ಬೆಂಗಳೂರು: ಕಾಂಗ್ರೆಸ್ ಸಂಪೂರ್ಣ ಬಹುಮತಕ್ಕೆ ಬಂದು ಅಧಿಕಾರದ ಚುಕ್ಕಾಣಿ ಹಿಡಿದಾಗಿದೆ. ಅಲ್ಲದೆ, ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ (Siddaramaiah) ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಇನ್ನೂ ಮುಖ್ಯಮಂತ್ರಿ ಗಾದಿಯ ಅಧಿಕಾರ ಹಂಚಿಕೆ ಬಗ್ಗೆ ಬಹಳವೇ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಸಚಿವ ಎಂ.ಬಿ. ಪಾಟೀಲ್ ಅವರ ಹೇಳಿಕೆಯು ಆ ಪಕ್ಷದಲ್ಲಿ ಸಂಚಲನವನ್ನುಂಟು ಮಾಡಿದ್ದರೆ, ಈ ವಿಷಯವಾಗಿ ಬಿಜೆಪಿ ಸಹ ಕಾಲೆಳೆದಿದೆ. ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವುದು ಇಲ್ಲ ಎಂದು ಭವಿಷ್ಯ ನುಡಿದಿದೆ.
ಬಿಜೆಪಿ ಟ್ವೀಟ್‌ನಲ್ಲೇನಿದೆ?
ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, “ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವುದು ಇಲ್ಲ, ಅವರನ್ನು ಆಗಲು ಸಿದ್ದರಾಮಯ್ಯ ಅವರು ಬಿಡುವುದೂ ಇಲ್ಲ. ಸಚಿವ ಎಂ.ಬಿ. ಪಾಟೀಲ್ ಅವರ ಈ ಹೇಳಿಕೆಯ ಮೂಲಕ ಡಿ.ಕೆ. ಶಿವಕುಮಾರ್ ಅವರಿಗೆ ನೇರವಾದ ಎಚ್ಚರಿಕೆಯನ್ನು ರವಾನಿಸಿದ್ದಾರಷ್ಟೇ!”.
ಇದನ್ನೂ ಓದಿ: 2000 Notes Withdrwan : ನೋಟು ಬದಲಿಸಲು ಯಾವುದೇ ದಾಖಲೆ, ಅರ್ಜಿ ಬೇಕಿಲ್ಲ: ಬ್ಯಾಂಕ್‌ಗಳು ಹೇಳಿದ್ದೇನು?
“ಅದೇನೆ ಇದ್ದರೂ ಬಹುಮತ ದೊರಕಿದ ನಂತರದ ಈವರೆಗಿನ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ, ಈ ಸರ್ಕಾರ ಸುಸ್ಥಿರವಾಗಿರಲಿದೆ ಎಂಬ ಯಾವ ಲಕ್ಷಣವೂ ಕಾಣುತ್ತಿಲ್ಲ, ಗ್ಯಾರಂಟಿಯೂ ಇಲ್ಲ.”
“ದೆಹಲಿಯ ತಮ್ಮ ಹೈಕಮಾಂಡಿಗೆ ಕಪ್ಪ ಪೂರೈಸಬೇಕಾದ ಏಕೈಕ ಮಾನದಂಡದಲ್ಲಿ ಈ ಎಟಿಎಂ ಸರ್ಕಾರ (#ATMSarkara) ರಚನೆಯಾಗಿರುವುದು ಮತ್ತು ಅದಷ್ಟೇ ಇದರ ಆದ್ಯತೆಯಾಗಿರುವುದು ರಾಜ್ಯದ ದುರಂತ!” ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಈ ಮೂಲಕ ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಹೈಕಮಾಂಡ್‌ನ ಎಟಿಎಂ ಎಂದು ಬಿಜೆಪಿ ದೂರಿದ್ದಲ್ಲದೆ, ಡಿ.ಕೆ. ಶಿವಕುಮಾರ್ ಅವರಿಗೆ ಯಾವುದೇ ಕಾರಣಕ್ಕೂ ಅಧಿಕಾರ ಹಂಚಿಕೆ ಆಗುವುದಿಲ್ಲ ಎಂದು ಹೇಳಿದೆ. ಜತೆಗೆ ಸರ್ಕಾರದ ಸುಸ್ಥಿರತೆ ಬಗ್ಗೆಯೂ ಅನುಮಾನವನ್ನು ವ್ಯಕ್ತಪಡಿಸಿದೆ.
ಬಿಜೆಪಿ ಮಾಡಿರುವ ಟ್ವೀಟ್
ದೆಹಲಿಗೆ ಕಪ್ಪ ಕಳುಹಿಸಲೇಬೇಕು
ಇನ್ನು ಈ ಕುರಿತು ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ, ದೆಹಲಿಗೆ ಕಪ್ಪ ಕಳುಹಿಸಲೇಬೇಕು ಎಂದು ಹೇಳಿದೆ. “ಕಾಂಗ್ರೆಸ್ ಹೈ ಕಮಾಂಡಿಗೂ ಹಾಗೂ ಸಿದ್ದರಾಮಯ್ಯ ಅವರ ಎಟಿಎಂ ಸರ್ಕಾರಕ್ಕೂ (#ATMSarkara) ಇರುವ ಡೀಲೇ ಅದು. ಸರ್ಕಾರದ ಈ ಆದೇಶ ರಾಜ್ಯದ ಪ್ರಗತಿಗೆ ಮಾರಕ, ಕಾಂಗ್ರೆಸ್ ಖಜಾನೆಗೆ ಪೂರಕ!” ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: Karnataka CM: ಸಿದ್ದು ಪೂರ್ಣಾವಧಿ ಸಿಎಂ; ವರಿಷ್ಠರು ಹೇಳಿದ್ದನ್ನೇ ಹೇಳಿದ್ದು ಎಂದ ಎಂಬಿಪಿ; ಡಿಸ್ಟರ್ಬ್ ಆದ್ರಾ ಡಿಕೆಶಿ?
ಎಂ.ಬಿ. ಪಾಟೀಲ್ ಹೇಳಿದ್ದೇನು?
ಮೈಸೂರಿನ ಸುತ್ತೂರು ಮಠಕ್ಕೆ ಸೋಮವಾರ ಭೇಟಿ ನೀಡಿದ್ದ ಎಂ.ಬಿ ಪಾಟೀಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಲೋಕಸಭಾ ಚುನಾವಣೆ ಬಳಿಕ ಪಕ್ಷದಲ್ಲಿ ಯಾವುದೇ ಬದಲಾವಣೆಯಿಲ್ಲ. ಮುಂದಿನ 5 ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದು ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿ ಮಾಡಿದೆ. ಈ ನಡುವೆ ಇದರ ಬಗ್ಗೆ ಮಂಗಳವಾರ ಪುನಃ ಸ್ಪಷ್ಟೀಕರಣ ನೀಡಿರುವ ಸಚಿವ ಎಂ.ಬಿ. ಪಾಟೀಲ್, ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ನಾನು ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.