ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ (Congress High command) ನೀಡಿದ ಆದೇಶವನ್ನು ಮೀರುವುದಿಲ್ಲ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಮತ್ತು ಗಾಂಧಿ ಕುಟುಂಬದ (Gandhi family) ಗೌರವ ನೀಡಿ ಅಧಿಕಾರ ಹಂಚಿಕೆ ಫಾರ್ಮುಲಾ ಒಪ್ಪಿಕೊಂಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಈ ಮೂಲಕ ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿ ಸೃಷ್ಟಿಯಾಗಿದ್ದ ಕಗ್ಗಂಟು ಪರಿಹಾರವಾಗಿದೆ.
ಹೊಸ ಸೂತ್ರದ ಪ್ರಕಾರ, ಸಿದ್ದರಾಮಯ್ಯ ಅವರು ರಾಜ್ಯದ 24ನೇ ಮುಖ್ಯಮಂತ್ರಿ ಆಗಿ ಮೇ 20ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಆಗಲಿದ್ದಾರೆ.
ಕಳೆದ ಐದು ದಿನಗಳಿಂದ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿ ಸೃಷ್ಟಿಯಾಗಿದ್ದ ಗೊಂದಲ ಬುಧವಾರ ರಾತ್ರಿ 2 ಗಂಟೆಯ ಹೊತ್ತಿಗೆ ಪರಿಹಾರವಾಗಿದೆ. ಹೈಕಮಾಂಡ್ ಮನವೊಲಿಕೆ ಬಳಿಕ ಡಿ.ಕೆ. ಶಿವಕುಮಾರ್ ಅವರು ಡಿಸಿಎಂ ಆಗಲು ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿತ್ತು. ಅದನ್ನು ಸ್ವತಃ ಡಿ.ಕೆ. ಶಿವಕುಮಾರ್ ಇದೀಗ ಒಪ್ಪಿಕೊಂಡಿದ್ದಾರೆ.
ʻʻಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಗಾಂಧಿ ಕುಟುಂಬಕ್ಕೆ ಗೌರವ ನೀಡಿ ಅಧಿಕಾರ ಹಂಚಿಕೆಯ ಫಾರ್ಮುಲಾ ಒಪ್ಪಿಕೊಂಡಿದ್ದೇನೆ. ಅಂತಿಮವಾಗಿ ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ. ಕೆಲವೊಮ್ಮೆ ಒಪ್ಪಿಕೊಳ್ಳಬೇಕಾಗುತ್ತದೆʼʼ ಎಂದು ಡಿ.ಕೆ. ಶಿವಕುಮಾರ್ ಅವರು ನಗುನಗುತ್ತಲೇ ಹೇಳಿದ್ದಾರೆ.
ಇದರೊಂದಿಗೆ ಸಿದ್ದರಾಮಯ್ಯ ಅವರು ಸಿಎಂ ಆಗುವುದು, ಡಿ.ಕೆ. ಶಿವಕುಮಾರ್ ಅವರು ಡಿಸಿಎಂ ಆಗುವುದು ಖಚಿತವಾಗಿದೆ. ಸಂಜೆ ಏಳು ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷ ಸಭೆಯಲ್ಲಿ ಇದರ ಅಧಿಕೃತ ಘೋಷಣೆಯಾಗಲಿದೆ.
ವೇಣುಗೋಪಾಲ್ ನಿವಾಸದಲ್ಲಿ ಉಪಾಹಾರ
ಈ ನಡುವೆ, ದಿಲ್ಲಿಯಲ್ಲಿರುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಬೆಳಗ್ಗಿನ ಉಪಾಹಾರವನ್ನು ಸ್ವೀಕರಿಸಲಿದ್ದಾರೆ.
ಡಿ.ಕೆ. ಸುರೇಶ್ ಹೇಳಿದ್ದೇನು?”
ಈ ಎಲ್ಲ ಬೆಳವಣಿಗೆಗಳಿಗೆ ಸಂಬಂಧಿಸಿ ಡಿ.ಕೆ. ಶಿವಕುಮಾರ್ ಅವರ ಸಹೋದರ, ಡಿ.ಕೆ. ಸುರೇಶ್ ಅವರು ಪ್ರತಿಕ್ರಿಯಿಸಿ, ನನಗೆ ವೈಯಕ್ತಿಕವಾಗಿ ಇದರಿಂದ ಸಮಾಧಾನ ಆಗಿಲ್ಲ. ಆದರೆ, ಪಕ್ಷದ ಹಿತದೃಷ್ಟಿಯಿಂದ ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Karnataka CM: ಸಿದ್ದರಾಮಯ್ಯಗೆ ಸಿಎಂ ಪಟ್ಟ, ಡಿಕೆಶಿ ಡಿಸಿಎಂ ; ಇಂದು ಸಂಜೆ ಅಧಿಕೃತ ಪ್ರಕಟಣೆ, ಮೇ 20ರಂದು ಪ್ರಮಾಣವಚನ