ಬೆಂಗಳೂರು: ನಾನು ಎಸ್‌ಎಂ ಕೃಷ್ಣ (SM Krishna) ಶಿಷ್ಯನಲ್ಲ, ನಾನು ಬಂಗಾರಪ್ಪ (S Bangarappa) ಶಿಷ್ಯ ಎಂದು ಹೇಳಿ ಅಚ್ಚರಿ ಮೂಡಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು, ಹೇಳಿಕೆ ನೀಡಿದ ಮರುದಿನವೇ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಾಲಿಗೆ ನಮಸ್ಕರಿಸಿದ್ದಾರೆ. ಇದು ಡ್ಯಾಮೇಜ್ ಕಂಟ್ರೋಲ್ ಪ್ರಯತ್ನವಾಗಿರಬಹುದೇ ಎಂಬ ಚರ್ಚೆ ಹುಟ್ಟಿಕೊಂಡಿದೆ.
ಭಾನುವಾರ ಕೆಪಿಸಿಸಿ ಕಚೇರಿಯ ಇಂದಿರಾ ಭವನದಲ್ಲಿ ನಡೆದ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ʻನಾನು ಬಂಗಾರಪ್ಪ ಶಿಷ್ಯ, ಎಸ್‌ಎಂ ಕೃಷ್ಣ ಶಿಷ್ಯನಲ್ಲ. 1990ರಲ್ಲಿ ವೀರೇಂದ್ರ ಪಾಟೀಲ್ ಅವರು ಅನಾರೋಗ್ಯಕ್ಕೆ ಈಡಾದ ಸಂದರ್ಭದಲ್ಲಿ ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಸಲಹೆ ನೀಡಿದವರಲ್ಲಿ ನಾನೂ ಒಬ್ಬʼ ಎಂದು ಹೇಳಿದ್ದರು. ಇದು ಕೆಲವರಲ್ಲಿ ಅಚ್ಚರಿ ಮೂಡಿಸಿತ್ತು. ಇದುವರೆಗೆ ತಾನು ಎಸ್‌ಎಂ ಕೃಷ್ಣ ಅವರ ಶಿಷ್ಯ ಎಂದು ಹೇಳಿಕೊಂಡಿದ್ದ ಡಿ.ಕೆ. ಶಿವಕುಮಾರ್ ಒಮ್ಮಿಂದೊಮ್ಮೆಗೇ ಪ್ಲೇಟ್ ಬದಲಿಸಿದ್ದು ಯಾಕೆ ಎಂದು ಯೋಚನೆಗೆ ಹಚ್ಚಿದ್ದರು.
ಎಸ್ ಎಂ ಕೃಷ್ಣ ಅವರ ರಾಜಕೀಯ ಪಡಸಾಲೆಯಲ್ಲಿ ಬೆಳೆದಿದ್ದ ಡಿಕೆಶಿ ಈ ರೀತಿ ಯಾಕೆ ಹೇಳಿದರು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು. ಎಸ್ ಎಂ ಕೃಷ್ಣ ಸಂಪುಟದಲ್ಲಿ ಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷದಲ್ಲೂ ಬೆಂಗಾವಲಾಗಿದ್ದವರು ಎಸ್.ಎಂ. ಕೃಷ್ಣ.
ಇದಾಗಿ ಒಂದೇ ದಿನದಲ್ಲಿ ಡಿ.ಕೆ. ಶಿವಕುಮಾರ್ ಅವರು ಸದಾಶಿವ ನಗರದ ನಿವಾಸಕ್ಕೆ ತೆರಳಿ ಎಸ್‌ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ. ಎಸ್.ಎಂ. ಕೃಷ್ಣ ಅವರ ಕಾಲುಗಳಿಗೆ ನಮಸ್ಕರಿಸಿ, ಅವರಿಗೆ ಶಾಲು ಹೊದೆಸಿ, ಕಾಣಿಕೆ ರೂಪದಲ್ಲಿ ಪುಸ್ತಕವನ್ನು ನೀಡಿ ಗೌರವಿಸಿದ್ದಾರೆ.
ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದರಾ ಡಿ.ಕೆ. ಶಿವಕುಮಾರ್
ಮಾತಿನ ರಭಸದಲ್ಲಿ ಮನದ ಮಾತುಗಳನ್ನೆಲ್ಲ ಆಡಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ತಾನಾಡಿದ ಮಾತುಗಳು ಅಡ್ಡ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎಂದು ಅನಿಸಿದಂತೆ ಕಾಣಿಸುತ್ತಿದೆ. ಹೀಗಾಗಿ ಅವರು ಎಸ್.ಎಂ. ಕೃಷ್ಣ ಅವರ ಮನೆಗೆ ಹೋದಂತೆ ಕಾಣಿಸುತ್ತಿದೆ. ತನ್ನ ಮಾತು ಹಳೇಮೈಸೂರು ಭಾಗದ ಒಕ್ಕಲಿಗರ ಅಸಮಾಧಾನಕ್ಕೆ ಅವಕಾಶ ಮಾಡಿಕೊಂಡದಂತೆ ಡ್ಯಾಮೇಜ್ ಕಂಟ್ರೋಲ್‌ಗೆ ಶಿವಕುಮಾರ್ ಮುಂದಾಗಿರುವ ಸಾಧ್ಯತೆ ಇದೆ.
