Site icon Vistara News

Next CM: ಮುಂದಿನ ಸಿಎಂ ಡಿಕೆಶಿ ಎಂದ ನೊಣವಿನಕೆರೆ ಸ್ವಾಮೀಜಿ; ಕುರ್ಚಿ ಖಾಲಿ ಇಲ್ಲ ಎಂದ ಎಂ.ಬಿ. ಪಾಟೀಲ್‌

Nonavinakere mutt Swamiji and MB Patil

ಮಂಡ್ಯ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕೂಗು ಕೇಳಿಬಂದಿದೆ. ದಲಿತ ಸಿಎಂ ಕೂಗು ತಣ್ಣಗಾದ ಬೆನ್ನಲ್ಲೇ ಇದೀಗ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗಲಿ ಎಂದು ಸ್ವಾಮೀಜಿಯೊಬ್ಬರು ಹೇಳಿರುವುದು ಕಂಡುಬಂದಿದೆ. ಮದ್ದೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನೊಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ಮಠದ ಶ್ರೀ ಡಾ. ಕರಿ ವೃಷಭ ದೇಶಿಕೇಂದ್ರ ಶಿವಯೋಗೇಶ್ವರ ಸ್ವಾಮೀಜಿ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಶ್ರೀ ಪಟ್ಟಲದಮ್ಮ ದೇವಿಯ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ ಅವರು, ಡಿ. ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ. ಅವರು ಶ್ರೀಮಠದ ಪರಮ ಭಕ್ತ ಮುಖ್ಯಮಂತ್ರಿ ಆಗಲು ನಮ್ಮ ಆಶೀರ್ವಾದ ಕೂಡ ಇದೆ. ಅವರಿಗಾಗಿ ನಾವು ಭಗವಂತನಲ್ಲಿ ಸಂಕಲ್ಪ ಮಾಡಿದ್ದೇವೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಸರ್ಕಾರ ಮೀಸಲಾತಿ ಪ್ರಕಟಿಸುವುದು ಉತ್ತಮ. ಅದು ಎಲ್ಲರಿಗೂ ಅನುಕೂಲವಾಗಲಿದೆ.

ಡಿಕೆಶಿ ಅವರು ತುಮಕೂರು ಜಿಲ್ಲೆಯ ತಿಪಟೂರಿನ ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಪರಮ ಭಕ್ತರು. ಅವರು ಆಗಾಗ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಅಜ್ಜಯ್ಯನ ಆಶೀರ್ವಾದ ಪಡೆಯುತ್ತಾರೆ. ಹೀಗಾಗಿ ಸ್ವಾಮೀಜಿ ಅವರ ಹೇಳಿಕೆ ಮಹತ್ವ ಪಡೆದಿದೆ.

ಇದನ್ನೂ ಓದಿ | CM Siddaramaiah: ಸಿದ್ದರಾಮಯ್ಯಗೆ ಧಮ್ಮು, ತಾಕತ್ತು ಇದ್ದರೆ NIAಗೆ ಮೌಲ್ವಿ ಪ್ರಕರಣ ವಹಿಸಲಿ: ಯತ್ನಾಳ್

ಸ್ವಾಮೀಜಿ ಹೇಳಿಕೆ ಅಪ್ರಸ್ತುತ, ಕುರ್ಚಿ ಖಾಲಿ ಇಲ್ಲ ಎಂದ ಎಂ.ಬಿ. ಪಾಟೀಲ್‌

ನೊಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ಮಠದ ಶ್ರೀಗಳ ಹೇಳಿಕೆಗೆ ಸಚಿವ ಎಂ. ಬಿ. ಪಾಟೀಲ್‌ ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಬೇಕೆಂದು ನೊಣವಿನಕೆರೆ ಸ್ವಾಮೀಜಿಗಳ ಹೇಳಿಕೆ ಅಪ್ರಸ್ತುತ. ಈಗಂತೂ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ ಎಂದು ತಿಳಿಸಿದ್ದಾರೆ.

ಸಿಎಂ ಆಗುವುದು ನಮ್ಮ ಪಕ್ಷದ ವರಿಷ್ಠರ ಕೈಯ್ಯಲ್ಲಿರುತ್ತದೆ. ಇದಕ್ಕೆಂದೇ ಕಾಂಗ್ರೆಸ್ ಹೈಕಮಾಂಡ್ ಇದೆ. ಹೈ ಕಮಾಂಡ್‌ ನಾಯಕರು ಶಾಸಕರ ಅಭಿಪ್ರಾಯ ಪಡೆದು ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂದು ನಿರ್ಧಾರ ಮಾಡುತ್ತಾರೆ. ಹೀಗಾಗಿ ಈ ಪ್ರಶ್ನೆ ಈಗ ಸದ್ಯಕ್ಕೆ ಉದ್ಭವಿಸುವುದಿಲ್ಲ. ಮೇಲಾಗಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ ಎಂದಿದ್ದಾರೆ.

