Site icon Vistara News

Karnataka Election: ಗ್ಯಾರಂಟಿ ಯೋಜನೆಗಳು ಜಾರಿ ಗ್ಯಾರಂಟಿ; ಎಲ್ಲ ಕಾಂಗ್ರೆಸ್ ನಾಯಕರಿಂದ ಗ್ಯಾರಂಟಿ!

Congress leaders guarantee for guarantee schemes

Congress leaders guarantee for guarantee schemes

ಬೆಂಗಳೂರು: ರಾಜ್ಯದಲ್ಲಿ ಶನಿವಾರ (ಮೇ 20) ಅಧಿಕಾರ ವಹಿಸಿಕೊಳ್ಳಲಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರ (Congress Government) ಚುನಾವಣೆಗೆ ಮುನ್ನ ಜನರಿಗೆ ನೀಡಿರುವ ಐದು ಗ್ಯಾರಂಟಿ (Guarantee schemes) ಯೋಜನೆಗಳನ್ನು ಜಾರಿಗೆ ತರುವುದು ಗ್ಯಾರಂಟಿ ಎಂದು ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಅವರು ಹೇಳಿದ್ದಾರೆ. ಶುಕ್ರವಾರ ದಿಲ್ಲಿಗೆ ಪ್ರಯಾಣಿಸುವ ಮುನ್ನ ಸದಾಶಿವ ನಗರದ ನಿವಾಸದ ಬಳಿ ಅವರು ಮಾತನಾಡಿದರು. ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge), ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ (Ranadeep singh surjewala), ನಿಯೋಜಿತ ಸಿಎಂ ಸಿದ್ದರಾಮಯ್ಯ (karnataka CM) ಅವರು ಕೂಡಾ ಇದೇ ಭರವಸೆಯನ್ನು ನೀಡಿದ್ದಾರೆ.

ರಾಜ್ಯದ ಎಲ್ಲಾ ಜನತೆಗೆ, ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ನೀವು ಬಯಸಿದ ಸರ್ಕಾರ. ಜನರ ಧ್ವನಿ ರಾಜ್ಯ ಸರ್ಕಾರದ ಧ್ವನಿಯಾಗಲಿದೆ ಎಂದರು. ʻʻನಾವು ನಮ್ಮ ಮೊದಲ ಸಚಿವ ಸಂಪುಟದಲ್ಲಿ ನಮ್ಮ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆʼʼ ಎಂದು ಭರವಸೆ ನೀಡಿದರು.

ಗ್ಯಾರಂಟಿ ಯೋಜನೆಗಳ ಜಾರಿಗೆ ಯಾವುದಾದರೂ ಷರತ್ತು ಇದೆಯೇ ಎಂದು ಕೇಳಿದಾಗ ‘ಈಗ ಈ ವಿಚಾರವಾಗಿ ಏನನ್ನೂ ಹೇಳುವುದಿಲ್ಲ. ನಾವು ನುಡಿದಂತೆ ನಡೆಯುತ್ತೇವೆ. ನಾವು ತೀರ್ಮಾನ ಮಾಡಿ ನಿಮಗೆ ಮಾಹಿತಿ ನೀಡಿಯೇ ಯೋಜನೆ ಜಾರಿ ಮಾಡುತ್ತೇವೆ. ಈ ಗ್ಯಾರಂಟಿ ಯೋಜನೆಗಳು ಕೇವಲ ಡಿ.ಕೆ. ಶಿವಕುಮಾರ್ ಅಥವಾ ಸಿದ್ದರಾಮಯ್ಯ ಅವರ ಗ್ಯಾರಂಟಿ ಅಲ್ಲ. ಇದು ಕಾಂಗ್ರೆಸ್ ಗ್ಯಾರಂಟಿ. ಈ ಯೋಜನೆಗನ್ನು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ನಾನು, ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದು, ಈ ಯೋಜನೆ ಜಾರಿ ಮಾಡುತ್ತೇವೆ ‘ ಎಂದು ಸ್ಪಷ್ಟವಾಗಿ ಹೇಳಿದರು.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ

ಕಂಠೀರವ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಎಲ್ಲ ಪ್ರಮುಖ ನಾಯಕರು ಭಾಗವಹಿಸುತ್ತಿದ್ದಾರೆ. ರಾಷ್ಟ್ರದ ಅನೇಕ ನಾಯಕರಿಗೆ ಆಹ್ವಾನ ನೀಡಲಾಗಿದೆ. ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮಾಧ್ಯಮಗಳ ಮೂಲಕ ಆಹ್ವಾನ ನೀಡುತ್ತಿದ್ದೇನೆ ಎಂದು ಹೇಳಿದರು.

ಸರ್ಕಾರ ರಚನೆ ಪಕ್ಷಾತೀತ ಕಾರ್ಯಕ್ರಮ. ಹಾಗಾಗಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೂ ಆಹ್ವಾನ ನೀಡುತ್ತೇವೆ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್‌ ಹೇಳಿದರು.

ಬೆಳಗ್ಗೆ 11 ಗಂಟೆಯ ಒಳಗೆ ಬನ್ನಿ ಎಂದ ಡಿಕೆಶಿ ಕುಮಾರ್‌

ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಶನಿವಾರ ಬೆಳಗ್ಗೆ 11 ಗಂಟೆಯ ಒಳಗೆ ಆಗಮಿಸಬೇಕು. ತಡವಾಗಿ ಬಂದರೆ ಗಣ್ಯರ ಭೇಟಿ ಹಿನ್ನೆಲೆಯಲ್ಲಿ ರಸ್ತೆ ನಿರ್ಬಂಧಗಳು ಎದುರಾಗಬಹುದು ಎಂದು ಅವರು ತಿಳಿಸಿದರು.

ಇದನ್ನೂ ಓದಿ :Karnataka CM: ಒಂದೇ ವಿಮಾನದಲ್ಲಿ ದಿಲ್ಲಿಗೆ ತೆರಳಿದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌

Exit mobile version