ಹುಬ್ಬಳ್ಳಿ: ಸತೀಶ್ ಜಾರಕಿಹೊಳಿ ಅವರು ಯಾವ ಡಿಕ್ಷನರಿಯಲ್ಲಿ ನೋಡಿ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ. ನಾನೇ ಇದನ್ನು ಖಂಡಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ಹೇಳಿಕೆ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಿದ್ದೇನೆ. ಶಿಸ್ತು ಕ್ರಮದ ಕುರಿತು ಮುಂದೆ ಆಲೋಚನೆ ಮಾಡ್ತೇವೆ ಎಂದರು. ʻʻಆದರೆ ಜಾರಕಿಹೊಳಿ ಹೇಳಿಕೆಯಿಂದ ಪಕ್ಷಕ್ಕೆ ಹಾನಿಯಾಗಲ್ಲ. ಇದು ಅವರ ವೈಯಕ್ತಿಕ ಹೇಳಿಕೆ. ಈ ಕುರಿತು ರಾಷ್ಟ್ರೀಯ ನಾಯಕರು ಸಹ ಪ್ರತಿಕ್ರಿಯಿಸಿದ್ದಾರೆʼʼ ಎಂದು ಅವರು ನುಡಿದರು.
ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ವೈಯಕ್ತಿಕ ನೆಲೆಯಲ್ಲೂ ಖಂಡಿಸಿದ ಡಿ.ಕೆ. ಶಿವಕುಮಾರ್, ʻʻನಾನೂ ಸಹ ಒಬ್ಬ ಹಿಂದು. ಸರ್ವ ಜನಾಂಗ, ಸರ್ವ ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದೇ ಕಾಂಗ್ರೆಸ್ ಸಿದ್ಧಾಂತ. ಹೀಗಿರುವಾಗ ಜಾರಕಿಹೊಳಿ ಈ ರೀತಿ ಹೇಳಿರುವುದು ಸರಿಯಲ್ಲ. ಅವರ ಹೇಳಿಕೆಯನ್ನು ನಾವು ಒಪ್ಪಲ್ಲ, ಅದನ್ನು ಖಂಡಿಸುತ್ತೇವೆʼʼ ಎಂದರು. ʻʻಇಂತಹ ವೈಯಕ್ತಿಕ ಹೇಳಿಕೆಯನ್ನು ಸಹಿಸೋಕೆ ಆಗಲ್ಲ. ಮನೆಗಳಲ್ಲಿ ಏನು ಬೇಕಾದರೂ ಮಾತನಾಡಿಕೊಳ್ಳಲಿ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾತನಾಡಬಾರದುʼʼ ಎಂದು ಅವರು ಕಿಡಿ ಕಾರಿದರು.
ʻʻಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಅಂತ ಜನ ಸಂಕಲ್ಪ ಮಾಡಿದ್ದಾರೆ. ಹೀಗಾಗಿ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡ್ತಿದ್ದಾರೆ. ಈ ಹಿಂದೆ ಮಹಾತ್ಮಾ ಗಾಂಧಿ ಭಾರತ್ ಛೋಡೋ ಯಾತ್ರೆ ಮಾಡಿದ್ದರು. ಆದರೆ, ನರೇಂದ್ರ ಮೋದಿ ಅವರು ಭಾರತ್ ತೋಡೋ ಮಾಡ್ತಿದಾರೆ. ಇದೇ ನಮಗೂ ಬಿಜೆಪಿಯವರಿಗೂ ಇರುವ ವ್ಯತ್ಯಾಸʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್.
ಟ್ವೀಟ್ ಬ್ಲಾಕ್ ಹಿಂದೆ ಬಿಜೆಪಿ ಹಸ್ತ ಎಂದ ಡಿಕೆಶಿ
ʻʻಎಲ್ಲರೂ ಹಾಡುಗಳನ್ನು ಹಾಕಿಕೊಂಡು ಟ್ವೀಟ್ ಮಾಡೋದು ಸಾಮಾನ್ಯ. ಆದರೆ, ಭಾರತ್ ಜೋಡೊ ಯಾತ್ರೆಯನ್ನು ಹಾಡು ಬಳಕೆಯ ವಿಚಾರದಲ್ಲಿ ಬ್ಲಾಕ್ ಮಾಡಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಯವರಿಗೆ ಭಯ ಆಗಿದೆ. ಅದಕ್ಕಾಗಿ ಅವರು ಈ ರೀತಿ ಮಾಡಿದ್ದಾರೆ. ಯಾತ್ರೆಯನ್ನು ನಿಲ್ಲಿಸಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅವರ ಅವರ ಪ್ರಯತ್ನ ಅವರು ಮುಂದುವರಿಸಲಿ. ನಮ್ಮ ಸಾಮಾಜಿಕ ಜಾಲತಾಣ ಜನರನ್ನು ಮುಟ್ಟುತ್ತಿದೆ. ಭಾರತ್ ಜೋಡೋ ದಿಂದ ದೇಶದ ರಾಜಕಾರಣವೇ ಬದಲಾಗುತ್ತಿದೆʼʼ ಎಂದರು.
ಇದನ್ನೂ ಓದಿ | Satish Jarakiholi | ಹಿಂದು ಪದದ ಕುರಿತು ʼಕೀಳುʼ ಮಾತಿಗೆ ಸತೀಶ್ ಜಾರಕಿಹೊಳಿ ಬಿಡುಗಡೆ ಮಾಡಿದ ದಾಖಲೆ ಇಲ್ಲಿದೆ