ಮಂಗಳೂರು: ರಾಜ್ಯದ 124 ಕ್ಷೇತ್ರಗಳಿಗೆ ಟಿಕೆಟ್ (Congress ticket) ಘೋಷಣೆ ಮಾಡಿರುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಇದರಲ್ಲಿ ಮೂವರು ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ಸುಳ್ಯ, ಮೂಡಬಿದ್ರೆ, ಬೆಳ್ತಂಗಡಿ ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳಾಗಿ ಜಿ. ಕೃಷ್ಣಪ್ಪ, ಮಿಥುನ್ ರೈ, ಹಾಗೂ ರಕ್ಷಿತ್ ಶಿವರಾಮ್ ಅವರಿಗೆ ಟಿಕೆಟ್ ನೀಡಿದೆ. ಬಂಟ್ವಾಳದಿಂದ ಹಳೆ ಹುಲಿ ರಮಾನಾಥ ರೈ ಮತ್ತು ಮಂಗಳೂರು ಕ್ಷೇತ್ರದಿಂದ ಹಾಲಿ ಶಾಸಕ ಯು.ಟಿ. ಖಾದರ್ ಅವರಿಗೇ ಟಿಕೆಟ್ ಸಿಕ್ಕಿದೆ. ತೀವ್ರ ಪೈಪೋಟಿ ಇರುವ ಪುತ್ತೂರು, ಮಂಗಳೂರು ಉತ್ತರ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಘೋಷಣೆ ಆಗಿಲ್ಲ.
ಆಸಕ್ತಿಕರ ವಿಚಾರವೆಂದರೆ ಮೂಡುಬಿದಿರೆಯಿಂದ ಟಿಕೆಟ್ ಪಡೆದಿರುವ ಮಿಥುನ್ ರೈ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ತೀರಾ ಆಪ್ತರು. ಬೆಳ್ತಂಗಡಿಯಿಂದ ಟಿಕೆಟ್ ಪಡೆದಿರುವ ರಕ್ಷಿತ್ ಶಿವರಾಂ ಮೇಲ್ಮನೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಬಿ.ಕೆ. ಹರಿಪ್ರಸಾದ್ ಅವರ ಸಂಬಂಧಿ!
ಮೂಡುಬಿದಿರೆ ಕ್ಷೇತ್ರದಿಂದ ಮಿಥುನ್ ರೈಗೆ ಅವಕಾಶ
ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯ ಸಮಯದಲ್ಲೇ ಮುಂದಿನ ಅಭ್ಯರ್ಥಿ ಕಾಂಗ್ರೆಸ್ ಯುವ ನಾಯಕ ಹಾಗೂ ಡಿ.ಕೆ ಶಿವಕುಮಾರ್ ಆಪ್ತ ಮಿಥುನ್ ರೈ ಅವರಿಗೆ ಟಿಕೆಟ್ ಅನ್ನೋ ಮಾತು ಚಾಲ್ತಿಯಲ್ಲಿತ್ತು. ಮಾಜಿ ಶಾಸಕ ಅಭಯಚಂದ್ರ ಜೈನ್ ಕೂಡಾ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡದೆ ಮಿಥುನ್ ರೈ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದರು. ಹೀಗಾಗಿ ಕಳೆದ ಐದು ವರ್ಷಗಳಿಂದ ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರಿಗೆ ಈಗ ಟಿಕೆಟ್ ಘೋಷಣೆಯಾಗಿದೆ. ಈ ನಡುವೆ, 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಎದುರು ಸ್ಪರ್ಧಿಸಿ ಅದೃಷ್ಟ ಪರೀಕ್ಷೆ ನಡೆಸಿದ್ದರು.
ಬೆಳ್ತಂಗಡಿಯಲ್ಲೂ ಯುವ ನಾಯಕನಿಗೆ ಟಿಕೆಟ್
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ ಟಿಕೆಟ್ ವಿಚಾರದಲ್ಲಿ ಸ್ಥಳಿಯ ಕಾಂಗ್ರೆಸ್ ನಾಯಕರಲ್ಲಿ ಸಾಕಷ್ಟು ಪೈಪೋಟಿ ಇತ್ತು. ಮಾಜಿ ಶಾಸಕ ವಸಂತ ಬಂಗೇರ ಅವರು ಚುನಾವಣೆಯಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಗಂಗಾಧರ ಗೌಡ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ಕಳೆದ ಐದು ವರ್ಷಗಳಿಂದ ಬೆಳ್ತಂಗಡಿ ಕ್ಷೇತ್ರದಲ್ಲಿ ಓಡಾಡಿ ಯುವಕರನ್ನು ಸಂಘಟಿಸುವ ಮೂಲಕ ಟಿಕೆಟ್ ಆಕಾಂಕ್ಷಿಯಾಗಿದ್ದು ರಕ್ಷಿತ್ ಶಿವರಾಂ.
