ರಾಮನಗರ: ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಕನಕಪುರದಲ್ಲಿ ೧೦೦ ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯ ಉದ್ಘಾಟನಾ ಸಮಾರಂಭವು ಸಂಸದ ಡಿ.ಕೆ. ಸುರೇಶ್ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನಡುವಿನ ರಾಜಕೀಯ ವಾಕ್ಸಮರಕ್ಕೆ ಕಾರಣವಾಯಿತು. ಸುಧಾಕರ್ ಅವರು ಕಾಂಗ್ರೆಸ್ ಜತೆ ಕಿತ್ತಾಡಿಕೊಂಡು ಹೋಗುವ ಜತೆಗೆ ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು (Medical College) ಕಿತ್ತೊಕೊಂಡು ಹೋದರು ಎಂದು ಡಿ.ಕೆ. ಸುರೇಶ್ ಕಾಲೆಳೆದರೆ, ಕನಕಪುರಕ್ಕೆ ನಮ್ಮ ಕ್ಲಿನಿಕ್, ಮಹಿಳೆಯರಿಗಾಗಿ ಆಯುಷ್ಮತಿ ಕ್ಲಿನಿಕ್ ಅನ್ನು ವೇದಿಕೆಯಲ್ಲಿಯೇ ಮಂಜೂರು ಮಾಡುತ್ತಿದ್ದೇನೆ ಎಂದು ಡಾ.ಕೆ. ಸುಧಾಕರ್ ಹೇಳಿದರು.
ಕನಕಪುರ ತಹಸೀಲ್ದಾರ್ ಕಚೇರಿ ಪಕ್ಕದಲ್ಲಿ 100 ಬೆಡ್‌ಗಳಿರುವ ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯನ್ನು ಇನ್ಫೋಸಿಸ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ನೇತೃತ್ವದಲ್ಲಿ ನಿರ್ಮಾಣ ಮಾಡಲಾಗಿದ್ದು, ಅದನ್ನು ಭಾನುವಾರ (ಫೆ. ೧೨) ಆರೋಗ್ಯ ಸಚಿವ ಸುಧಾಕರ್ ಉದ್ಘಾಟಿಸಿದರು.
ಡಿ.ಕೆ. ಸುರೇಶ್ ಹೇಳಿದ್ದೇನು?
ಸುಧಾಕರ್ ನಮ್ಮ ಜತೆಯೇ ಇದ್ದವರು. ಆದರೆ, ಕಿತ್ತಾಡಿಕೊಂಡು ಹೋಗಿದ್ದಾರೆ. ಕಿತ್ತಾಡಿಕೊಂಡು ಹೋಗುವ ಜತೆಗೆ ನಮ್ಮ ಮೆಡಿಕಲ್ ಕಾಲೇಜನ್ನೂ ಕಿತ್ತುಕೊಂಡು ಹೋದರು. ಇಂದು ವೇದಿಕೆ ಮೇಲೆ ಆರೋಗ್ಯ ಸಚಿವರು ಇದ್ದಾರೆ. ಅವರು ಮುಂದೆ ಮಾಜಿ, ಹಾಲಿ ಇರುತ್ತಾರೋ ಗೊತ್ತಿಲ್ಲ. ಆದರೆ, ಕನಕಪುರಕ್ಕೆ ಮೆಡಿಕಲ್ ಕಾಲೇಜನ್ನು ತಂದು ಅವರ ಕೈಯಲ್ಲೇ ಉದ್ಘಾಟನೆ ಮಾಡಿಸುತ್ತೇನೆ. ಮುಂದಿನ ದಿನಗಳಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಬಂದೇ ಬರುತ್ತದೆ. ಈಗ ಅವರು ನಮಗೆ ಆಗಿದ್ದ ಮೆಡಿಕಲ್ ಕಾಲೇಜನ್ನು ದೊಡ್ಡಬಳ್ಳಾಪುರಕ್ಕೆ ತಗೆದುಕೊಂಡು ಹೋದರು. ರಾಜಕೀಯವಾಗಿ ಅವರು ಅವರದ್ದೇ ರೀತಿ ಮಾಡಿದ್ದಾರೆ ಇರಲಿ ಎಂದು ಡಿ.ಕೆ. ಸುರೇಶ್ ವ್ಯಂಗ್ಯವಾಡಿದರು.
ಇನ್ನು ಆಹ್ವಾನ ಪತ್ರಿಕೆಯಲ್ಲಿ ಇನ್ಫೋಸಿಸ್ ಹೆಸರು ಬಿಟ್ಟುಹೋಗಿರುವ ವಿಚಾರವಾಗಿ ಕಿಡಿಕಾರಿದ ಡಿ.ಕೆ. ಸುರೇಶ್, ಇಷ್ಟು ದೊಡ್ಡ ಆಸ್ಪತ್ರೆಯನ್ನು ಕಟ್ಟಿಕೊಟ್ಟಿರುವ ಸಂಸ್ಥೆಯ ಹೆಸರನ್ನೇ ಹಾಕಲಾಗಿಲ್ಲ. ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಹಾಕಲಾಗಿಲ್ಲ. ಈ ಸರ್ಕಾರಕ್ಕೆ, ಅಧಿಕಾರಿಗಳಿಗೆ ನಾಚಿಗೆ ಆಗಬೇಕು ಎಂದು ವೇದಿಕೆ ಮೇಲೆ ವಾಗ್ದಾಳಿ ನಡೆಸಿದರು.
