Site icon Vistara News

Operation Hasta : ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಮನೆಗೆ ಡಿಕೆಶಿ ಭೇಟಿ; ಕಾಂಗ್ರೆಸ್‌ ಸೇರ್ಪಡೆ ಖಚಿತ?

DK Shivakumar meets Poornima shrinivas in her home regarding Krishna Janmastami

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಭಾರಿ ತಂತ್ರಗಾರಿಕೆಯಲ್ಲಿ ತೊಡಗಿದೆ. ಕಳೆದ ಬಾರಿಯ ಸೋಲಿನ ಮುಖಭಂಗದಿಂದ ತಪ್ಪಿಸಿಕೊಳ್ಳುವುದರ ಜತೆಗೆ ಈ ಬಾರಿ ಹೈಕಮಾಂಡ್‌ ಸೂಚನೆಯಂತೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುವತ್ತ ಕಾರ್ಯತಂತ್ರವನ್ನು ಹೆಣೆಯುತ್ತಿದೆ. ಈಗಾಗಲೇ ರಾಜ್ಯದಲ್ಲಿ ಆಪರೇಷನ್‌ ಹಸ್ತಕ್ಕೆ (Operation Hasta) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (KPCC president DK Shivakumar) ಚಾಲನೆ ನೀಡಿದ್ದು, ಅಳೆದು ತೂಗಿ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ. ಇದಕ್ಕೆ ಬಿಜೆಪಿಯ ಹಾಲಿ ಶಾಸಕರಲ್ಲದೆ, ಮಾಜಿ ಶಾಸಕರಿಗೂ ಗಾಳ ಹಾಕಲಾಗುತ್ತಿದೆ. ಈ ಎಲ್ಲದರ ಭಾಗವಾಗಿ ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ (Former Hiriyur MLA Poornima Srinivas) ಅವರನ್ನು ಕೈಪಡೆಗೆ ಸೇರ್ಪಡೆಗೊಳಿಸಿಕೊಳ್ಳುವ ಮಾತುಕತೆ ಈಗಾಗಲೇ ನಡೆದಿದ್ದು, ಬುಧವಾರ (ಸೆಪ್ಟೆಂಬರ್‌ 6) ಪೂರ್ಣಿಮಾ ಮನೆಗೆ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿದ್ದಾರೆ. ಇದು ರಾಜಕೀಯವಾಗಿ ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಆರ್. ಪುರಂನಲ್ಲಿರುವ ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರ ನಿವಾಸಕ್ಕೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ‌.ಕೆ. ಶಿವಕುಮಾರ್ ಭೇಟಿ ನೀಡಿದ್ದಾರೆ. ಹೀಗಾಗಿ ರಾಜಕೀಯವಾಗಿ ಈ ಭೇಟಿ ಮಹತ್ವ ಪಡೆದಿದೆ. ಪೂರ್ಣಿಮಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಹೊಸ್ತಿಲಲ್ಲಿ ಈ ಭೇಟಿಯಾಗಿರುವುದು ಬಹಳ ಚರ್ಚೆಯನ್ನು ಹುಟ್ಟುಹಾಕಿದೆ.

ಈ ಮೊದಲೇ ಸಂಪರ್ಕಿಸಿದ್ದ ಸ್ಥಳೀಯ ನಾಯಕರು

ಲೋಕಸಭಾ ಚುನಾವಣೆ ಗೆಲ್ಲಲು ಆಪರೇಷನ್ ಹಸ್ತಕ್ಕೆ ಕೈ ಹಾಕುತ್ತಿದ್ದಂತೆ ಹಲವು ರೀತಿಯಲ್ಲಿ ಲೆಕ್ಕಾಚಾರಗಳನ್ನು ಕಾಂಗ್ರೆಸ್‌ ಹಾಕಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಿಕ್ಕ ಸಿಕ್ಕವರಿಗೆ ಕಾಂಗ್ರೆಸ್ ಪಡೆ ಗಾಳ ಹಾಕುತ್ತಿಲ್ಲ. ಕ್ಷೇತ್ರದ ಮಾಸ್ ಲೀಡರ್‌ಗಳನ್ನು ನೋಡಿ ಟಾರ್ಗೆಟ್‌ ಮಾಡುತ್ತಿದೆ. ಈ ಎಲ್ಲದರ ಹಿಂದೆ ಡಿ.ಕೆ. ಶಿವಕುಮಾರ್ ಮಾಸ್ಟರ್‌ ಮೈಂಡ್‌ ವರ್ಕ್‌ ಆಗುತ್ತಿದೆ. ಇನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿದವರನ್ನು ನೋಡಲಾಗುತ್ತಿದೆ. ಅಂದರೆ, ಯಾವ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಇಲ್ಲವೋ ಅಂತಹ ಕ್ಷೇತ್ರಗಳಲ್ಲಿ ಹೆಚ್ಚು ಆಪರೇಷನ್ ಹಸ್ತ ನಡೆಸುವುದು. ಆಗ ವೈಯಕ್ತಿಕ ವರ್ಚಸ್ಸು ಹೊಂದಿದವರು ಪಕ್ಷಕ್ಕೆ ಸೇರ್ಪಡೆಯಾದರೆ ಲಾಭ ಆಗುತ್ತದೆ. ಒಂದೆಡೆ ಪಕ್ಷದ ವರ್ಚಸ್ಸು, ಮತ್ತೊಂದೆಡೆ ವೈಯಕ್ತಿಕ ವರ್ಚಸ್ಸು ಸೇರಿದಾಗ ಲೋಕಸಭೆಯಲ್ಲಿ ಗೆಲುವಿನ ಹಾದಿಯನ್ನು ಸುಗಮ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಹೊಂದಲಾಗಿದೆ. ಹೀಗಾಗಿ ಹಾಲಿ ಶಾಸಕರ ಜತೆ ಜತೆಗೆ ಮಾಜಿಗಳಿಗೂ ಗಾಳ ಹಾಕಲಾಗಿದೆ. ಹೀಗಾಗಿ ಪೂರ್ಣಿಮಾ ಶ್ರೀನಿವಾಸ್ ಜತೆ ಈ ಹಿಂದೆಯೇ ಸ್ಥಳೀಯ ಕಾಂಗ್ರೆಸ್ ನಾಯಕರ ಮೂಲಕ ಮಾತುಕತೆ ನಡೆಸಿ, ಪಕ್ಷಕ್ಕೆ ಆಹ್ವಾನ ನೀಡಲಾಗಿತ್ತು.

