರ್ಮನೋ ಅಥವಾ ನಮ್ಮ ಶ್ರಮಾನೋ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ತಿರುಗೇಟು ನೀಡಿದರು. ನಾವು ಅಧಿಕಾರ ವಹಿಸಿಕೊಂಡಿರುವುದರ ಹಿಂದೆ ಮೂರು ವರ್ಷದ ಶ್ರಮ ಇದೆ. ಕಾರ್ಯಕರ್ತರನ್ನು ಮಲಗಲು ನಾನು ಬಿಡಲಿಲ್ಲ. ಜನರು ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಈಗೇನಿದ್ದರೂ ಜನರ ಋಣ ತೀರಿಸುವ ಕೆಲಸ ನಮ್ಮದು. ಪಾಪ ಅವರಿಗೆ ಅನುಭವ ಇದೆ ಮಾತನಾಡುತ್ತಾರೆ. ಅಣ್ಣ ಹೇಳಿದ್ದು ತಮ್ಮ ಕೇಳಬೇಕು ಎಂದು ಮತ್ತೊಮ್ಮೆ ವ್ಯಂಗ್ಯದ ಮಾತುಗಳ ಮೂಲಕ ಕುಮಾರಸ್ವಾಮಿ ಅವರನ್ನು ತಿವಿದರು.
ಮಾಮ ಮಾರ್ಗದ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?
ವಿದೇಶದಲ್ಲಿ ಸರ್ಕಾರ ಪತನದ ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಯಾಕೆ ಅವರು ಹೀಗೆ ಮಾಡಿಕೊಂಡರೋ ಗೊತ್ತಿಲ್ಲ. ಬಹುಶಃ ಅವರಿಗೆ ಈ ಸರ್ಕಾರದ ಅವಧಿ ಬಹಳ ದಿನ ಇರಲ್ಲ ಎಂದು ಅಂದುಕೊಂಡಿರಬೇಕು. ನಮಗಿಂತ ಜಾಸ್ತಿ ಅವರೇ ಶಾಸ್ತ್ರ ಕೇಳುತ್ತಾರೆ. ಜೋತಿಷ್ಯದವರನ್ನು ಬಹಳ ನಂಬಿರೋರು ಅವರು. ಹಲವಾರು ರೀತಿ ಕುತಂತ್ರಗಳನ್ನು ಮಾಡುತ್ತಾರೆ. ಜೋತಿಷ್ಯದ ಕೃತಕ ಶಕ್ತಿಯನ್ನು ಪಡೆದುಕೊಂಡು ವಾಮ ಮಾರ್ಗದ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆ ಕೃತಕವಾದ ಶಕ್ತಿ ಬಹುಶಃ ಬಹಳ ದಿನ ಇರಲ್ಲ ಅಂತ ಅವರ ತಲೆಯಲ್ಲಿ ಇರಬಹುದು. ಅದಕ್ಕಾಗಿ ಇಂತಹ ಹೇಳಿಕೆ ನೀಡಿರಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು.
