ದೇಹಕ್ಕೆ ವಯಸ್ಸಾಗಿದೆ ಅಷ್ಟೇ. ರಾಜಕಾರಣಕ್ಕೆ ಈಗಲೂ (ವಿಧಾನಸೌಧ ರೌಂಡ್ಸ್) ನನಗೆ ನಲವತ್ತೈದು ವರ್ಷ ಅನ್ನೋ ರೀತಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಒಂದು ಕಾಲದ ತಮ್ಮ ರಾಜಕೀಯ ಒಡನಾಡಿ ಈಗ ಬದ್ಧಶತ್ರು ಸಿದ್ದರಾಮಯ್ಯ ಹಾಗೂ ಒಕ್ಕಲಿಗ ಸಮುದಾಯದಲ್ಲಿ ತಮ್ಮ ಮಕ್ಕಳ ಪಾಲಿಗೆ ವಿಲನ್ ಆಗ್ತಿರುವ ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ I.N.D.I.A ಒಕ್ಕೂಟ ಸೋಲಿಸುವುದು ಅಷ್ಟೇ ಅಲ್ಲ, ಇಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸುತ್ತೇನೆ ಎಂದು ದೇವೇಗೌಡರು ಭೀಷ್ಮ ಶಪಥಗೈದಿದ್ದಾರೆ. ಗೌಡರ ಈ ಗುಡುಗಿಗೆ ಅಷ್ಟೇ ಸಮಾಧಾನವಾಗಿ ಸಿದ್ದರಾಮಯ್ಯ ಅವರು, ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ಈ ಇಳಿವಯಸ್ಸಿನಲ್ಲಿ ಸಿದ್ಧಾಂತದ ಜೊತೆ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ಚೆಕ್‌ಮೇಟ್ ಕೊಟ್ಟಿದ್ದಾರೆ.
ಇನ್ನು ಗೌಡರ ಮಾತಿಗೆ ಡಿ ಕೆ ಶಿವಕುಮಾರ್ ಯಾವುದೇ ಪ್ರತ್ಯುತ್ತರ ಕೊಟ್ಟಿಲ್ಲ. ಮೈತ್ರಿ ಬಳಿಕ ಬಿಡದಿ ತೋಟದ ಮನೆಗೆ ಭಾರಿ ಡಿಮ್ಯಾಂಡ್ ಬಂದಿದೆ. ಬಿಜೆಪಿ ನಾಯಕರು ಇತ್ತ ಡಾಲರ್ಸ್ ಕಾಲೋನಿ, ಅತ್ತ ಬಿಡದಿ ಮನೆಗೆ ಜೋರಾಗಿ ಓಡಾಡುತ್ತಿದ್ದಾರೆ. ಹಾಲಿ ಸಚಿವರಿಗೆ ಎಲೆಕ್ಷನ್‌ನಲ್ಲಿ ಅಭ್ಯರ್ಥಿ ಆಗೋದು ನಿದ್ದೆಗೆಡಿಸಿದರೆ ಡಿ ಕೆ ಶಿವಕುಮಾರ್‌ಗೆ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡೋ ಚರ್ಚೆ ನಿದ್ದೆಗೆಡಿಸಿದೆ!
