Site icon Vistara News

ಸಿದ್ದು ಸಿಎಂ ಆಗೋದಿರ್ಲಿ, 2023ರ ಚುನಾವಣೆಯಲ್ಲಿ ಗೆಲ್ಲಕ್ಕೂ ಡಿಕೆಶಿ ಬಿಡಲ್ಲ ಎಂದ ಶ್ರೀರಾಮುಲು

ಬಿ.ಶ್ರೀರಾಮುಲು

ಬಳ್ಳಾರಿ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವುದಿರಲಿ, ಅವರು ೨೦೨೩ರ ಚುನಾವಣೆಯಲ್ಲೇ ಗೆಲ್ಲುವುದಿಲ್ಲ. ಯಾಕೆಂದರೆ, ಡಿ.ಕೆ.ಶಿವಕುಮಾರ್ ಅವರೇ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಕೇಂದ್ರ ಸರಕಾರ ವಿತರಿಸಿರುವ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸ್ಟಿಕ್ಕರ್‌ ಗಳನ್ನು ಬಸ್‌ಗಳಿಗೆ ಅಂಟಿಸಿದ ನಂತರ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಕಳೆದ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ ಅವರು ಗೆದ್ದರೆ ಮುಖ್ಯಮಂತ್ರಿ ಆಗ್ತಾರೆ ಎಂದು ಸಿದ್ದರಾಮಯ್ಯ ಅವರೇ ಸೋಲಿಸಿದರು. ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ ಇದೇ ಸ್ಥಿತಿ ಡಿ.ಕೆ.ಶಿವಕುಮಾರ್‌ ಅವರಿಂದ ಆಗುತ್ತದೆ ಎಂದರು.

ʻʻಮುಖ್ಯಮಂತ್ರಿ ಬದಲಾಗುತ್ತಾರೆಂದು ಟ್ವೀಟ್ ಮಾಡುವವರಿಗೆ ಬುದ್ಧಿ ಭ್ರಮಣೆಯಾಗಿದೆ. ಅಧಿಕಾರಕ್ಕೆ ಬರೋದಿಲ್ಲ ಎಂದು ತಲೆ ಕೆಡಿಸಿಕೊಂಡಿದ್ದಾರೆ. ನಮ್ಮ ಪಕ್ಷದ ಸಿಎಂ ಬದಲಾವಣೆ ವಿಚಾರದಲ್ಲಿ ಮಾತನಾಡಲು ಇವರ್ಯಾರು? ಇಂತಹ ಹೇಳಿಕೆ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜನರ ವಿಶ್ವಾಸ ಗಳಿಸಿಕೊಳ್ಳುವ ಯೋಗ್ಯತೆ ಕಳೆದು ಕೊಂಡಿದ್ದಾರೆʼʼ ಎಂದು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ಮಾಡಿದರು ಶ್ರೀರಾಮುಲು.

ಕ್ಷೇತ್ರ ಇನ್ನೂ ನಿರ್ಧರಿಸಿಲ್ಲ
ʻʻಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ನಾನು ಇನ್ನು ತೀರ್ಮಾನಿಸಿಲ್ಲ, ಮುಂಚೆಯಿಂದಲೂ ಬಳ್ಳಾರಿ ಜಿಲ್ಲೆಯ ಜನರು ನನ್ನನ್ನು ಬೆಳೆಸಿದ್ದಾರೆ‌. ಟಿಕೆಟ್ ವಿಚಾರ ಬಂದಾಗ, ಪಕ್ಷದ ನಿರ್ಧಾರಕ್ಕೆ ಬದ್ದನಾಗಿರುತ್ತೇನೆʼʼ ಎಂದರು ಹಾಲಿ ಮೊಳಕಾಲ್ಮುರು ಕ್ಷೇತ್ರದ ಶಾಸಕರಾಗಿರುವ ಶ್ರೀರಾಮುಲು.

ಸಾರಿಗೆ ನೌಕರರ ವೇತನ ಪರಿಷ್ಕರಣೆ
ʻʻಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದೇನೆ, ವೇತನ ಪರಿಷ್ಕರಿಸಲಾಗುತ್ತದೆ. ಡಿಸೇಲ್ ಖರೀದಿ ಸೇರಿದಂತೆ ಇತರ ವೆಚ್ಚಕ್ಕೆ 900 ಕೋಟಿ ರೂ.ಗಳನ್ನು ನೀಡಲಾಗಿದೆ. ಈಗ ನಿವೃತ್ತಿಯಾಗುವ ಚಾಲಕ ಪಿಟ್ನೆಸ್ ನೋಡಿ, ಒಂದು ವರ್ಷದವರೆಗೆ ಸೇವೆ ಮುಂದುವರಿಸಲು ಚಿಂತನೆ ನಡೆದಿದೆʼʼ ಎಂದು ಸಚಿವ ಶ್ರೀರಾಮುಲು ಹೇಳಿದರು.

ಇದನ್ನೂ ಓದಿ| ಮುಂದಿನ ಸಿಎಂ ಶ್ರೀರಾಮುಲು ಎಂದು ಎತ್ತಿನ ಮೇಲೆ ಬರೆದ ರೈತ, ಫೋಟೊ ವೈರಲ್

Exit mobile version