ತುಮಕೂರು/ಮಂಡ್ಯ: ಕಾಂಗ್ರೆಸ್ ಸರ್ಕಾರದಲ್ಲಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರು, ತುಮಕೂರು ಜಿಲ್ಲೆಯ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠ ಹಾಗೂ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಭಾನುವಾರ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಶ್ರೀ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಅಜ್ಜಯ್ಯನಿಗೆ ಪೂಜೆ
ಅಜ್ಜಯ್ಯನ ಹೆಸರಿನಲ್ಲಿ ಡಿಸಿಎಂ ಆಗಿ ಗೌಪ್ಯತಾ ಪ್ರಮಾಣ ವಚನ ಸ್ವೀಕರಿಸಿದ್ದ ಡಿ.ಕೆ.ಶಿವಕುಮಾರ್ ಅವರು, ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಶ್ರೀ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಅಜ್ಜಯ್ಯನಿಗೆ ಪೂಜೆ ಸಲ್ಲಿಸಿದರು. ಅವರಿಗೆ ಕುಣಿಗಲ್ ಶಾಸಕ ರಂಗನಾಥ್, ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಸಾಥ್ ನೀಡಿದರು.
ಅಜ್ಜಯ್ಯನಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಎಲ್ಲ ಸಂದರ್ಭದಲ್ಲಿ ಇಲ್ಲಿಗೆ ಬಂದು ನಾನು ಪೂಜೆ ಸಲ್ಲಿಸುತ್ತೇನೆ. ಮಾರ್ಗದರ್ಶನ, ಮನಶಾಂತಿಗೆ ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸುತ್ತೇನೆ. ಗಂಗಾಧರ ಅಜ್ಜಯ್ಯನ ಗದ್ದುಗೆ, ಕಾಡಸಿದ್ದೇಶ್ವರನಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ | DK Shivakumar: ನನ್ನ, ಸಿದ್ದರಾಮಯ್ಯ ಮನೆ ಸುತ್ತೋದು, ಚಾಡಿ ಹೇಳೋದು ಬಿಡಿ; ಡಿಕೆಶಿ ಖಡಕ್ ವಾರ್ನಿಂಗ್
ಕಾಲಭೈರವೇಶ್ವರನ ದರ್ಶನ ಪಡೆದ ಡಿಕೆಶಿ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಡಿ.ಕೆ.ಶಿವಕುಮಾರ್ ಅವರು ತೆರಳಿ ಕಾಲಭೈರವೇಶ್ವರನ ಸ್ವಾಮಿ ದರ್ಶನ ಪಡದರು. ಇದಕ್ಕೂ ಮುನ್ನ ಡಿಕೆಶಿಗೆ ಮಠದ ವತಿಯಿಂದ ಮಂಗಳ ವಾದ್ಯಗಳೊಂದಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು.
ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ನಾನು ಭಕ್ತ, ಭಗವಂತನಿಗೆ ಕೈ ಮುಗಿಯಲು ಬಂದಿದ್ದೇನೆ. ಈ ಹಿಂದೆ ಹೇಳಿದ್ದೇನೆ, ಧರ್ಮ ಯಾವುದಾದರೂ ತತ್ವ ಒಂದೇ.
ನಾಮ ನೂರಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಯಾವುದಾದರೂ ನಿಷ್ಠೆ ಒಂದೇ.
ದೇವನೊಬ್ಬ ನಾಮ ಹಲವು, ಎಲ್ಲಾ ಸಮಾಜದವರಿಗೆ ಅವರದೇ ಅದ ನಂಬಿಕೆ ಇರುತ್ತದೆ ಎಂದು ಹೇಳಿದರು.
ಇದನ್ನೂ ಓದಿ | DK Shivakumar: ನಾನು ಬಂಗಾರಪ್ಪ ಶಿಷ್ಯ, ಎಸ್ಸೆಂ ಕೃಷ್ಣ ಶಿಷ್ಯನಲ್ಲ ಎಂದು ಡಿಕೆಶಿ ಹೇಳಿದ್ದೇಕೆ?
ರಾಜ್ಯದಲ್ಲಿ ಮಳೆ ಅವಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಕೃತಿ ಯಾರ ನಿಯಂತ್ರಣದಲ್ಲೂ ಇಲ್ಲ, ನಾವು ಎಚ್ಚರಿಕೆಯಿಂದ ಇರಬೇಕು. ಏನೇನೂ ಹಾನಿಯಾಗಿದೆ, ಸರಿ ಮಾಡಬೇಕು. ಸರಿ ಮಾಡುವ ಕಾಲ ಬಂದಿದೆ, ಮಾಡುತ್ತೇವೆ. ನಾನು ಇಲ್ಲಿದ್ದೇನೆ ಏನು ಹೇಳಕ್ಕಾಗಲ್ಲ. ಎಲ್ಲದಕ್ಕೂ ಒಂದೇ ಪರಿಹಾರವಲ್ಲ. ಬರಿ 5 ಲಕ್ಷ ರೂಪಾಯಿ ಕೊಟ್ಟರೆ ಪರಿಹಾರವಾಗಲ್ಲ. ಮಳೆ ಹಾನಿ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.