ಇದಕ್ಕೆ ಮೊದಲು ಹಿಂದೇಟು ಹಾಕಿದ್ದ ಪೂರ್ಣಿಮಾ ಶ್ರೀನಿವಾಸ್‌, ಸ್ವಲ್ಪ ಸಮಯಾವಕಾಶ ಕೇಳಿದ್ದರು. ಅಲ್ಲದೆ, ಈ ಬಗ್ಗೆ ಬೆಂಬಲಿಗರ ಜತೆ ಚರ್ಚೆ ಮಾಡಿ ನಿರ್ಧಾರ ಎಂದು ಹೇಳಿದ್ದರು. ಈ ಬೆಳವಣಿಗೆ ಮಧ್ಯೆ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರೂ ಸಹ ಪೂರ್ಣಿಮಾರನ್ನು ಭೇಟಿ ಮಾಡಿ ಅಸಮಾಧಾನ ಶಮನಕ್ಕೆ ಪ್ರಯತ್ನ ಮಾಡಿದ್ದರು. ಆದರೆ, ಬಿಜೆಪಿಯಲ್ಲಿ ನಾಯಕತ್ವ ಇಲ್ಲದಿರುವುದು, ಹೈಕಮಾಂಡ್ ನಾಯಕರಿಂದ ಸೂಕ್ತ ಸ್ಪಂದನೆ ಸಿಗದಿರುವುದು ಪೂರ್ಣಿಮಾ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಅಂಶವನ್ನು ಕಾಂಗ್ರೆಸ್‌ ಈಗ ಸರಿಯಾಗಿ ಬಳಸಿಕೊಂಡಿದೆ.

ಇದನ್ನೂ ಓದಿ: Teachers Pay Hike : ರಾಜ್ಯ ಶಾಲಾ ಶಿಕ್ಷಕರ ವೇತನ ಡಬಲ್‌; 7ನೇ ವೇತನ ಆಯೋಗಕ್ಕೆ 29 ಅಂಶದ ಶಿಫಾರಸು!

ಕಾಂಗ್ರೆಸ್‌ ಆಹ್ವಾನ ಬಂದಿದೆ; ಆದ್ರೆ ಬಿಜೆಪಿ ಬಿಡಲ್ಲ: ಪೂರ್ಣಿಮಾ ಶ್ರೀನಿವಾಸ್

ಇಂದು ಡಿ‌.ಕೆ. ಶಿವಕುಮಾರ್ ಅವರು ನಮ್ಮ ಮನಗೆ ಬಂದಿದ್ದರು. ಹಬ್ಬದ ಕಾರಣಕ್ಕೆ ಬಂದು ಊಟ ಮಾಡಿ ಹೋಗಿದ್ದಾರೆ. ಕಾಂಗ್ರೆಸ್‌ನಿಂದ ನನಗೆ ಆಹ್ವಾನ ಇದೆ. ಆದರೆ, ನಾನು ಬಿಜೆಪಿಯಲ್ಲಿ ಇದ್ದೇನೆ. ಬಿಜೆಪಿ ಬಿಡುವ ಯೋಚನೆ ಮಾಡಿಲ್ಲ. ಚುನಾವಣೆಗೂ ಮುಂಚಿತವಾಗಿ ಈ ಚರ್ಚೆ ಇತ್ತು. ಆದರೆ, ಬಿಜೆಪಿ ಬಿಡ್ತೇನೆ ಅಂತ ನಾನು ಎಲ್ಲಿಯೂ ಹೇಳಿಲ್ಲ. ಈಗಲೂ ಕೂಡ ಯಾವುದೇ ನಿರ್ಧಾರ ಮಾಡಿಲ್ಲ. ಹೋಗುವುದಾದರೆ ಎಲ್ಲರಿಗೂ ಹೇಳಿಯೇ ಹೋಗುತ್ತೇನೆ. ಕದ್ದು ಮುಚ್ಚಿ ನಾನು ಕಾಂಗ್ರೆಸ್ ಸೇರಲ್ಲ. ನನಗೆ ಬಿಜೆಪಿ ಮೇಲೆ ಯಾವುದೇ ಅಸಮಾಧಾನ ಇಲ್ಲ. ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನನಗೆ ಯಾವುದೇ ಅಸಮಾಧಾನ ಇಲ್ಲ. ಆದಷ್ಟು ಬೇಗ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಮಾಡುತ್ತಾರೆ ಎಂದು ಮಾಜಿ ಶಾಸಕಿ‌ ಪೂರ್ಣಿಮಾ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version