ಗೌಡರ ಗುಡುಗಿಗೆ ಕಾಂಗ್ರೆಸ್ ಸೈಲೆಂಟ್!:
2024 ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಇತ್ತ ಕಾಂಗ್ರೆಸ್ ವಿರುದ್ಧ ಎಲೆಕ್ಷನ್ ಎದುರಿಸಲು ಮೈತ್ರಿ ಮಾಡಿಕೊಂಡಿರುವ ಬಿಜೆಪಿ, ಜೆಡಿಎಸ್ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಂದಾಗಿ ಹೇಳಿಕೆ ಕೊಡ್ತಿದ್ದಾರೆ. ಈ ನಡುವೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಬಾಯಲ್ಲಿ ಬಂದ ಕಾಂಗ್ರೆಸ್ ನಿರ್ನಾಮ ಹೇಳಿಕೆ ರಾಜ್ಯ ಕೈ ನಾಯಕರ ನಿದ್ದೆಗೆಡಿಸಿದೆ. ಜೆ ಪಿ ಭವನದಲ್ಲಿ ಮಾತನಾಡುವ ಸಂದರ್ಭದಲ್ಲಿ INDIA ಒಕ್ಕೂಟಕ್ಕೆ ಸೋಲೋಣಿಸುವುದು ಅಷ್ಟೇ ಅಲ್ಲ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ಅನ್ನು ನಿರ್ನಾಮ ಮಾಡುತ್ತೇವೆ ಎನ್ನುವ ಹೇಳಿಕೆ ಕಾಂಗ್ರೆಸ್ ನಾಯಕರ ಕೋಪಕ್ಕೆ ಕಾರಣವಾಗಿದೆ. 2014ರಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡ್ತೀವಿ ಅಂದಾಗ ಇದೇ ದೇವೇಗೌಡರು ಆ ಹೇಳಿಕೆಯನ್ನ ಖಂಡಿಸಿದರು. ಆದರೆ ಇಂದು ಅವರೇ ಮುಕ್ತ ಮಾಡ್ತೀವಿ ಅಂತ ಹೇಳಿರುವುದು ಕೈ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹೇಳಿಕೆ ಬೆನ್ನಲ್ಲೇ ಗೌಡರ ಒಂದು ಕಾಲದ ಒಡನಾಡಿ ಸಿದ್ದರಾಮಯ್ಯ ಅವರು, ಗೌಡರು ತಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕೆ ಸೈದ್ಧಾಂತಿಕ ಹೊಂದಾಣಿಕೆ ಮಾಡಿಕೊಂಡು ಈ ರೀತಿ ಒಂದು ಪಕ್ಷದ ನಿರ್ನಾಮ ಆಗಬೇಕು ಅಂತ ಬಯಸುವುದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದ್ದಾರೆ. ಪ್ರದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಜೊತೆ ಅನಿವಾರ್ಯ ಹೊಂದಾಣಿಕೆ ಮಾಡಿಕೊಳ್ಳುವುದು ಹೊಸದೇನಲ್ಲ. ಮೈತ್ರಿ ಪ್ರಶ್ನೆ ಬಂದಾಗ ತತ್ತ್ವ, ಸಿದ್ಧಾಂತಗಳು ಗೌಣವಾಗುತ್ತವೆ. ತಾತ್ಕಾಲಿಕ ಲಾಭವೇ ಪ್ರಧಾನವಾಗುತ್ತದೆ. ಆಯಾ ಕಾಲಕ್ಕೆ ದೊಡ್ಡ ಪಕ್ಷಗಳ ಜತೆ ಪ್ರಾದೇಶಿಕ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವೂ ಆಗುತ್ತಿದೆ. ಇಲ್ಲದಿದ್ದರೆ, ಸಣ್ಣ ಮೀನನ್ನು ದೊಡ್ಡ ಮೀನು ನುಂಗಿ ಹಾಕುವಂತೆ ಪ್ರಾದೇಶಿಕ ಪಕ್ಷಗಳನ್ನು ದೊಡ್ಡ ಪಕ್ಷ ಆಪೋಷಣ ತೆಗೆದುಕೊಳ್ಳುವ ಅಪಾಯ ಇರುತ್ತದೆ!
ಮಾಜಿ ಸಿಎಂಗಳ ಮನೆಯಲ್ಲಿ ಟಿಕೆಟ್ ಆಕಾಂಕ್ಷಿಗಳು:
ರಾಜಕಾರಣದಲ್ಲಿ ನಿನ್ನೆ ಶತ್ರು ಆದವನು ಇಂದು ಮಿತ್ರ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಒಂದು ಕಾಲದಲ್ಲಿ ದೇವೇಗೌಡರ ರಾಜಕಾರಣದ ಬಗ್ಗೆ ಅತ್ಯಂತ ಹೀನಾಯವಾಗಿ ಮಾತನಾಡಿದ್ದ ಸಂಸದ ಪ್ರತಾಪಸಿಂಹ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕನಿಕರ ವ್ಯಕ್ತಪಡಿಸಿದ್ದಾರೆ! ಬಿಜೆಪಿ ನಾಯಕರೇ ಬಹಿರಂಗ ಹೇಳಿಕೆ ಕೊಡಲು ಹಿಂದೆ ಮುಂದೆ ನೋಡಿದ ಪ್ರಕರಣದಲ್ಲಿ ಕುಮಾರಸ್ವಾಮಿ ಅವರು ಪ್ರತಾಪ ಸಿಂಹ ಅವರ ಸಹೋದರನ ಪರ ವಕಾಲತು ವಹಿಸಿ ಸಿದ್ದರಾಮಯ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ಜಾಡಿಸಿದಕ್ಕೆ ಪ್ರತಾಪ ಸಿಂಹ ಸಾಮಾಜಿಕ ಜಾಲತಾಣದಲ್ಲಿಯೇ ಧನ್ಯವಾದಗಳು ಕುಮಾರಣ್ಣಾ ಎಂದು ಬರೆದುಕೊಂಡಿದ್ದಾರೆ. ಇನ್ನು ಮೈತ್ರಿ ಪಕ್ಕಾ ಆದ ಬೆನ್ನಲ್ಲೇ ಡಾಲರ್ಸ್ ಕಾಲೊನಿಯಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಡದಿಯಲ್ಲಿರುವ ಎಚ್ಡಿ ಕುಮಾರಸ್ವಾಮಿ ಮನೆಗೆ ಬರುವ ರಾಜಕೀಯ ನೆಂಟರ ಸಂಖ್ಯೆ ದುಪ್ಪಟ್ಟು ಆಗಿದೆ. ಡಾಲರ್ಸ್ ಕಾಲೊನಿಯಲ್ಲಿ ಯಡಿಯೂರಪ್ಪ ಜತೆ ಮಾತನಾಡಿ ತದ ಬಳಿಕ ಬಿಡದಿ ತೋಟದ ಮನೆಗೆ ಹೋಗಿ ಕುಮಾರಸ್ವಾಮಿ ಜತೆ ಮಾತುಕತೆ ನಡೆಸುತ್ತಿದ್ದಾರೆ. ಒಟ್ಟಾರೆ ಚುನಾವಣೆಗೆ ಐದು ತಿಂಗಳ ಮೊದಲೇ ಮಾಜಿ ಸಿಎಂಗಳಿಗೆ ಡಿಮ್ಯಾಂಡ್ ಶುರುವಾಗಿದೆ.
ಇದನ್ನೂ ಓದಿ : ವಿಧಾನಸೌಧ ರೌಂಡ್ಸ್: ಬಿಜೆಪಿ ಶಾಸಕರಲ್ಲಿ ಇಲ್ಲ ಒಗ್ಗಟ್ಟು, ಕಾಂಗ್ರೆಸ್‌ಗೆ ತಪ್ಪಿತು ಇಕ್ಕಟ್ಟು!
ಸಿದ್ದರಾಮಯ್ಯ ದೇವರ ವಿಚಾರದಲ್ಲಿ ಎಷ್ಟೇ ಎಚ್ಚರಿಕೆಯಿಂದ ಇದ್ರೂ ಸುದ್ದಿ ಆಗ್ತಾರೆ!:
ಸಿಎಂ ಸಿದ್ದರಾಮಯ್ಯ ದೇವರ ವಿಚಾರದಲ್ಲಿ ಏನೇ ಎಚ್ಚರಿಕೆಯ ಹೆಜ್ಜೆ ಇಟ್ಟರೂ ಸುದ್ದಿ ಆಗ್ತಾರೆ. ಸಂದರ್ಭ ಅವರನ್ನು ಹಾಗೆ ಮಾಡುತ್ತದೆಯೋ, ಇಲ್ಲ ಸಮಯವೇ ಅವರನ್ನು ಆ ರೀತಿ ನಡೆದುಕೊಳ್ಳುವಂತೆ ಪ್ರೇರೇಪಣೆ ನೀಡುತ್ತದೆಯೋ ಗೊತ್ತಿಲ್ಲ. ಆದರೆ ಆಗಾಗ ದೇವಸ್ಥಾನ ಮತ್ತು ಮಂದಿರ, ಮಸೀದಿ ವಿಚಾರದಲ್ಲಿ ಸುದ್ದಿ ಆಗ್ತಾನೇ ಇರುತ್ತಾರೆ. ಮೊನ್ನೆ ಬಿಜಾಪುರಕ್ಕೆ ಹೋದಾಗ ಆ ದೇವಸ್ಥಾನದ ಒಳಗೆ ಹೋಗಿದ್ದರೆ ಸುದ್ದಿಯೇ ಆಗ್ತಿರಲಿಲ್ಲ. ಆದರೆ ಸಚಿವರು ಬಲವಂತ ಮಾಡಿದರೂ ಒಳಗೆ ಹೋಗದಿರುವುದು ಸಿದ್ದರಾಮಯ್ಯ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಲು ಕಾರಣವಾಯಿತು. ಮಸೀದಿಗಾದರೆ ಹೋಗ್ತಾರೆ, ದೇವಸ್ಥಾನದ ಒಳಗೆ ಹೋಗಲ್ಲ ಎಂದು ಟೀಕಿಸುವವರ ಕೈಗೆ ಸಿದ್ದರಾಮಯ್ಯ ಕೋಲು ಕೊಟ್ಟಂತಾಯಿತು!
ಸಚಿವರಿಗೆ ಎಲೆಕ್ಷನ್ ಟೆನ್ಸನ್:
ರಾಜ್ಯದಲ್ಲಿ ಕಾಂಗ್ರೆಸ್ ಹತ್ತಕ್ಕೂ ಅಧಿಕ ಕ್ಷೇತ್ರಗಳಲ್ಲಿ ಅಭ್ಯರ್ಥಿ ಕೊರತೆ ಎದ್ದು ಕಾಣಿಸುತ್ತಿದೆ. ಜತೆಗೆ ರಾಜ್ಯದಿಂದ ಅಧಿಕ ಸ್ಥಾನ ಗೆಲ್ಲಿಸಿ ಕಳುಹಿಸಬೇಕು ಅನ್ನೋ ಟಾಸ್ಕ್ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮೇಲೆ ಇದೆ. ಹೀಗಾಗಿ ಪ್ರಬಲ ಅಭ್ಯರ್ಥಿ ಕೊರತೆ ಇರೋ ಕಡೆ ಸಚಿವರನ್ನು ಕಣಕ್ಕೆ ಇಳಿಸುವ ಪ್ಲಾನ್‌ನಲ್ಲಿ ಹೈಕಮಾಂಡ್ ಇದ್ದರೂ ಸಚಿವರಿಗೆ ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರ ರಾಜಕಾರಣ ಮಾಡುವ ಆಸಕ್ತಿ ಇಲ್ಲದಾಗಿದೆ. ಆಸಕ್ತಿ ಏಕಿಲ್ಲ ಎಂದರೆ ಮೋದಿ ಅಲೆಯಲ್ಲಿ ಎಲ್ಲಿ ಸೋತು ಹೋಗುತ್ತೆವೆಯೋ ಎಂಬ ಭಯ! ಹಾಗಾಗಿ, ನಾವು ನಿಲ್ಲೋದಿಲ್ಲ. ಹೈಕಮಾಂಡ್ ಟಿಕೆಟ್ ಕೊಟ್ಟವರಿಗೆ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳುತ್ತಿದ್ದಾರೆ.
ಡಿಕೆಶಿ ನಿದ್ದೆಗೆಡಿಸಿದೆ ಡಿಸಿಎಂ ಹುದ್ದೆ ಸೃಷ್ಟಿ ಪ್ರಶ್ನೆ:
ಮೇ ತಿಂಗಳಲ್ಲಿ ಸರ್ಕಾರ ರಚನೆ ಆಗುವಾಗ ಒಂದಕ್ಕಿಂತ ಹೆಚ್ಚು ಡಿಸಿಎಂ ಹುದ್ದೆ ಸೃಷ್ಟಿ ಆಗಬಾರದು ಅಂತ ಷರತ್ತು ಹಾಕಿದ್ದ ಡಿಕೆಶಿಗೆ ಈಗ ರಾಜ್ಯ ಸಚಿವರು ಟೆನ್ಸನ್ ಕೊಡ್ತಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಅನಿವಾರ್ಯ ಅಂತ ಬಹಿರಂಗ ಹೇಳಿಕೆ ಕೊಡ್ತಿದ್ದಾರೆ. ಈ ಹಿಂದೆ ಇಂತಹ ಚರ್ಚೆ ಆರಂಭವಾದಾಗ ಹೈಕಮಾಂಡ್ ಎಂಟ್ರಿ ಕೊಟ್ಟು ತಾತ್ಕಾಲಿಕ ತಡೆ ಹಾಕಿತ್ತು. ಈಗ ಮತ್ತೆ ಡಿಸಿಎಂ ಪ್ರಸ್ತಾಪ ಸದ್ದು ಮಾಡುತ್ತಿದೆ. ಡಿ ಕೆ ಶಿವಕುಮಾರ್ ತಲೆಬಿಸಿ ಮಾಡಿಕೊಳ್ಳುವಂತಾಗಿದೆ.
ಸುಮಲತಾ ರಾಜಕೀಯಕ್ಕೆ ಬ್ರೇಕ್?:
ಕಳೆದ ಚುನಾವಣೆಯಲ್ಲಿ ಮಾಜಿ ಸಿಎಂ ಮಗನಿಗೆ ಸೋಲು ಕಾಣಿಸಿದ್ದ ಸಂಸದೆ ಸುಮಲತಾ ರಾಜಕೀಯ 2024ರಲ್ಲಿ ಅಷ್ಟು ಸುಲಭ ಇದ್ದಂತೆ ಕಾಣಿಸುತ್ತಿಲ್ಲ. ಬಿಜೆಪಿ – ಜೆಡಿಎಸ್ ಮೈತ್ರಿಯಿಂದ ಮಂಡ್ಯ ಸ್ಥಾನ ಜೆಡಿಎಸ್ ಹೋಗುವುದು ಪಕ್ಕಾ. ಇದೇ ಪರಿಸ್ಥಿತಿ 2019ರಲ್ಲೂ ಆಗಿತ್ತು. ಅಂದು ಕಾಂಗ್ರೆಸ್ – ಜೆಡಿಎಸ್ ಮೈತ್ರಿಯಿಂದ ಈ ಕ್ಷೇತ್ರ ಜೆಡಿಎಸ್ ಸಿಕ್ಕಿತ್ತು. ಈಗಲೂ ಪರಿಸ್ಥಿತಿ ಬದಲಾಗಲ್ಲ. ಜೆಡಿಎಸ್ ಗೆ ಈ ಕ್ಷೇತ್ರ ಹಂಚಿಕೆಯಾಗಲಿದೆ. ಹೀಗಾಗಿ ಸುಮಲತಾಗೆ ಬಿಜೆಪಿಯಿಂದ ಟಿಕೆಟ್ ಸಿಗುವ ಚಾನ್ಸ್ ಇಲ್ಲ. ಇತ್ತ ಕಾಂಗ್ರೆಸ್ ನಾಯಕರ ಜತೆ ಸುಮಲತಾ ರಾಜಕೀಯ ಸಂಬಂಧ ಸರಿಯಿಲ್ಲ. ಈ ಲೆಕ್ಕಾಚಾರ ಹಾಕಿದ್ರೆ ಸುಮಲತಾಗೆ ರಾಜಕೀಯ ಜೀವನ ಅಷ್ಟು ಸುಲಭವಲ್ಲ ಅನ್ನೋ ಮಾತನ್ನ ಮಂಡ್ಯ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮೈತ್ರಿ ನಾಯಕರ ಜತೆ ಸಂಧಾನ ಮಾಡಿಕೊಂಡು ಕ್ಷೇತ್ರದ ಗೂಡು ಬದಲಿಸುತ್ತಾರಾ? ಇಲ್ಲವೇ ಮತ್ತೊಮ್ಮೆ ಸ್ವಾಭಿಮಾನದ ಪಾಲಿಟಿಕ್ಸ್ ಪ್ರದರ್ಶಿಸುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.