ಬೆಂಗಳೂರು: ನಗರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು (DK Shivakumar) ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ವಾರ್ ರೂಮ್ ಹಾಗೂ ಕಂಟ್ರೋಲ್ ರೂಮ್‌ಗೆ ಸೋಮವಾರ ರಾತ್ರಿ ದಿಢೀರ್ ಭೇಟಿ ನೀಡಿ ಕಾರ್ಯನಿರ್ವಹಣೆ ಪರಿಶೀಲಿಸಿದರು.
ಪಾಲಿಕೆ ಕೇಂದ್ರ ಕಚೇರಿ ಅನೆಕ್ಸ್ ಕಟ್ಟಡ-3ರ 6ನೇ ಮಹಡಿಯಲ್ಲಿ ಕಂಟ್ರೋಲ್ ರೂಮ್ ಹಾಗೂ ಐ.ಸಿ.ಸಿ.ಸಿ (ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್)ಗೆ ದಿಢೀರ್ ಭೇಟಿ ನೀಡಿ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ, ಮರಗಳು, ಮರದ ರೆಂಬೆ, ಕೊಂಬೆಗಳು ಬಿದ್ದಿರುವುದು ಸೇರಿ ಬಂದಿರುವ ದೂರುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ನಾಗರಿಕರ ದೂರುಗಳಿಗೆ ಪಾಲಿಕೆ ವಾರ್ ರೂಮ್ ಹೇಗೆ ಸ್ಪಂದಿಸುತ್ತಿದೆ ಎಂದು ಖುದ್ದು ಪರಿಶೀಲನೆ ನಡೆಸಿದ ಅವರು, ಮಳೆ ಅನಾಹುತಗಳ ಬಗ್ಗೆ ಮಾಹಿತಿ ಬಂದ ತಕ್ಷಣ ಕ್ರಮ ಕೈಗೊಳ್ಳಬೇಕು. ಯಾವುದೇ ಉದಾಸೀನ ಮಾಡಬಾರದು. ನಾಗರಿಕರ ಹಿತವೇ ಮೊದಲ ಆದ್ಯತೆ ಆಗಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ | Press Day 2023: ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಲು ಕ್ರಮ: ಸಿದ್ದರಾಮಯ್ಯ
ಕಂಟ್ರೋಲ್ ರೂಮ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, 3 ಪಾಳಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಮಳೆಗಾಲದ ವೇಳೆ ನಾಗರಿಕರು ಕೇಂದ್ರ ನಿಯಂತ್ರಣ ಕೊಠಡಿಯ ಉಚಿತ ಸಂಪರ್ಕ ಸಂಖ್ಯೆ 1533ಗೆ ಕರೆ ಮಾಡಿ ದೂರು ನೀಡಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳ ಮಾಹಿತಿ ನೀಡಿ ಶೀಘ್ರ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರು ಡಿಸಿಎಂ ಅವರಿಗೆ ಮಾಹಿತಿ ನೀಡಿದರು.
ನಾಗರಿಕರ ದೂರು ಹಾಗೂ ಮಳೆ ಅನಾಹುತಗಳಿಗೆ ಸ್ಪಂದಿಸಲು ಪಾಲಿಕೆ ಕೇಂದ್ರ ಕಚೇರಿ ಹಾಗೂ 8 ವಲಯಗಳು ಸೇರಿದಂತೆ 9 ಶಾಶ್ವತ ನಿಯಂತ್ರಣ ಕೊಠಡಿಗಳಿದ್ದು, ಮಳೆಗಾಲದ ವೇಳೆ 63 ಉಪ ವಿಭಾಗಗಳಲ್ಲಿ ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ಪ್ರತಿ ನಿಯಂತ್ರಣ ಕೊಠಡಿಯಲ್ಲೂ ನುರಿತ ಸಿಬ್ಬಂದಿ, ವಾಹನಗಳು, ಮೋಟಾರು ಪಂಪ್‌ಗಳು, ಮೋಟಾರ್ ಚಾಲಿತ ಗರಗಸ, ರಿಫ್ಲೆಕ್ಟಿವ್ ಜ್ಯಾಕೆಟ್ಸ್ ಇತ್ಯಾದಿ ಯಂತ್ರೋಪಕರಣಗಳನ್ನು ಸನ್ನದ್ದ ಸ್ಥಿತಿಯಲ್ಲಿರಿಸಲಾಗಿದೆ. ಇದರ ಜತೆಗೆ ಅಗ್ನಿ ಶಾಮಕ ಇಲಾಕೆಯ ಸಿಬ್ಬಂದಿ ಹಾಗೂ ಎಸ್.ಡಿ.ಆರ್.ಎಫ್ ಸಿಬ್ಬಂದಿಯೂ ನಿಯಂತ್ರಣ ಕೊಠಡಿಗಳ ಸಂಪರ್ಕದಲ್ಲಿರಲಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಬಿದ್ದ ಮರಗಳು, ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವ ಸಲುವಾಗಿ 28 ತಂಡಗಳು ಕಾರ್ಯನಿರ್ವಹಿಸಲಿವೆ ಎಂದು ತುಷಾರ್ ಗಿರಿನಾಥ್ ಹೇಳಿದರು.
ಇದನ್ನೂ ಓದಿ | Brand Bangalore: ಬ್ರ್ಯಾಂಡ್ ಬೆಂಗಳೂರಿಗಾಗಿ ಕೆನಡಾ ಸಂಸ್ಥೆಯೊಂದಿಗೆ ರಾಜ್ಯ ಸರ್ಕಾರ ಒಪ್ಪಂದ
ಬೃಹತ್ ನೀರುಗಾಲುವೆ ವಿಭಾಗದ ಮಾಹಿತಿ
ನಗರದಲ್ಲಿ ಒಟ್ಟು 198 ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ತಹಲ್‌ವರೆಗೆ 118 ಸೂಕ್ಷ್ಮ ಪ್ರದೇಶಗಳಲ್ಲಿ ಶಾಶ್ವತ ಪರಿಹಾರವನ್ನು ಒದಗಿಸಲಾಗಿದೆ. ಇನ್ನುಳಿದ 80 ಸೂಕ್ಷ್ಮ ಪ್ರದೇಶಗಳಲ್ಲಿ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಶೀಲನೆಯ ವೇಳೆ ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್ ಎಲ್ಲಾ ವಲಯ ಮುಖ್ಯ ಅಭಿಯಂತರರು ಸೇರಿ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.