ಬೆಂಗಳೂರು: ಬಿಗ್‌ಬಾಸ್ ಕನ್ನಡದ 10ನೇ ಆವೃತ್ತಿಯಲ್ಲಿರುವ ಪ್ರಬಲ ಸ್ಪರ್ಧಿ ಡ್ರೋನ್ ಪ್ರತಾಪ್‌ಗೆ (Drone Prathap) ಸಂಕಷ್ಟವೊಂದು ಎದುರಾಗಿದೆ. ಅವರಿಗೆ ಬಿಬಿಎಂಪಿ ಅಧಿಕಾರಿಯಾಗಿರುವ ಪಶುವೈದ್ಯ ಡಾ. ಪ್ರಯಾಗ್ ಎಚ್ ಎಸ್ ಅವರು ಕಾನೂನು ನೋಟಿಸ್ ಕಳುಹಿಸಿದ್ದಾರೆ. ತಮ್ಮ ಬಗ್ಗೆ ಅನಗತ್ಯ ಆರೋಪಗಳನ್ನು ಮಾಡಿರುವ ಡ್ರೋನ್ ಪ್ರತಾಪ್ ನೋಟಿಸ್ ತಲುಪಿದ ಒಂದು ತಿಂಗಳ ಒಳಗೆ ಬಹಿರಂಗ ಹಾಗೂ ಲಿಖಿತ ಕ್ಷಮೆ ಕೋರದೇ ಹೋದರೆ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಅವರು ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ.
ವಿವಾದಿತ ಕನ್ನಡ ರಿಯಾಲಿಟಿ ಶೋ ಬಿಗ್ಬಾಸ್ನ ಸ್ಪರ್ಧಿಯಾಗಿರುವ ನೀವು, ಜನರ ಅನುಕಂಪ ಗಳಿಸುವ ಹಾಗೂ ಪ್ರಚಾರ ಪಡೆಯುವ ಉದ್ದೇಶದಿಂದ ನನ್ನ ಮೇಲೆ ಅನಗತ್ಯ ಆರೋಪಗಳನ್ನು ಮಾಡಿದ್ದೀರಿ. ಕೊರೊನಾ ಕಾಲದಲ್ಲಿ ನೋಡಲ್ ಅಧಿಕಾರಿಯಾಗಿ ಕೆಲಸ ಮಾಡಿದ್ದ ನನ್ನ ಮೇಲೆ, ಹಲ್ಲೆ ಮಾಡಿರುವ ಆರೋಪ ಮಾಡಿದ್ದೀರಿ. ಎಲ್ಲವೂ ಸತ್ಯಕ್ಕೆ ದೂರವಾಗಿರುವ ವಿಚಾರ. ವಾಸ್ತವದಲ್ಲಿ ಕ್ವಾರಂಟೈನ್ ನಿಯಮಗಳನ್ನು ನೀವು ಉಲ್ಲಂಘಿಸಿರುವ ಬಗ್ಗೆ ನಮ್ಮ ಬಳಿಕ ಸೂಕ್ತ ದಾಖಲೆಗಳು ಇವೆ. ಇಂಥದ್ದರಲ್ಲಿ ನನ್ನ ಮೇಲೇಯೇ ಆರೋಪ ಮಾಡಿರುವ ನಿಮ್ಮ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದೇನೆ. ಕ್ಷಮೆ ಕೋರದ ಹೊರತು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಡಾ. ಪ್ರಯಾಗ್ ಅವರು ನೋಟಿಸ್ನಲ್ಲಿ ತಿಳಿಸಿದ್ದಾರೆ.
ಪ್ರತಾಪ್ ಮಾಡಿದ ಆರೋಪ ಏನು?
ಬಿಗ್ ಬಾಸ್ ಸೀಸನ್ 10ರ 8ನೇ (BBK SEASON 10) ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಸ್ಪರ್ಧಿಗಳಿಗೆ ತಮ್ಮ ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟದ ದಿನಗಳ ಬಗ್ಗೆ ಹೇಳಲು ಸೂಚಿಸಲಾಗಿತ್ತು. ಕೊರೊನಾ ಕಾಲದಲ್ಲಿ ನನಗೆ ನೋಡಲ್ ಅಧಿಕಾರಿಯೊಬ್ಬರು ತಲೆ ತಲೆ ಮೇಲೆ ಹೊಡಿದಿದ್ದರು ಎಂದು ಪ್ರತಾಪ್ ಬಿಕ್ಕಿ ಬಿಕ್ಕಿ ಅತ್ತಿದ್ದರು.
’ಮೆಂಟಲ್ ಆಸ್ಪತ್ರೆಯಿಂದ ಡಾಕ್ಟರ್‌ನ ಕರ್ಕೊಂಡ್ ಬಂದು ಮೆಂಟಲಿ ಅನ್‌ಸ್ಟೇಬಲ್ ಅಂತ ಬರೆದುಕೊಡು ಎಂದು ಅಧಿಕಾರಿ ಹಿಂಸೆ ಕೊಟ್ಟರು. ನನ್ನ ಪಾಸ್‌ಪೋರ್ಟ್, ಐಪ್ಯಾಡ್ ಕಿತ್ತುಕೊಂಡರು. ಮಾತನಾಡಿದರು. ಮೆಂಟಲಿ ಅನ್‌ಸ್ಬೇಬಲ್ ಎಂದು ಬರೆದುಕೊಡು ಎಂದು ತಲೆ ಮೇಲೆ ಹೊಡೆಯುತ್ತಿದ್ದರು ಎಂದು ಪ್ರತಾಪ್ ಅತ್ತಿದ್ದರು. ಈ ಹೇಳಿಕೆಯಿಂದ ಡ್ರೋನ್ ಪ್ರತಾಪ್‌ಗೆ ಅನುಕಂಪ ದೊರಕಿತ್ತು.
ಡ್ರೋನ್ ಪ್ರತಾಪ್‌ಗೆ ಕಳುಹಿಸಿರುವ ಲೀಗ್ ನೋಟಿಸ್ ಪ್ರತಿ ಇಲ್ಲಿದೆ.
ತಕ್ಷಣ ಎಚ್ಚರಿಕೆ ಕೊಟ್ಟಿದ್ದ ವೈದ್ಯ ಪ್ರಯಾಗ್
ಪ್ರತಾಪ್ ಆರೋಪಗಳನ್ನು ಬಿಬಿಎಂಪಿ ನೋಡಲ್ ಅಧಿಕಾರಿ ಡಾ. ಪ್ರಯಾಗ್ ತಕ್ಷಣವೇ ಖಂಡಿಸಿದ್ದರು ಆತ ತನ್ನ ಆರೋಪಗಳನ್ನು ಒಪ್ಪಿಕೊಳ್ಳದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಡಾ. ಪ್ರಯಾಗ್ ಹೇಳಿದ್ದರು. ಅದರಂತೆ ಈಗ ನೋಟಿಸ್ ಕಳುಹಿಸಿದ್ದಾರೆ.
ಸಂದರ್ಶನವೊಂದರಲ್ಲಿ ಪ್ರಯಾಗ್ ಅವರು ಮಾತನಾಡಿ ʻಪ್ರತಾಪ್ ಹೇಳಿರುವುದು ಸುಳ್ಳು. ಸತ್ಯ ಆಗಿದ್ದರೆ, ಮೂರು ವರ್ಷಗಳ ಕಾಲ ಸುಮ್ಮನೇ ಇರುತ್ತಿರಲಿಲ್ಲ. ಒಂದು ಪಕ್ಷ ನಾನು ಹೊಡೆದಿದ್ದೇ ಆಗಿದ್ದರೆ, ಆಗಲೇ ಅವನು ಕಂಪ್ಲೇಂಟ್ ಮಾಡಬೇಕಿತ್ತು. ನಾವು ನಮ್ಮ ಪವರ್ ಮಿಸ್‌ಯೂಸ್ ಮಾಡಿದ್ದೇ ಆಗಿದ್ದರೆ, ನಮಗೆ ಕೆಲಸಾನೇ ಹೋಗುತ್ತಿತ್ತು. ಈಗ ಆತ ಪ್ರೂವ್ ಮಾಡಬೇಕು. ಸಾರ್ವಜನಿಕರು ನಮ್ಮ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬಹುದು. ಆತ ಬೇಕಿದ್ದರೆ ಸಾಬೀತು ಮಾಡಲಿʼʼ ಎಂದಿದ್ದರು.
