ತುಮಕೂರು: ರಾಜ್ಯ ರಾಜಕಾರಣದಲ್ಲಿ ಡಿ.ಕೆ. ಬ್ರದರ್ಸ್ ತಮ್ಮದೇ ಹಿಡಿತವನ್ನು ಹೊಂದಿದ್ದಾರೆ. ಅಲ್ಲದೆ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಇವರಿಬ್ಬರೂ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅಣ್ಣ, ಈಗಿನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ರಾಜ್ಯದಲ್ಲಿ ಪಕ್ಷ ಕಟ್ಟುವ, ಚುನಾವಣೆ ವೇಳೆ ತಂತ್ರಗಾರಿಕೆಯಲ್ಲಿ ತೊಡಗಿದ್ದರೆ, ಅವರಿಗೆ ಹೆಗಲಾಗುವುದರ ಜತೆಗೆ ಕನಕಪುರ ಕ್ಷೇತ್ರದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಂಡಿದ್ದು ಸಂಸದ ಡಿ.ಕೆ. ಸುರೇಶ್ (DK Suresh). ಅವರಿಗೆ ಈಗ ರಾಜಕಾರಣವೇ ಸಾಕಾಗಿ ಹೋಗಿದೆಯಂತೆ. ಹಾಗಾಗಿ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ (Lok Sabha Election 2024) ಸ್ಪರ್ಧೆ ಮಾಡುವುದು ಅನುಮಾನ ಎಂಬುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಕುಣಿಗಲ್ ತಾಲೂಕಿನ ಗಿರಿಗೌಡನ ಪಾಳ್ಯದಲ್ಲಿ ಏರ್ಪಡಿಸಲಾಗಿದ್ದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಕೆಲವರು ನನ್ನ ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಸ್ಪರ್ಧೆ ಮಾಡಬೇಕೋ? ಇಲ್ಲವೋ ಎಂಬುದನ್ನು ಇನ್ನೂ ತೀರ್ಮಾನ ಮಾಡಿಲ್ಲ. ನಾನು ಇನ್ನೂ ಗೊಂದಲದಲ್ಲಿ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Road Accident: ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಲಾರಿಗೆ ಡಿಕ್ಕಿ, ಮೂವರ ಸಾವು
ನನಗೆ ರಾಜಕಾರಣ ಬೇಕೋ ಬೇಡವೋ ಎಂದು ಅನ್ನಿಸಿಬಿಟ್ಟಿದೆ. ಮುಂದಿನ ದಿನದಲ್ಲಿ ನಿಮ್ಮ ಸಲಹೆಯನ್ನು ಪಡೆಯುತ್ತೇನೆ. ನನ್ನ ಗುರಿ ಇರುವುದು ನಿಮ್ಮ ಸೇವೆ ಮಾಡುವುದು. ಕುಣಿಗಲ್ ತಾಲೂಕನ್ನು ಒಂದು ಮಾದರಿ ತಾಲೂಕನ್ನಾಗಿ ಮಾಡಬೇಕೆನ್ನುವಂಥದ್ದು ನನ್ನ ಆಶಯವಾಗಿದೆ ಎಂದು ಈ ವೇಳೆ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಸೋಮಣ್ಣಗೆ ತುಮಕೂರು ಲೋಕಸಭೆ ಟಿಕೆಟ್; ನಾನು ನಿವೃತ್ತಿ ಅಂದ್ರು ಸಂಸದ ಜಿ.ಎಸ್. ಬಸವರಾಜು
ಚುನಾವಣಾ ಕಣದಿಂದ ದೂರವಿರುವುದಾಗಿ ಈ ಹಿಂದೆಯೇ ಬಿಜೆಪಿ ಹಾಲಿ ಸಂಸದ ಜಿ.ಎಸ್. ಬಸವರಾಜು ಅವರು ಘೋಷಿಸಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ಸಂಸದ ಜಿ.ಎಸ್. ಬಸವರಾಜು ಅವರು ಮಾತನಾಡಿರುವ ಆಡಿಯೊ ವೈರಲ್ ಆಗಿದೆ. ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಮಾತನಾಡಿರುವ ಆಡಿಯೊ ವೈರಲ್ ಆಗಿದೆ. ಇದರಲ್ಲಿ ವಿ.ಸೋಮಣ್ಣ ತುಮಕೂರಿನಿಂದ ಲೋಕಸಭೆಗೆ ಸ್ಪರ್ಧೆ ಮಾಡುತ್ತಾರೆ. ಅವರ ಬೆಂಬಲಕ್ಕೆ ನೀವು ನಿಲ್ಲಬೇಕು ಎಂದು ವೀರಶೈವ ಸಮಾಜಕ್ಕೆ ಜಿ.ಎಸ್. ಬಸವರಾಜು ಮನವಿ ಮಾಡಿದ್ದಾರೆ.