ಸ್ವಾಮೀಜಿಗಳು ರಾಜಕೀಯದಿಂದ ದೂರವಿರಬೇಕು: ಶ್ರೀ ನಿಜಗುಣಾನಂದ ಸ್ವಾಮೀಜಿ

ಧಾರವಾಡ: ಸ್ವಾಮೀಜಿಗಳು ರಾಜಕೀಯದಿಂದ ಹೊರತಾಗಿರಬೇಕು. ನಮ್ಮದೇನಿದ್ದರೂ ಧರ್ಮ, ಸಂಸ್ಕೃತಿ, ಸಂಸ್ಕಾರದ ವಿಚಾರದಲ್ಲಿರಬೇಕು. ಮಠಾಧೀಶರು ರಾಜಕಾರಣದಲ್ಲಿದ್ದಾರೆ ಅಂತಾರೆ. ಮಾಧ್ಯಮವೂ ಸಹ ರಾಜಕಾರಣದ ವರ್ಗದಲ್ಲಿದೆ. ಮಾಧ್ಯಮಗಳೂ ರಾಜಕಾರಣ ಹೊರತುಪಡಿಸಿ ನಿಂತಿಲ್ಲ. ಒಂದೊಂದು ಚಾನಲ್‌ಗಳು ಒಬ್ಬೊಬ್ಬ ರಾಜಕಾರಣಿಯನ್ನು ವೃಭವೀಕರಿಸುತ್ತವೆ. ಮಠಾಧೀಶರು ರಾಜಕಾರಣದಲ್ಲಿ ಬರಬಾರದು ಎನ್ನುವುದು ಸತ್ಯ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದ್ದಾರೆ.

ನೊಣವಿನಕೆರೆ ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಧರ್ಮ ರಾಜಕಾರಣದಲ್ಲಿ ಪ್ರವೇಶ ಮಾಡಬಾರದು. ಲಿಂಗಾಯತ ಸ್ವಾಮೀಜಿಗಳು ಮಾತ್ರವಲ್ಲ. ಮೌಲ್ವಿ, ಪಾದ್ರಿಗಳೂ ರಾಜಕಾರಣದಲ್ಲಿ ಪ್ರವೇಶ ಆಗಬಾರದು. ಯಾವ ಧರ್ಮದ ನೇತಾರರು ರಾಜಕಾರಣ ಪ್ರವೇಶಿಸಬಾರದು. ರಾಜಕಾರಣಿಗಳಿಗೆ ಸ್ವಾಮೀಜಿಗಳು ಬುದ್ಧಿ ಹೇಳಬಹುದು, ಮಾರ್ಗದರ್ಶನ ಮಾಡಬಹುದು. ಆದರೆ, ರಾಜಕಾರಣಿಗಳ ಓಲೈಕೆ ಮಾಡಬಾರದು. ಒಬ್ಬ ಸ್ವಾಮೀಜಿಯನ್ನು ಬಳಸಿಕೊಳ್ಳುವಾಗ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.

ಎಲ್ಲ ಪಕ್ಷದವರು ಮಠಗಳಿಗೆ ಬರುತ್ತಾರೆ. ಅವರ ಜೊತೆಯಲ್ಲಿ ಸ್ವಾಮೀಜಿಗಳು ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಮಠಾಧೀಶರನ್ನು ರಾಜಕಾರಣಕ್ಕೆ ದುರ್ಬಳಕೆ ಮಾಡಬಾರದು. ಈ ಅರಿವಿನ ಪ್ರಜ್ಞೆ ರಾಜಕಾರಣಿಗಳಿಗೆ ಇರಬೇಕು. ಯಾವ ಮಠಾಧೀಶರಿಗೂ ಒತ್ತಡ ಇರುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ | JDS Karnataka: ಪಕ್ಷ ವಿರೋಧಿ ಚಟುವಟಿಕೆ; ಸಿ.ಎಂ.ಇಬ್ರಾಹಿಂ, ಕೇರಳದ ಸಿ.ಕೆ. ನಾನು ಉಚ್ಚಾಟನೆ

ಸರ್ಕಾರದಿಂದ ಮಠಗಳಿಗೆ ಅನುದಾನ ಬಿಡುಗಡೆ ವಿಚಾರ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ಪೂರ್ವದಲ್ಲಿ ಪ್ರಭು ಪರಂಪರೆ ಇತ್ತು. ಆಗ ಮಹಾರಾಜರು ಎಲ್ಲರನ್ನೂ ಸಲಹುತ್ತಿದ್ದರು. ಮಠಗಳಲ್ಲಿ ಶೈಕ್ಷಣಿಕ ಸಂಸ್ಥೆ , ಉಚಿತ ಪ್ರಸಾದ ನಿಲಯ ಇರುತ್ತವೆ. ಅನಾಥ ಮಕ್ಕಳು ಇರುತ್ತಾರೆ. ಸಾವಿರಾರು ಪುಸ್ತಕ ಪ್ರಕಟಿಸಬೇಕಿರುತ್ತದೆ. ರಾಜಾಶ್ರಯ ಕಳೆದುಕೊಂಡ ಸಂಗೀತಗಾರರಿಗೆ ಮಠಗಳೇ ಆಶ್ರಯ ಆಗಿರುತ್ತವೆ. ಅನೇಕ ಜನರಿಗೆ ಮಠಗಳು ಅವಕಾಶ ಕಲ್ಪಿಸಿಕೊಡಬೇಕಿರುತ್ತದೆ. ಮಠಗಳಿಗೆ ಬರುವ ಅನುದಾನ ಪ್ರಜಾಪ್ರಭುತ್ವದ ತೆರಿಗೆ ಹಣವೇ ಆಗಿರುತ್ತದೆ. ಆದರೂ ಸಹ ಮಠದ ಸೇವೆ ಸಂಪೂರ್ಣ ಪ್ರಜೆಗಳಿಗೆ ಸಲ್ಲುತ್ತದೆ. ಹೀಗಾಗಿ ಸರ್ಕಾರ ಅನುದಾನ ಕೊಡುತ್ತದೆ ಎಂದು ಮಠಗಳು ಸರ್ಕಾರಿ ಅನುದಾನ ಪಡೆಯುವ ಬಗ್ಗೆ ಸಮರ್ಥಿಸಿಕೊಂಡರು.

Exit mobile version