ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಬೆಂಬಲಿಸುವ ಯುವ ಪಡೆಗೆ ಕಪಾಳ ಮೋಕ್ಷ ಮಾಡುವ ಶಕ್ತಿ ತಮ್ಮ ಕೈಗೆ ಇದೆಯೇ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಾಂಗ್ರೆಸ್ ಹಾಗೂ ಸಚಿವ ಶಿವರಾಜ್ ತಂಗಡಗಿಗೆ (Shivaraj Thangadagi) ಪ್ರಶ್ನೆ ಮಾಡಿದ್ದಾರೆ.
ಮೋದಿ ಮೋದಿ ಎಂದು ಜೈಕಾರ ಹಾಕುವ ಯುವಕರ ಕಪಾಳಕ್ಕೆ ಹೊಡೆಯಿರಿ ಎಂಬ ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವ ಪ್ರಲ್ಹಾದ್ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಆಸ್ತಿ. ಈ ದೇಶದ ಪರಿವಾರಕ್ಕೆ ಸೇರಿದವರು. ದೇಶವಾಸಿಗಳ ಆರಕ್ಷಕರು. ಅದಕ್ಕಾಗಿ ಜನರೇ ಮೋದಿಯವರಿಗೆ ಜೈಕಾರ ಕೂಗುತ್ತಿದ್ದಾರೆ. ಹೀಗಿರುವಾಗ ಅವರೆಲ್ಲರ ಕಪಾಳಕ್ಕೆ ಹೊಡೆಯುವ “ಶಕ್ತಿ” ನಿಮ್ಮ “ಕೈ”ಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಮೋದಿಯವರಿಗೆ ಜೈಕಾರ ಹಾಕುವವರ ಕಪಾಳಕ್ಕೆ ಹೊಡೆಯಬೇಕೆ? ಯಾವ ಕಾರಣಕ್ಕೆ? ಭಾರತದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಕ್ಕಾಗಿಯೇ? ಅಥವಾ ಜನರ ಒಳಿತಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಕ್ಕಾಗಿಯೇ? ಎಂದು ಪ್ರಲ್ಹಾದ್ ಜೋಶಿ ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಕಿಡಿಕಾರಿದ ಸಚಿವ ಜೋಶಿ
ದೇಶದ ಪ್ರಧಾನಮಂತ್ರಿಯನ್ನು ಹೇಗೆ ಗೌರವಿಸಬೇಕು ಎಂಬ ಕಿಂಚಿತ್ತೂ ಆಲೋಚನೆ ಕಾಂಗ್ರೆಸ್ ಪಕ್ಷದ ಬೇಜವಾಬ್ದಾರಿ ನಾಯಕರಿಗೆ ಇಲ್ಲ. ಸಚಿವ ಶಿವರಾಜ್ ತಂಗಡಗಿ ಓರ್ವ ಮಂತ್ರಿಯಾಗಿದ್ದು ಈ ಹೇಳಿಕೆ ನೀಡಿರುವುದು ಅಕ್ಷಮ್ಯ.
— Pralhad Joshi (Modi Ka Parivar) (@JoshiPralhad) March 25, 2024
ಮೋದಿಯವರಿಗೆ ಜೈಕಾರ ಹಾಕುವವರ ಕಪಾಳಕ್ಕೆ ಹೊಡೆಯಬೇಕೆ?? ಯಾವ ಕಾರಣಕ್ಕೆ?? ಭಾರತದ ಸರ್ವತೋಮುಖ ಅಭಿವೃದ್ಧಿಗೆ… pic.twitter.com/3XZdJfBKYy
ದೇಶದ ಪ್ರಧಾನ ಮಂತ್ರಿಯನ್ನು ಹೇಗೆ ಗೌರವಿಸಬೇಕು ಎಂಬ ಕಿಂಚಿತ್ತೂ ಆಲೋಚನೆ, ಸೌಜನ್ಯ ಕಾಂಗ್ರೆಸ್ ನಾಯಕರಿಗೆ ಇಲ್ಲ. ತೀರಾ ಉಡಾಫೇ ಮಾತನಾಡುತ್ತಾರೆ. ಇವರ ಅಸಹನೀಯ ಪದ ಬಳಕೆಗೆ ಯುವ ಪಡೆಯೇ ಉತ್ತರ ಕೊಡವ ಕಾಲ ದೂರವಿಲ್ಲ ಎಂದು ಪ್ರಲ್ಹಾದ್ ಜೋಶಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: Lok Sabha Election 2024: ಬನ್ನಿ ನಮ್ಮ ಕಪಾಳಕ್ಕೆ ಹೊಡೆಯಿರಿ; ನಾವೂ ಮೋದಿ ಮೋದಿ ಎನ್ನುತ್ತೇವೆ: ತಂಗಡಗಿಗೆ ಬಿಜೆಪಿ ಸವಾಲು
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಶಿವರಾಜ್ ತಂಗಡಗಿ ಓರ್ವ ಮಂತ್ರಿಯಾಗಿದ್ದುಕೊಂಡು ಪ್ರಧಾನಿ ಬಗ್ಗೆ, ದೇಶದ ಭವಿಷ್ಯದ ಆಸ್ತಿಯಾಗಿರುವ ಯುವ ಪಡೆ ಬಗ್ಗೆ ಹೀಗೆ ಕಪಾಳ ಮೋಕ್ಷದ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ಸಚಿವ ಪ್ರಹ್ಲಾದ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.