ನಮಗೆ ಸರಿ ಕಂಡಿದ್ದನ್ನಷ್ಟೇ ನಾವು ಮಾಡುತ್ತೇವೆ- ಡಾ. ಜಿ. ಪರಮೇಶ್ವರ್
ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿರುಗೇಟು ನೀಡಿದ್ದು, ಕುಮಾರಸ್ವಾಮಿಯವರು ಏನು ಬೇಕಾದರೂ ಕಮೆಂಟ್ ಮಾಡಲಿ. ಸರ್ಕಾರ ನಡೆಸುವವರು ನಾವು ನಮಗೆ ಯಾವುದು ಸರಿ ಕಾಣುತ್ತದೆಯೋ ಅದನ್ನೇ ಮಾಡುತ್ತೇವೆ. ನಮಗೆ 1200 ಇನ್ಸ್‌ಪೆಕ್ಟರ್‌ಗಳಿದ್ದಾರೆ. ಎಲ್ಲರನ್ನೂ ನಾವು ವರ್ಗಾವಣೆ ಮಾಡುವುದಿಲ್ಲ. ಆಯ್ಕೆ ಮಾಡಿ ವರ್ಗಾವಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಯಾವ ಏರಿಯಾದಲ್ಲಿ ಯಾವ ರೀತಿ ಯಾರನ್ನು ಹಾಕಿದರೆ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತದೆ ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ವರ್ಗಾವಣೆ ಮಾಡುತ್ತೇವೆ. ಇವರು ಹೇಳಿದ ಹಾಗೆ ಮಾಡೋದಿಲ್ಲ. ಇವರು ಕೂಡ ಮುಖ್ಯಮಂತ್ರಿಗಳಾಗಿದ್ದರು. ಆಗಲೂ ನಾನೇ ಗೃಹ ಸಚಿವನಾಗಿದ್ದೆ. ಅವರು ಮುಖ್ಯಮಂತ್ರಿಗಳಾಗಿದ್ದಾಗ ಯಾವ ರೀತಿ ಸಲಹೆ, ಸೂಚನೆಗಳನ್ನು ಕೊಡುತ್ತಿದ್ದರು ಎಂಬುದನ್ನು ನಾನು ಹೇಳಿಲ್ಲ. ಅದನ್ನು ಹೇಳುವುದು ಕೂಡ ಚೆನ್ನಾಗಿ ಕಾಣುವುದಿಲ್ಲ. ಕೆಲ ವರ್ಗಾವಣೆ ಸರಿ ಎನಿಸಿಲ್ಲ ಎನ್ನುವ ಕಾರಣಕ್ಕಾಗಿ ತಡೆಹಿಡಿದಿದ್ದೇವೆ. ಅದನ್ನೆಲ್ಲ ನೋಡಿ ಸರಿಪಡಿಸುತ್ತೇವೆ. ನಂತರ ವರ್ಗಾವಣೆ ಮಾಡುತ್ತೇವೆ ಎಂದು ಡಾ. ಜಿ. ಪರಮೇಶವರ್ ತಿಳಿಸಿದರು.
ಇದನ್ನೂ ಓದಿ: HD Kumaraswamy : ಕುಮಾರಸ್ವಾಮಿ ರಿಟರ್ನ್ಸ್ ವಿತ್ ಚಾರ್ಜ್‌ಶೀಟ್; ಸರ್ಕಾರದ ಮೇಲೆ ಮಿಡ್‌ನೈಟ್ ಪ್ರಹಾರ!
ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ಬಗ್ಗೆ ಎಚ್‌ಡಿಕೆ ಹೇಳಿದ್ದೇನು?
ಗೃಹ ಇಲಾಖೆಯಲ್ಲಿ ಯಾವ ರೀತಿ ವರ್ಗಾವಣೆ ದಂಧೆ ನಡೆಯಿತು? ಪೊಲೀಸ್ ಅಧಿಕಾರಿಗಳನ್ನು ಆ ಮಟ್ಟಿಗೆ ಬಳಸಿಕೊಂಡರೆ ಹೇಗೆ? ಇದರಿಂದ ಪೊಲೀಸರು ಜನಸಾಮಾನ್ಯರಿಗೆ ಯಾವ ಮಟ್ಟದ ರಕ್ಷಣೆ ನೀಡಬಹುದು? ಗರುಡ ಮಾಲ್ ಬಳಿಯ ಪೊಲೀಸ್ ಮೆಸ್‌ನಲ್ಲಿ ಸಭೆ ನಡೆಯಬೇಕಿದ್ದರೆ ಯಾರು ಇದ್ದರು? ವೈಎಸ್‌ವಿ ಟ್ಯಾಕ್ಸ್‌ನವರು ಅಲ್ಲೇ ಇದ್ದರು ಅಲ್ಲವೇ? ಅಧಿಕಾರಿಗಳ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ಚರ್ಚೆ ಮಾಡುವಾಗ ವೈಎಸ್‌ವಿ ಟ್ಯಾಕ್ಸ್‌ನವರು ಯಾಕೆ ಇದ್ದರು? ಅವರನ್ನು ಇಟ್ಕೊಂಡು ಚರ್ಚೆ ಮಾಡಿದರೆ ಈ ಆಡಳಿತ ಎಲ್ಲಿಗೆ ಬಂತು? ವರ್ಗಾವಣೆ ಮಾಡಿ ಅದನ್ನು ಮತ್ತೆ ವಾಪಸ್ ಪಡೆದುಕೊಂಡರು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದರು.