ಬೆಂಗಳೂರು: ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಈಗ ಮುಖ್ಯಮಂತ್ರಿಯಾಗಿ (Karnataka CM) ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯ (Siddaramaiah) ಅವರು ಪೂರ್ಣಾವಧಿ ಸಿಎಂ ಆಗಿರಲಿದ್ದು, ಅಧಿಕಾರ ಹಂಚಿಕೆ ಇಲ್ಲ ಎಂಬ ಸಚಿವ ಎಂ.ಬಿ. ಪಾಟೀಲ್ (MB Patil) ಹೇಳಿಕೆಯು ಆ ಪಕ್ಷದೊಳಗೆ ಸಂಘರ್ಷಕ್ಕೆ ಕಾರಣವಾಗಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಮುನಿಸಿಕೊಂಡಿದ್ದರೆ, ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ (DK Suresh) ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. “ನಾನು ತೀಕ್ಷ್ಣವಾಗಿ ಮಾತನಾಡಬಲ್ಲೆ ಆದರೆ ಬೇಡ” ಎಂದು ಎಂ.ಬಿ. ಪಾಟೀಲ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎಂ.ಬಿ. ಪಾಟೀಲ್ ಹೇಳಿಕೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆ.ಸಿ. ವೇಣುಗೋಪಾಲ್ ಅವರ ಬಳಿ ಹೋಗಿ ಕೇಳಿ ಎಂದು ಮಾಧ್ಯಮದವರ ಮುಂದೆ ಡಿ.ಕೆ. ಸುರೇಶ್ ಅವರು ಮಾಧ್ಯಮಗಳ ಮುಂದೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಇದನ್ನೂ ಒದಿ: Karnataka CM: ಡಿ.ಕೆ. ಶಿವಕುಮಾರ್ ಸಿಎಂ ಆಗಲ್ಲ, ಆಗಲು ಸಿದ್ದರಾಮಯ್ಯ ಬಿಡುವುದೂ ಇಲ್ಲ: ಕಾಲೆಳೆದ ಬಿಜೆಪಿ
ನಾನು ತೀಕ್ಷ್ಣವಾಗಿ ಮಾತನಾಡಬಲ್ಲೆ, ಆದರೆ ಬೇಡ. ಎಂ.ಬಿ. ಪಾಟೀಲ್ ಅವರ ಹೇಳಿಕೆಗೆ ನಾನು ಉತ್ತರ ಕೊಡಬಲ್ಲೆ. ಆದರೆ, ಅದು ಬೇಡ ಎಂದು ಡಿ.ಕೆ. ಸುರೇಶ್ ಹೇಳುವ ಮೂಲಕ ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷರು ನೋಡಿಕೊಳ್ಳುತ್ತಾರೆ: ಡಿ.ಕೆ. ಶಿವಕುಮಾರ್
ಎಂ.ಬಿ. ಪಾಟೀಲ್ ಹೇಳಿಕೆ ವಿಚಾರವಾಗಿ ಮಾಧ್ಯಮದವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದಾಗ, ಯಾರು ಏನೇ ಹೇಳಿಕೆ ಕೊಡಲಿ. ಎಐಸಿಸಿ ಸಮಿತಿ ಇದೆ, ಎಐಸಿಸಿ ಅಧ್ಯಕ್ಷರಿದ್ದಾರೆ. ಈ ವಿಷಯವನ್ನು ಅವರು ನೋಡಿಕೊಳ್ಳುತ್ತಾರೆ. ನಾನು ಈ ಬಗ್ಗೆ ಯಾವುದೇ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆ.ಸಿ. ವೇಣುಗೋಪಾಲ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೋಡಿಕೊಳ್ಳುತ್ತಾರೆ ಎಂದು ಪರೋಕ್ಷ ಸಂದೇಶವನ್ನು ನೀಡಿದ್ದಾರೆ.
ಎಂ.ಬಿ. ಪಾಟೀಲ್ ಹೇಳಿದ್ದೇನು?
ಮೈಸೂರಿನ ಸುತ್ತೂರು ಮಠಕ್ಕೆ ಸೋಮವಾರ ಭೇಟಿ ನೀಡಿದ್ದ ಎಂ.ಬಿ. ಪಾಟೀಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಲೋಕಸಭಾ ಚುನಾವಣೆ ಬಳಿಕ ಪಕ್ಷದಲ್ಲಿ ಯಾವುದೇ ಬದಲಾವಣೆಯಿಲ್ಲ. ಮುಂದಿನ 5 ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದು ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿ ಮಾಡಿದೆ. ಈ ನಡುವೆ ಇದರ ಬಗ್ಗೆ ಮಂಗಳವಾರ ಪುನಃ ಸ್ಪಷ್ಟೀಕರಣ ನೀಡಿರುವ ಸಚಿವ ಎಂ.ಬಿ. ಪಾಟೀಲ್, ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ನಾನು ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: Karnataka CM: ಸಿದ್ದು ಪೂರ್ಣಾವಧಿ ಸಿಎಂ; ವರಿಷ್ಠರು ಹೇಳಿದ್ದನ್ನೇ ಹೇಳಿದ್ದು ಎಂದ ಎಂಬಿಪಿ; ಡಿಸ್ಟರ್ಬ್ ಆದ್ರಾ ಡಿಕೆಶಿ?
ಈ ಬಗ್ಗೆ ಮಾತನಾಡಿರುವ ಎಂ.ಬಿ. ಪಾಟೀಲ್, ನಾನು ಪದೇ ಪದೆ ಈ ಬಗ್ಗೆ ಮಾತನಾಡಲ್ಲ. ನಿನ್ನೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ. ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಎಂದು ನಮ್ಮ ನಾಯಕರಾದ ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಅವರು ಏನು ಹೇಳಿದ್ದರೋ ನಾನೂ ಅದನ್ನೇ ಹೇಳಿದ್ದೇನೆ. ಅಧಿಕಾರ ಹಂಚಿಕೆ ಇಲ್ಲ, ಅದೇನಿದ್ದರೂ ಜನರ ಜತೆ ಮಾತ್ರ ಎಂದು ಹೇಳಿದ್ದರು. ಇದರಲ್ಲಿ ನನ್ನದು ಯಾವುದೇ ಹೇಳಿಕೆ ಇಲ್ಲ. ನಾನು ವೈಯಕ್ತಿಕವಾಗಿ ಮಾತನಾಡಿಲ್ಲ. ಎಐಸಿಸಿ ಪ್ರದಾನ ಕಾರ್ಯದರ್ಶಿ ವೇಣುಗೋಪಾಲ್ ಹೇಳಿದ್ದನ್ನು ಮಾತ್ರವೇ ನಾನು ಹೇಳಿದ್ದೇನೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಮುಂದುವರಿಯುತ್ತಾರೆ ಎಂದು ಹೇಳಿದ್ದರು. ನಾನೂ ಅದನ್ನೇ ಹೇಳಿದ್ದೇನೆ ಎಂದು ತಿಳಿಸಿದರು.