Site icon Vistara News

ಸಿದ್ದರಾಮೋತ್ಸವ ವೇದಿಕೆಯಲ್ಲಿ ಸಾಮೂಹಿಕ ನಾಯಕತ್ವದ ಮಂತ್ರ ಪಠಿಸಿದ ಡಿ.ಕೆ ಶಿವಕುಮಾರ್

ದಾವಣಗೆರೆ: ಕಾಂಗ್ರೆಸ್‌ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ೨೦೨೩ರ ಚುನಾವಣೆಯನ್ನು ಎದುರಿಸಲು ನಿರ್ಧರಿಸಿದೆ. ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಹೇಳಿದರು.

ಸಿದ್ದರಾಮಯ್ಯ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರು ವಿಧಾನಸೌಧದ ಮೂರನೇ ಮಹಡಿಯ ಮೇಲೆ ಎದೆ ಎತ್ತಿ ಓಡಾಡುವಂತಾಗಬೇಕು. ಈಗ ಇರುವ ಭ್ರಷ್ಟ ಸರಕಾರ ಕಿತ್ತು ಹಾಕಲು ಸಂಕಲ್ಪ ಮಾಡಬೇಕು. ಪ್ರತಿಜ್ಞೆ ಮಾಡ್ತೀರಿ ತಾನೇ ಎಂದು ಪ್ರಶ್ನಿಸಿದರು. ಸೇರಿದ ಜನಸ್ತೋಮ ಕೈ ಎತ್ತಿ, ಘೋಷಣೆಗಳ ಮೂಲಕ ಈ ಮಾತನ್ನು ಸಮರ್ಥಿಸಿತು.

ಆರಂಭದಲ್ಲಿ ಸಿದ್ದರಾಮಯ್ಯ ಅವರಿಗೆ ರಾಮನಗರದ ರೇಷ್ಮೆ ಶಾಲು, ಸ್ಮರಣಿಕೆ ನೀಡಿ ಗೌರವಿಸಿದ ಡಿಕೆಶಿ ಅವರು ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡು ಏಕತೆಯ ಸಂದೇಶವನ್ನು ರವಾನಿಸಿದರು.

ಭಾರತ್‌ ಮಾತಾಕಿ ಜೈ, ಕಾಂಗ್ರೆಸ್‌ ಪಕ್ಷಕ್ಕೆ ಜೈ, ಸೋನಿಯಾ ಗಾಂಧಿಗೆ ಜೈ, ರಾಹುಲ್‌ ಗಾಂಧಿಗೆ ಜೈ ಎಂದ ಡಿ.ಕೆ. ಶಿವಕುಮಾರ್‌ ಸಿದ್ದರಾಮಯ್ಯ ಅವರಿಗೆ ಜೈ ಎನ್ನುವ ಮೂಲಕ ಇಡೀ ಸಭಾಂಗಣದಲ್ಲಿ ಸಂಚಲನ ಮೂಡಿಸಿದರು.

ʻʻ೭೫ನೇ ವರ್ಷ. ಇದು ದೇಶಕ್ಕೂ ಸಂಭ್ರಮ, ಕಾಂಗ್ರೆಸಿಗರಿಗೂ ಸಂಭ್ರಮ, ಸಿದ್ದರಾಮಯ್ಯನವರಿಗೂ ಸಂಭ್ರಮ, ನಿಮಗೂ ಸಂಭ್ರಮ, ನಮಗೂ ಸಂಭ್ರಮʼʼ ಎಂದು ಹೇಳುವ ಮೂಲಕ ಡಿಕೆಶಿ ಮತ್ತೊಮ್ಮೆ ಚಪ್ಪಾಳೆ ಗಿಟ್ಟಿಸಿಕೊಂಡರು.

ʻʻನಮ್ಮ ಉದ್ದೇಶ ಈ ರಾಜ್ಯಕ್ಕೆ ನ್ಯಾಯವನ್ನು ಕೊಡುವುದುʼʼ ಎಂದ ಡಿಕೆಶಿ, ಕಾಂಗ್ರೆಸ್‌ನ ಇತಿಹಾಸವೇ ಈ ದೇಶದ ಇತಿಹಾಸ. ಇದನ್ನು ಇನ್ನಷ್ಟು ಭವ್ಯಗೊಳಿಸಬೇಕುʼʼ ಎಂದರು.