ಇವರು ನಿವೃತ್ತ ಐಪಿಎಸ್ ಅಧಿಕಾರಿ ಬಿ.ಶಿವರಾಂ ಅವರ ಪುತ್ರ. ಬಿ.ಕೆ. ಶಿವರಾಂ ಅವರು ಹಾಲಿ ಮೇಲ್ಮನೆ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಸಹೋದರ.
ರಕ್ಷಿತ್ ಶಿವರಾಂ ಅವರಿಗೆ ಟಿಕೆಟ್ ನೀಡದಂತೆ ಸಾಕಷ್ಟು ಪ್ರಯತ್ನಗಳು ಬೆಳ್ತಂಗಡಿ ಕಾಂಗ್ರೆಸ್ ವಲಯದಲ್ಲೇ ನಡೆದಿತ್ತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ರೂ ಪಕ್ಷದ ವೇದಿಕೆಯಲ್ಲೂ ರಕ್ಷಿತ್ ಶಿವರಾಂ ಅವರನ್ನೂ ದೂರ ಇರಿಸಲಾಗಿತ್ತು. ಆದರೆ ರಕ್ಷಿತ್ ಶಿವರಾಂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ರಕ್ಷಿತ್ ಶಿವರಾಂ ಅವರಿಗೆ ಟಿಕೇಟ್ ನೀಡಲಾಗಿದ್ದು, ಮುಂದೆ ಪಕ್ಷದ ಸ್ಥಳೀಯ ನಾಯಕರು ಹೇಗೆ ಬೆಂಬಲ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಜಿ. ಕೃಷ್ಣಪ್ಪ ಅವರಿಗೆ ಒಲಿದ ಸುಳ್ಯದ ಟಿಕೆಟ್
ಸುಳ್ಯ ಮೀಸಲು ಕ್ಷೇತ್ರಕ್ಕೆ ಉದ್ಯಮಿ ಹಾಗೂ ಕಳೆದ ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣಪ್ಪ ಅವರಿಗೆ ಟಿಕೆಟ್ ಸಿಕ್ಕಿದೆ. ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದರು. ಕ್ಷೇತ್ರಕ್ಕೆ ಆರು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಪ್ರಬಲ ಪೈಪೋಟಿ ಇದ್ದಿದ್ದು ಸುಳ್ಯ ಕ್ಷೇತ್ರದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕೆಪಿಸಿಸಿ ಸಂಯೋಜಕರಾಗಿ ಕೆಲಸ ನಿರ್ವಹಿಸುತ್ತಿದ್ದ ಎಚ್.ಎಂ. ನಂದ ಕುಮಾರ್ ಹಾಗೂ ಜಿ. ಕೃಷ್ಣಪ್ಪ ನಡುವೆ.
ಇಬ್ಬರೂ ಕೂಡಾ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದು, ಕಳೆದ ಮೂರು ದಶಕದಿಂದ ಕೈ ತಪ್ಪಿರುವ ಸುಳ್ಯ ಕ್ಷೇತ್ರವನ್ನು ಮತ್ತೆ ಪಡೆಯುವ ವಿಶ್ವಾಸ ಹೊಂದಿದ್ದರು. ಟಿಕೆಟ್ ಯಾರಿಗೆ ಸಿಕ್ಕಿದರೂ ಜೊತೆಯಾಗಿ ಕೆಲಸ ಮಾಡುವ ಛಲ ಇಟ್ಟು ಕ್ಷೇತ್ರದಲ್ಲಿ ಸಾಕಷ್ಟು ಓಡಾಟ ನಡೆಸಿದ್ದರು.
ಬಂಟ್ವಾಳದಲ್ಲಿ ಹಳೆ ಹುಲಿ, ಮಂಗಳೂರಲ್ಲಿ ಖಾದರ್
ಬಂಟ್ವಾಳದಲ್ಲಿ ರಮಾನಾಥ ರೈ ಅವರಿಗೆ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಯು.ಟಿ.ಖಾದರ್ ಅವರಿಗೆ ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಈ ಬಾರಿ ಟಿಕೆಟ್ ಇಬ್ಬರಿಗೂ ಖಚಿತವಾಗಿತ್ತು.