ಸಮಾಜ ಒಗ್ಗಟ್ಟಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ನಿಮ್ಮಲ್ಲೇ ಕಿತ್ತಾಡಿದರೆ ಒದ್ದು ಓಡಿಸುತ್ತಾರೆ. ಆ ಸಮಯ ಕೂಡ ಸನ್ನಿಹಿತವಾಗಿದೆ. ಯಾವಾಗ ಒಗ್ಗಟ್ಟು ಮುರಿಯುತ್ತದೆಯೋ ಆಗ ಏನೇನು ಮಾಡಬೇಕು ಎಂಬುದು ಅವರಿಗೆ (ವಿರೋಧ ಪಕ್ಷಗಳಿಗೆ) ಗೊತ್ತಿದೆ. ಕೆಲವೇ ಜನ ಇದ್ದೀರಿ ಒಗ್ಗಟ್ಟಾಗಿರಬೇಕು ಎಂದು ಸಂದೇಶ ನೀಡಿದ್ದಾರೆ.
ನನ್ನ ಅವಧಿ ಮುಗಿಯಿತು, ಈಗ ನನ್ನ ಸೀಟ್ ಸೋಮಣ್ಣಗೆ ಕೊಡುತ್ತಾರೆ. ನಾನು ಚುನಾವಣೆಯಲ್ಲಿ ನಿಲ್ಲಲ್ಲ, ಈ ಬಗ್ಗೆ ದೆಹಲಿಗೆ ಹೋಗಿದ್ದಾಗ ಹಿರಿಯ ನಾಯಕರಿಗೆ ಹೇಳಿದ್ದೇನೆ ಎಂದಿರುವ ಸಂಸದರು, ಮುಂದೆ ಬರುವವರನ್ನು ಉಪಯೋಗಿಸಿಕೊಳ್ಳಿ. 8 ಸಲ ಚುನಾವಣೆಗೆ ನಿಂತಿದ್ದೇನೆ, 5 ಸಲ ಗೆದ್ದಿದ್ದೇನೆ, ಮೂರು ಸಲ ಸೋತಿದ್ದೇನೆ. ಈ ಹಿಂದೆ ನಮ್ಮವರೇ ನನ್ನ ಸೋಲಿಸಿದ್ದರು. ನಾನು ಸೋತರೂ ಒಂದೇ, ಗೆದ್ದರೂ ಒಂದೇ, ಕೆಲಸ ಮಾಡಿಸಿಕೊಂಡು ಬರುತ್ತಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Mercer Survey: ಮುಂಬೈ ಅತಿ ದುಬಾರಿ ನಗರವಾದ್ರೆ, ಚೆನ್ನೈನಲ್ಲಿ ಎಣ್ಣೆ ರೇಟು ಹೆಚ್ಚು! ಬೆಂಗಳೂರು ಯಾವ ಸ್ಥಾನದಲ್ಲಿದೆ?
ಸಂಸದ ಜಿ.ಎಸ್.ಬಸವರಾಜು ರಾಜಕೀಯ ನಿವೃತ್ತಿ
ತುಮಕೂರು ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ವಿರುದ್ಧ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಗೆದ್ದಿದ್ದರು. ಆದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಜನವರಿಯಲ್ಲಿ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಕ್ಷೇತ್ರದಿಂದ ಈ ಬಾರಿ ಹೊಸ ಅಭ್ಯರ್ಥಿ ಕಣಕ್ಕಿಳಿಯುವುದು ಖಚಿತವಾಗಿದೆ.