ಬೆಂಗಳೂರು: ಟಿಪ್ಪು ಸುಲ್ತಾನನನ್ನು ಕೊಂದದ್ದು ಎಂದು ಬಿಜೆಪಿ ಹೇಳುತ್ತಿರುವ ಉರಿಗೌಡ ಹಾಗೂ ನಂಜೇಗೌಡರು ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅಸ್ವಸ್ಥರಾದಾಗ ಸಿಕ್ಕಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಟಿಪ್ಪು ಸುಲ್ತಾನನನ್ನು ಇಬ್ಬರೂ ಕೊಂದರು ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ. ಆದರೆ ಇವರು ಇದ್ದರು ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ, ರಾಜಕೀಯ ಕಾರಣಕ್ಕೆ ಇಬ್ಬರನ್ನೂ ಸೃಷ್ಟಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ಕುರಿತು ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಉಡಿಗೌಡ ಹಾಗೂ ನಂಜೇಗೌಡರ ಬಗ್ಗೆ ಅಶ್ವತ್ಥನಾರಾಯಣ ಅವರನ್ನೇ ಕೇಳಿ ಎಂದು ಸುರೇಶ್ ಹೇಳಿದ್ದಾರೆ.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಟೋಲ್ ಸಂಗ್ರಹದ ಕುರಿತು ಪ್ರತಿಕ್ರಿಯೆ ನೀಡಿದ ಸುರೇಶ್, ಸುಪ್ರೀಂಕೋರ್ಟ್ ಕೂಡ ಟೋಲ್ ವಿರುದ್ದವಾಗಿದೆ. ಅನೇಕ ಸಮಯದಲ್ಲಿ ಟೋಲ್ ವಿರುದ್ದ ಹೇಳಿಕೆ ನೀಡಿರುವ ನಿದರ್ಶನಗಳಿದೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಿದ್ದೇವೆ. ಇನ್ನೂ ನಾಲ್ಕೈದು ದಿನಗಳಲ್ಲಿ ನಾಯಕರ ಜೊತೆ ಚರ್ಚೆ ಮಾಡಿ ರಸ್ತೆ ತಡೆಹಿಡಿದು ಪ್ರತಿಭಟನೆ ಮಾಡ್ತೀವಿ.
ರಸ್ತೆ ಕಾಮಗಾರಿ ಪೂರ್ತಿಯಾಗಿಲ್ಲದಿದ್ದರೂ ಟೋಲ್ ಕಲೆಕ್ಟ್ ಮಾಡ್ತಿದ್ದಾರೆ. ಒಂದು ಕಿಮಿ.ಗೆ 2 ರಿಂದ 3 ರೂ ಕಲೆಕ್ಟ್ ಮಾಡ್ತಿದ್ದಾರೆ. ಟೋಲ್ ಕಲೆಕ್ಟ್ ಮಾಡಬೇಕಾದ್ರೆ ರೋಡ್ ಕಂಪ್ಲಿಷನ್ ಸರ್ಟಿಫಿಕೇಟ್ ಕೊಡಬೇಕಾಗುತ್ತದೆ. ಆದ್ರೆ ರಸ್ತೆ ಕಂಪ್ಲಿಟ್ ಆಗದೆ ಸರ್ಕಾರ ದುಡ್ಡು ವಸೂಲಿ ಮಾಡ್ತಿದ್ದಾರೆ. ಎರಡೆ ಟೋಲ್‌ಗಳಿದೆ ಬಿಡದಿ, ರಾಮನಗರ, ಮದ್ದೂರು, ಮಂಡ್ಯಕ್ಕೂ ಹೋಗೊಕೆ ಎಲ್ಲರಿಗೂ ಒಂದೇ ದುಡ್ಡು ಅಂದ್ರೆ ಹೇಗೆ? ಕೆಎಸ್‌ಆರ್‌ಟಿಸಿ ಬಸ್ ದರ ಕೂಡ ಹೆಚ್ಚಳ ಮಾಡೋದಾಗಿ ಹೇಳಿದ್ದಾರೆ. ಹಣ್ಣು, ತರಕಾರಿ ಎಲ್ಲವನ್ನೂ ಬಸ್‌ನಲ್ಲಿ ಬಂದು ಮಾರಾಟ ಮಾಡುವವರಿದ್ದಾರೆ.ಹೀಗೆ ಹೆಚ್ಚಳ ಮಾಡೋದ್ರಿಂದ ಪೂರಕ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ ಜನರಿಗೆ ಹೊರೆ ಆಗುತ್ತದೆ. ಅನೇಕ ಬಾರಿ ನಾನು ನಿತಿನ್ ಗಡ್ಕರಿ ಅವರ ಜೊತೆ ಕೂಡ ಮಾತನಾಡ್ತೀನಿ. ಆದ್ರೆ ಟೋಲ್ ಕಲೆಕ್ಟ್ ಮಾತ್ರ ಅವೈಜ್ಞಾನಿಕವಾಗಿ ನಡೆಯುತ್ತಿದೆ. ರೋಡ್ ಟೋಲ್‌ನಿಂದ ಬಿಜೆಪಿ ಹಳೇಮೈಸೂರು ಭಾಗಕ್ಕೆ ಕೊಟ್ಟ ಯುಗಾದಿ ಗಿಫ್ಟ್ ಎಂದು ವ್ಯಂಗ್ಯ ಮಾಡಿದರು.