ʻʻಕ್ವಾರಂಟೈನ್ ನಿಯಮ ಉಲ್ಲಂಘಿಸಿ ಖಾಸಗಿ ವಾಹಿನಿ ಸ್ಟುಡಿಯೋದಲ್ಲಿ ಕೂತು ಸಂದರ್ಶನದಲ್ಲಿ ಮಾತನಾಡಿದ್ದ. ಆತ ಹೇಳುವಂತೆ ಇಡೀ ಪೊಲೀಸ್ ಪಡೆ ಅವನನ್ನು ಸುತ್ತುವರೆದಿರಲಿಲ್ಲ. ತಂದೆ ತಾಯಿ ವಿಚಾರ ಬಂದಾಗ ಆತ ವೀಕ್ ಆಗುತ್ತಿದ್ದ. ಆಗ ನಾವು ತಂದೆ ತಾಯಿ ಕರೆಸಿ ಮಾತನಾಡಿದ್ದೆವು. ಆತ ಡಿಗ್ರಿ ಮಾಡಿರುವುದು ನನಗೆ ಅನುಮಾನ ಇದೆ. ಆತ ಹೇಳುತ್ತಿರುವುದೆಲ್ಲಾ ಸುಳ್ಳು. ಆಯಾ ದೇಶಗಳಿಂದಲೇ ಪ್ರತಾಪ್ ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ನಮಗೆ ಮಾಹಿತಿ ಸಿಕ್ಕಿತ್ತುʼʼ ಎಂದು ಹೇಳಿದ್ದರು.
ʻʻನಾನು ಏನೇ ಹೇಳಿದರೂ ನನ್ನ ನಂಬುತ್ತಾರೆ ಎಂಬ ಭ್ರಮಾ ಲೋಕದಲ್ಲಿದ್ದಾನೆ. ಒಂದು ಸುಳ್ಳನ್ನು ಮುಚ್ಚಿಡಲು ಹಲವು ಸುಳ್ಳಿನ ಸರಮಾಲೆಯನ್ನು ಆತ ಸೃಷ್ಟಿಸುತ್ತಿದ್ದಾನೆ. ಅದು ಅವನಿಗೆ ಒಳ್ಳೆಯದಲ್ಲ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ವೇದಿಕೆ ಸಿಕ್ತು ಎಂದು ಮಾತನಾಡುವುದಲ್ಲ. ಅದೇ ಬಿಗ್‌ಬಾಸ್ ಶೋನಲ್ಲಿ ನಾನು ಹೇಳಿದ್ದು ಸುಳ್ಳು ಎಂದು ಪ್ರತಾಪ್ ಒಪ್ಪಿಕೊಳ್ಳಬೇಕು. ಸುಳ್ಳು ಆರೋಪ ಮಾಡಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಈಗಾಗಲೇ ನಾನು ಚಾನೆಲ್ ಜತೆಗೂ ಮಾತನಾಡಿದ್ದೇನೆʼʼ ಎಂದಿದ್ದರು.
ಇದನ್ನೂ ಓದಿ: BBK SEASON 10: ಪ್ರತಾಪ್‌ಗೆ ಸ್ವಂತ ಪರ್ಸನಾಲಿಟಿ ಇಲ್ಲ, ಸಿಂಪಥಿಯಲ್ಲಿ ಬದುಕೋನು ಎಂದ ಮೈಕಲ್!
ʻʻಪ್ರತಾಪ್ ಆ ವೇದಿಕೆಗೆ ಅರ್ಹರಲ್ಲ. ನಾನು ಬಿಗ್ ಬಾಸ್ ನೋಡಲ್ಲ. ಆದರೆ ಆ ಚಾನೆಲ್ ಬಗ್ಗೆ ಗೌರವ ಇದೆ. ಆ ವೇದಿಕೆಗೆ ಅವನು ಸೂಕ್ತನಲ್ಲʼʼ ಎಂದು ಹೇಳಿದ್ದರು.