ಬಸವ ಜಯಂತಿ ದಿನ ಅಧಿಕಾರ ಸ್ವೀಕಾರ
೨೦೧೩ರಲ್ಲಿ ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕರಿಸಿದ ಕ್ಷಣವನ್ನು ನೆನಪು ಮಾಡಿಕೊಂಡ ಡಿಕೆಶಿ ಅವರು, ʻʻಸಿದ್ದರಾಮಯ್ಯ ಅವರ ಆಡಳಿತ ನಾವು ನೋಡಿದ್ದೇವೆ. ೨೦೧೩ರಲ್ಲಿ ಸಿದ್ದರಾಮಯ್ಯ ಅವರನ್ನು ರಾಹುಲ್‌ ಮತ್ತು ಸೋನಿಯಾ ಗಾಂಧಿ ಅವರು ನೇಮಿಸಿದರು. ಬಸವ ಜಯಂತಿ ದಿನ ಅವರು ಅಧಿಕಾರ ಸ್ವೀಕರಿಸಿದರು. ಬಸವಣ್ಣ ತತ್ವವೇ ಕಾಂಗ್ರೆಸ್‌ ತತ್ವ. ಅವರು ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿವರೆಗೂ ಈ ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ಮೆಲುಕು ಹಾಕಲು ಇಲ್ಲಿ ಸೇರಿದ್ದೇವೆʼʼ ಎಂದರು.

ಕೇವಲ ಹಿಂದುಳಿದ ವರ್ಗದ ನಾಯಕನಲ್ಲ
ʻʻಸಿದ್ದರಾಮಯ್ಯ ಅವರು ಕೇವಲ ಹಿಂದುಳಿದ ವರ್ಗದ ನಾಯಕನಲ್ಲ. ಸರ್ವಜನಾಂಗಕ್ಕೂ, ಸರ್ವರಿಗೂ ಅವರು ನಾಯಕʼʼ ಎಂದ ಡಿಕೆಶಿ, ಈಗೊಂದು ದೊಡ್ಡ ಅವಕಾಶ ನಿಮ್ಮ ಮುಂದಿದೆ. ಅಧಿಕಾರದ ಲಕ್ಷ್ಮಿ ನಿಮ್ಮ ಮನೆಗೆ ಬಾಗಿಲಿಗೆ ಬಂದಿದ್ದಾಳೆ. ಬೆಳಕು ಬರೋ ಕಾಲ ಬಂದಿದೆ. ಅದನ್ನು ಬಳಸಿಕೊಳ್ಳಿ. ಯುವಕರು, ಬಡವರಿಗೆ, ಎಲ್ಲ ವರ್ಗದವರಿಗೆ ಆಗಿರುವ ಅನ್ಯಾಯಕ್ಕೆ ಪ್ರತಿಯಾಗಿ ಬಿಜೆಪಿ ಸರಕಾರವನ್ನು, ಈ ಭ್ರಷ್ಟ, ಜನವಿರೋಧಿ ಸರಕಾರವನ್ನು ಕಿತ್ತುಹಾಕಬೇಕುʼʼ ಎಂದರು.

ರಾಜ್ಯದಲ್ಲಿ ಅವರ ಮುಂದಾಳುತ್ವದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸೋಣ. ಸೋನಿಯಾ ಗಾಂಧಿ ಅವರ ಕೈ ಬಲಪಡಿಸೋಣ. ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮಾಡೋಣ ಎಂದರು ಡಿಕೆಶಿ.