ರಾಜಕೀಯ ಆಶ್ರಯ ಕೊಟ್ಟವರ ಆಶೀರ್ವಾದ
ಈ ನಡುವೆ, ಎಸ್‌ಎಂ. ಕೃಷ್ಣ ಭೇಟಿಯಾದ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ʻʻಇಂದು ಮೊದಲ ವಿಧಾನಸಭೆ ಅಧಿವೇಶನ. ಎಲ್ಲಾ ಶಾಸಕರು ಪ್ರಮಾಣವಚನ ಪಡೆಯಲಿದ್ದಾರೆ. ನಾನು ಉಪಮುಖ್ಯಮಂತ್ರಿಯಾಗಿದ್ದೇನೆ. ಇಂಥ ಸಂದರ್ಭದಲ್ಲಿ ರಾಜಕೀಯ ಆಶ್ರಯ ಕೊಟ್ಟವರ ಆಶೀರ್ವಾದ ಪಡೆಯುವುದು ನನ್ನ ಕರ್ತವ್ಯ. ಹೀಗಾಗಿ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾಗಿದ್ದೇನೆʼʼ ಎಂದು ಹೇಳಿದರು.
ಬೆಂಗಳೂರಿನ ಇತಿಹಾಸ ಪುಸ್ತಕ ಕೊಟ್ಟ ಎಸ್ಸೆಂ ಕೃಷ್ಣ, ಗೆಳೆಯನೆಂದು ಕರೆದರು
ತಮ್ಮ ಮನೆಗೆ ಬಂದು ಕಾಲಿಗೆ ಬಿದ್ದು ಆಶೀರ್ವಾದ ಕೋರಿದ ಡಿ.ಕೆ. ಶಿವಕುಮಾರ್ ಅವರನ್ನು ಎಸ್.ಎಂ. ಕೃಷ್ಣ ಅವರು ಪುಸ್ತಕದ ಉಡುಗೊರೆ ಮೂಲಕ ಹರಸಿದ್ದಾರೆ. ಬ.ನ.ಸುಂದರ ರಾವ್ ಬರೆದಿರುವ ಪುಸ್ತಕ ʻಬೆಂಗಳೂರಿನ ಇತಿಹಾಸʼವನ್ನು ಹಸ್ತಾಕ್ಷರ ಸಹಿತವಾಗಿ ಉಡುಗೊರೆಯಾಗಿ ನೀಡಿದ್ದಾರೆ ಎಸ್ ಎಂ ಕೃಷ್ಣ. ಇದರಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಗೆಳೆಯ ಎಂದು ಕರೆದಿದ್ದಾರೆ ಎಸ್ಸೆಂ ಕೃಷ್ಣ.
ಇದು ಡಿ.ಕೆ. ಶಿವಕುಮಾರ್ ಅವರಿಗೆ ಇನ್ನಷ್ಟು ಸಂತಸ ತಂದಿದೆ. ಎಸ್‌ಎಂ ಕೃಷ್ಣ ಅವರು ನನಗೆ ಒಂದು ಪುಸ್ತಕ ಕೂಡಾ ಉಡುಗೊರೆಯಾಗಿ ಕೊಟ್ಟಿದ್ದಾರೆ. ಬೆಂಗಳೂರಿನ ಇತಿಹಾಸದ ಪುಸ್ತಕ ಕೊಟ್ಟಿದ್ದಾರೆ. ದೂರದೃಷ್ಟಿಯಿಂದ ಪುಸ್ತಕ ಉಡುಗೊರೆ ಕೊಟ್ಟಿದ್ದಾರೆ ಎಂದು ಖುಷಿಯಿಂದ ಹೇಳಿಕೊಂಡರು.
ಇದನ್ನೂ ಓದಿ: DK Shivakumar: ನಾನು ಬಂಗಾರಪ್ಪ ಶಿಷ್ಯ, ಎಸ್ಸೆಂ ಕೃಷ್ಣ ಶಿಷ್ಯನಲ್ಲ ಎಂದು ಡಿಕೆಶಿ ಹೇಳಿದ್ದೇಕೆ?