ವಿ.ಸೋಮಣ್ಣ ಬಿಜೆಪಿಯಲ್ಲೆ ಉಳಿಯುವುದಾಗಿ ಹೇಳಿದ ವಿಚಾರದಲ್ಲಿ ಪ್ರತಿಕ್ರಿಯಿಸಿ, ವಿ.ಸೋಮಣ್ಣ ನಮ್ಮ ಕುಟುಂಬಕ್ಕೆ ಹಿರಿಯ ಸೋದರರಿದ್ದಂತೆ. ಅವರ ಬಗ್ಗೆ ಹೆಚ್ಚು ಮಾತನಾಡೋಕೆ ಹೋಗಲ್ಲ ಎಂದರು.
ಧ್ರುವನಾರಾಯಣ್ ಕುಟುಂಬಕ್ಕೆ ಟಿಕೆಟ್ ಕುರಿತು ಮಾತನಾಡಿ, ಧ್ರುವನಾರಾಯಣ್ ಅವರ ಸಾವು ದುಃಖಕರ ಸಂಗತಿ. ಇಡೀ ಕಾಂಗ್ರೆಸ್ ಪಕ್ಷ ಪ್ರಾಮಾಣಿಕ ನಾಯಕನನ್ನು ಕಳೆದುಕೊಂಡಿದ್ದೇವೆ. ಆ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂತ ಹೇಳೊದ್ರಲ್ಲಿ ನಾನು ಮೊದಲನೆಯವನು ಎಂದರು.
ರಾಮನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಕುರಿತು ಮಾತನಾಡಿ, ಮಾಧ್ಯಮಗಳಲ್ಲಿ ಬಂದ ವರದಿ ನೋಡಿದ್ದೇನೆ. ಸಾರ್ವತ್ರಿಕ ಚುನಾವಣೆ ಬಗ್ಗೆ ಯಾವುದೇ ನಾಯಕರೂ ಚರ್ಚೆ ಮಾಡಿಲ್ಲ. ನಾನು ಸಂಸದನಾಗಿದ್ದು, ನನ್ನ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಾನೇ ಅಭ್ಯರ್ಥಿ, ಮತ ನೀಡಿ ಎಂದು ಮನವಿ ಮಾಡಿದ್ದೇನೆ.
ಲೋಕಸಭಾ ಸದಸ್ಯ ಆಗಿರೋದ್ರಿಂದ ಆ ಕೆಲಸ ಪೂರ್ಣ ಮಾಡಬೇಕಿದೆ. ರಾಮನಗರ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಸ್ಪರ್ಧೆಗೆ ಮನವಿ ಮಾಡ್ತಿದ್ದಾರೆ. ರಾಮನಗರದಲ್ಲಿ ಇಕ್ಬಾಲ್ ಹುಸೇನ್ ಇದ್ದಾರೆ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ರಾಜ್ಯದಿಂದ ನಾನು ಒಬ್ಬನೇ ಸಂಸದ ಇದ್ದೇನೆ. ನಮಗೆ ಯಾರ ಮೇಲೂ ಸಾಪ್ಟ್ ಕಾರ್ನರ್ ಇಲ್ಲ. ಯಾರೇ ಅಭ್ಯರ್ಥಿ ಆದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮನಗರದಲ್ಲಿ ಗೆಲ್ತಾರೆ.
ನನಗೆ ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಉಪ ಚುನಾವಣೆ ನನಗೆ ಇಷ್ಚ ಇಲ್ಲ. ಸ್ಪರ್ಧೆಗೆ ಒತ್ತಡ 10 ಕ್ಷೇತ್ರಗಳಿಂದ ಇದೆ. ಚನ್ನಪಟ್ಟಣ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೂಕ್ತ ಅಭ್ಯರ್ಥಿಗಳಿದ್ದಾರೆ ಎಂದರು.
ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರಬಹುದು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷದ ಅಧ್ಯಕ್ಷರು ಎಲ್ಲರಿಗೂ ಮುಕ್ತವಾದ ಆಹ್ವಾನ ಕೊಟ್ಟಿದ್ದಾರೆ. ಯೋಗೇಶ್ವರ್ ಒಬ್ಬರೆ ಅಲ್ಲ ಯಾರು ಬೇಕಾದ್ರೂ ಬರಬಹುದು. ಪಕ್ಷದ ತತ್ವ ಸಿದ್ದಾಂತ ಒಪ್ಪಿ ಬರೋದಾದ್ರೆ ಬರಬಹುದು ಎಂಬ ಹೇಳಿಕೆಯನ್ನು ಅಧ್ಯಕ್ಷರು ಹೇಳಿದ್ದಾರೆ. ಯಾವುದೇ ಒಬ್ಬ ವ್ಯಕ್ತಿಯನ್ನು ಸೀಮಿತ ಮಾಡಿ ಮಾತನಾಡಲ್ಲ, ಯಾರಬೇಕಾದ್ರೂ ಬರಬಹುದು ಎಂದರು.