ಇನ್ನುಳಿದ ಮೂರರಲ್ಲಿದೆ ಕಗ್ಗಂಟು
ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಸದ್ಯ 5 ವಿಧಾನಸಭಾ ಕ್ಷೇತ್ರಗಳ ಟಿಕೇಟ್ ಘೋಷಣೆಯಾಗಿದೆ . ಉಳಿದಿರುವ ಮೂರು ಕ್ಷೇತ್ರಗಳು ಕಾಂಗ್ರೆಸ್ಗೆ ಕಗ್ಗಂಟಾಗಿವೆ.
ಮಂಗಳೂರು ಉತ್ತರದಲ್ಲಿ ಇನಾಯತ್ ಅಲಿ ಹಾಗೂ ಮಾಜಿ ಶಾಸಕ ಮೊಯಿದಿನ್ ಬಾವ ನಡುವೆ ಟಿಕೇಟ್ಗಾಗಿ ತೀವ್ರ ಪೈಪೊಟಿ ನಡೆದಿದೆ. ಅಲಿ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಬ್ಯಾಟ್ ಬೀಸಿದರೆ ಬಾವಾ ಪರ ಡಿಕೆಶಿ ಒಲವು ಹೊಂದಿದ್ದಾರೆ.
ಇದೇ ರೀತಿ ಮಂಗಳೂರು ದಕ್ಷಿಣದಲ್ಲೂ ಮಾಜಿ ಶಾಸಕ ಲೋಬೋ ಅವರ ಪರ ಡಿಕೆಶಿ ಒಲವು ಹೊಂದಿದ್ದರೆ ಬೆಂಬಲಿಗ ಐವಾನ್ ಡಿಸೋಜಾ ಅವರ ಪರ ಮಾಜಿ ಸಿಎಂ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ.
ಇನ್ನು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಕುತಂಳಾ ಶೆಟ್ಟ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಹಾಗೂ ಇತ್ತೀಚೆಗಷ್ಟೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಉದ್ಯಮಿ ಅಶೋಕ್ ರೈ ಅವರ ನಡುವೆ ತೀವ್ರ ಪೈಪೋಟಿ ಇದೆ.
ಉದ್ಯಮಿ ಅಶೋಕ್ ರೈ ಅವರಿಗೆ ಟಿಕೇಟ್ ನೀಡುವ ಭರವಸೆಯೊಂದಿಗೆ ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಈ ವಿಚಾರವಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ನಲ್ಲೇ ಅಪಸ್ವರ ಎದ್ದಿತ್ತು. ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಆಪ್ತನಿಗೆ ಯಾವುದೇ ಕಾರಣಕ್ಕೂ ಟಿಕೇಟ್ ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಲಾಗಿತ್ತು.
ಮತ್ತೊಂದು ಕಡೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪಕ್ಷಕ್ಕೆ ದುಡಿದಿರುವ ಹೇಮನಾಥ ಶೆಟ್ಟಿ ಹಲವು ಬಾರಿ ಟಿಕೆಟ್ ವಂಚಿತರಾಗಿದ್ದಾರೆ ಹೀಗಾಗಿ ಅವರಿಗೇ ಟಿಕೆಟ್ ನೀಡಬೇಕು ಅನ್ನೋ ಒತ್ತಾಯವನ್ನು ಕಾರ್ಯಕರ್ತರು ಮಾಡಿದ್ದಾರೆ. ಅದೇ ರೀತಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಬೆಂಬಲಿಗರೂ ಟಿಕೆಟ್ ಶಕುಂತಳಾ ಶೆಟ್ಟಿಗೆ ನೀಡುವಂತೆ ಒತ್ತಡ ಹಾಕಿದ್ದಾರೆ. ಹೀಗಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೂಡಾ ಕೈ ನಾಯಕರಿಗೆ ತಲೆನೋವಾಗಿದೆ.
ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನಿಷ್ಟ ನಾಲ್ಕರಿಂದ ಐದು ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ ಪಕ್ಷ ಟಿಕೆಟ್ ವಿಚಾರದಲ್ಲಿ ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುವ ಪ್ರಯತ್ನ ಮಾಡಿದೆ. ಸದ್ಯ ಐದು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಿದ್ದು, ಮುಂದಿನ ಹಂತದಲ್ಲಿ ಉಳಿದ ಮೂರು ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆ ಮಾಡಲಿದೆ.
ಇದನ್ನೂ ಓದಿ : Congress First List: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ವರುಣಾದಿಂದ ಸಿದ್ದರಾಮಯ್ಯ, ದೇವನಹಳ್ಳಿಯಲ್ಲಿ ಮುನಿಯಪ್ಪ