ರಾಹುಲ್‌ ಹೇಳಿದ ಪ್ರೀತಿಯ ಮಾತು
ಸಿದ್ದರಾಮೋತ್ಸವ ಕಲ್ಪನೆಯ ಹುಟ್ಟಿನ ಬಗ್ಗೆ ಹೇಳಿದ ಅವರು, ʻʻನಾನು, ರಾಹುಲ್‌ ಗಾಂಧಿ ಅವರು, ವೇಣುಗೋಪಾಲ್‌ ಇದ್ದಾಗ ಸಿದ್ದರಾಮಯ್ಯ ಅವರು ವಿಷಯ ಪ್ರಸ್ತಾಪಿಸಿದರು. ಅಭಿಮಾನಿಗಳು ಬಯಸಿದ್ದಾರೆ ಎಂದರು. ಆಗ ತುಂಬ ಖುಷಿಯಾದ ರಾಹುಲ್‌ ಗಾಂಧಿ ಅವರು ಇದೊಂದು ಅಪೂರ್ವ ಕ್ಷಣ. ಆವತ್ತು ನಾನೇ ಬರ್ತೇನೆ ಅಂದರು ರಾಹುಲ್‌ʼʼ ಎಂದು ನೆನಪಿಸಿಕೊಂಡರು.

ʻʻಸಿದ್ದರಾಮಯ್ಯ ಅವರ ಕಾಲದಲ್ಲಿ ನಾವೆಲ್ಲ ಮಂತ್ರಿಗಳಾಗಿದ್ದೆವು. ಆಗ ಕೊಟ್ಟ ಕಾರ್ಯಕ್ರಮಗಳು ಎಲ್ಲ ವರ್ಗಕ್ಕೆ ಸೇರಿದವು. ಮುಖ್ಯಮಂತ್ರಿಯಾಗಿ ಒಂದೇ ಗಂಟೆಯಲ್ಲಿ ಈ ರಾಜ್ಯದ ಒಬ್ಬನೇ ಒಬ್ಬ ಹಸಿವಿನಿಂದ ಕಂಗಾಲಾಗಬಾರದು ಎಂಬ ಕಾರಣಕ್ಕಾಗಿ ಅನ್ನಭಾಗ್ಯ ಯೋಜನೆ ತಂದಿದ್ದರು. ನಾನು ವಿದ್ಯುತ್‌ ಮಂತ್ರಿಯಾಗಿದ್ದಾಗ ಏಳು ಗಂಟೆ ಕರೆಂಟ್‌ ಕೊಟ್ಟೆ. ಸೋಲಾರ್‌ ಪಾರ್ಕ್‌ ಮೂಲಕ ಇತಿಹಾಸ ಸೃಷ್ಟಿ ಮಾಡಿದೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರʼʼ ಎಂದು ನೆನಪು ಮಾಡಿದರು.

ನಾಯಕರಿಂದಲ್ಲ ಜನರಿಂದ
ʻʻಕೇವಲ ವೇದಿಕೆಯಲ್ಲಿದ್ದವರು ಸರಕಾರ ‌ಸ್ಥಾಪಿಸಲು ಸಾಧ್ಯವಿಲ್ಲ. ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಕಾಂಗ್ರೆಸ್‌ ಪಕ್ಷದ ಪರವಾಗಿ ಕೆಲಸ ಮಾಡಿದಾಗ ಮಾತ್ರ ನಾವು ಗೆಲ್ಲುತ್ತೇವೆʼʼ ಎಂದರು ಡಿಕೆಶಿ.

೧೫ರಂದು ವಿಶೇಷ ಕಾರ್ಯಕ್ರಮ
ಆಗಸ್ಟ್‌ ೧೫ರಂದು ಈ ದೇಶದ ಸ್ವಾತಂತ್ರ್ಯೋತ್ಸವವನ್ನು ವೈಭವದಿಂದ ಆಚರಿಸಬೇಕು ಎಂದು ಸೋನಿಯಾ ಗಾಂಧಿ ಅವರು ತಿಳಿಸಿದ್ದಾರೆ. ಆವತ್ತು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ನ್ಯಾಷನಲ್‌ ಕಾಲೇಜು ಮೈದಾನದ ವರೆಗೆ ದೊಡ್ಡ ಮೆರವಣಿಗೆ ನಡೆಯಲಿದೆ ಎಂದರು.

Exit mobile version