ಸುಧಾಕರ್ ತಿರುಗೇಟು
ನಮ್ಮ ಸಂಸದರು ಆಗಾಗ ಮೆಡಿಕಲ್ ಕಾಲೇಜು ಕಿತ್ತುಕೊಂಡು ಹೋದೆ ಎಂದು ಹೇಳುತ್ತಲೇ ಇರುತ್ತಾರೆ. ಮೊದಲ ಬಾರಿಗೆ ನಾನು ಕನಕಪುರಕ್ಕೆ ಬಂದಿದ್ದೇನೆ. ಹಾಗಾಗಿ ನಾನು ಸುಮ್ಮನೆ ಹೋಗಬಾರದು ಎಂಬ ಕಾರಣಕ್ಕೆ ಕನಕಪುರಕ್ಕೆ ನಮ್ಮ ಕ್ಲಿನಿಕ್, ಮಹಿಳೆಯರಿಗಾಗಿ ಆಯುಷ್ಮತಿ ಕ್ಲಿನಿಕ್ ಅನ್ನು ಮಂಜೂರು ಮಾಡಿದ್ದೇನೆ ಎಂದು ಸಚಿವ ಡಾ. ಕೆ. ಸುಧಾಕರ್ ಅವರು, ವೇದಿಕೆ ಮೇಲೆಯೇ ಆಸ್ಪತ್ರೆ ಮಂಜೂರು ಮಾಡಿದರು. ಈ ಮೂಲಕ ಸಂಸದ ಡಿ.ಕೆ. ಸುರೇಶ್ ಮಾತಿಗೆ ವೇದಿಕೆ ಮೇಲೆಯೇ ತಿರುಗೇಟು ನೀಡಿದರು.
ಕನಕಪುರಕ್ಕೆ ಆಗಿರುವ ಮೆಡಿಕಲ್ ಕಾಲೇಜು ನಾನು ತಗೊಂಡು ಹೋಗಲಿಲ್ಲ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ದೊಡ್ಡಬಳ್ಳಾಪುರಕ್ಕೆ ಆಗಿತ್ತು. ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ದೊಡ್ಡಬಳ್ಳಾಪುರಕ್ಕೆ ಕಾಲೇಜನ್ನು ಮಾಡಿಸಿಕೊಟ್ಟರು. ಮುಂದಿನಗಳಲ್ಲಿ ಕನಕಪುರಕ್ಕೂ ಮೆಡಿಕಲ್ ಕಾಲೇಜು ಆಗುತ್ತೆ. ಈ ವಿಚಾರವಾಗಿ ಸಿಎಂ ಹತ್ತಿರ ಈಗಾಗಲೇ ಮಾತನಾಡಲಾಗಿದೆ ಎಂದು ಸುಧಾಕರ್ ತಿಳಿಸಿದರು.
ಇದನ್ನೂ ಓದಿ: Road accident : ತುಮಕೂರಿನ ಶಿರಾ, ಹೊಸಪೇಟೆಯಲ್ಲಿ ಭೀಕರ ಅಪಘಾತ; ಮೂವರು ಬೈಕ್ ಸವಾರರು ದಾರುಣ ಮೃತ್ಯು
ಡಿಕೆಶಿ ಹೊಗಳಿದ ಸುಧಾಕರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಯಾಕೆ ಗೆಲ್ಲುತ್ತಾರೆ ಎಂದು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಮೊದಲು ಕಡಿಮೆ ಮಾರ್ಜಿನ್‌ನಲ್ಲಿ ಅವರು ಗೆಲ್ಲುತ್ತಾ ಇದ್ದರು. ಬರಬರುತ್ತಾ 75 ಸಾವಿರ ಲೀಡ್‌ಗೆ ಹೋಯ್ತು. ಡಿಕೆಶಿ ನರೇಗಾದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಯಾವಾಗಲೂ ಆರೋಗ್ಯಕರ ಪ್ರಜಾಪ್ರಭುತ್ವ ಇರಬೇಕು. ಒಳ್ಳೆಯದನ್ನು ಮಾಡಿದಾಗ ಹೊಗಳಬೇಕು. ಆಡಳಿತ, ವಿರೋಧ ಪಕ್ಷಗಳು ಇದೇ ರೀತಿ ಇರಬೇಕು. ಆಗ ಆರೋಗ್ಯಕರ ಪ್ರಜಾಪ್ರಭುತ್ವ ಇರಲಿದೆ. ಸಂಸದರು ಯಾವಾಗ ನಿದ್ದೆ ಮಾಡುತ್ತಾರೋ ಗೊತ್ತಿಲ್ಲ. ಕನಕಪುರಕ್ಕೆ ಮೂರು ಕಣ್ಣು ಇದೆ ಅಂತ ಕೆಲವರು ಹೇಳುತ್ತಾರೆ. ಡಿ.ಕೆ. ಸುರೇಶ್, ಡಿ.ಕೆ ಶಿವಕುಮಾರ್ ಹಾಗು ಎಂಎಲ್‌ಸಿ ರವಿ ಅವರೇ ಮೂರು ಕಣ್ಣುಗಳಾಗಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ರಾಜಿ ಇಲ್ಲದೇ ಕೆಲಸ ಮಾಡಿದ್ದಾರೆ ಎಂದು ಸುಧಾಕರ್ ಹಾಡಿಹೊಗಳಿದರು.