ತಂಗಡಗಿ ಹೇಳಿದ್ದೇನು?
ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾರಟಗಿಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಿವರಾಜ್ ತಂಗಡಗಿ, ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು. ಹಾಗೆ ನೋಡಿದರೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ನೀಡಬೇಕಿತ್ತು. ನೀಡಿದ್ದಾರಾ? ಇನ್ನೂ ಯುವಕರು, ವಿದ್ಯಾರ್ಥಿಗಳು ಮೋದಿ ಮೋದಿ ಎನ್ನುತ್ತಾರೆ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಇನ್ನೂ 5-10 ವರ್ಷ ಸುಳ್ಳು ಹೇಳುತ್ತಾರೆ. ಈ ಸುಳ್ಳು ಕೇಳಿಕೊಂಡು ಹೋಗಬೇಕಾ? ಎಂದು ಪ್ರಶ್ನೆ ಮಾಡಿದರು.
ಸಮುದ್ರದೊಳಗೆ ಪೂಜೆ
ದೇಶದಲ್ಲಿ 100 ಸ್ಮಾರ್ಟ್ ಸಿಟಿ ಮಾಡುತ್ತೇನೆ ಎಂದಿದ್ದರು. ಹಾಗಾದರೆ ಅದನ್ನು ಮಾಡಿದರಾ? ಅವರು ಸ್ಮಾರ್ಟ್ ಆದರು ಅಷ್ಟೆ. ಈಗ ಸಮುದ್ರದೊಳಗೆ ಹೋಗಿ ನವಿಲುಗರಿಯಿಂದ ಪೂಜೆ ಮಾಡಿದ್ದಾರೆ ಎಂದು ಶಿವರಾಜ್ ತಂಗಡಗಿ ಕಿಡಿಕಾರಿದರು.
ಇದನ್ನೂ ಓದಿ: Gali Janardana Reddy : ಗಣಿ ಧಣಿ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಮಡಿಲಿಗೆ, ಕಲ್ಯಾಣದಲ್ಲಿ ಲಾಭ ನಿರೀಕ್ಷೆ
ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಗೆದ್ದಂತೆ
ಕೆಲವು ರಾಜ್ಯದಲ್ಲಿ ಬಿಜೆಪಿಯವರು ಹೋದರೆ ಹೊಡೆಯುತ್ತಾರೆ. ಮಿಜೊರಾಂ ಸೇರಿ ಕೆಲವು ರಾಜ್ಯಗಳಲ್ಲಿ ಅವರಿಗೆ ನೆಲೆ ಇಲ್ಲ. ಈ ಹಿಂದೆ ಕನಕಗಿರಿಯಿಂದ ಪಕ್ಷೇತರರಾದ ನನ್ನನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದರು. ಆದರೆ, ಆಮೇಲೆ ಅನರ್ಹಗೊಳಿಸಿದರು. ಆಗ ನಾನು, ಈಗ ಸಂಗಣ್ಣ ಕರಡಿ. ಸಂಗಣ್ಣ ಮೋದಿ ಮೋದಿ ಎಂದು ಹೊಗಳಿದರು. ಪಾಪ ಒಳ್ಳೆಯ ಮನುಷ್ಯ. ಅವರಿಗೆ ಟಿಕೆಟ್ ನೀಡದೆ ಮನೆಯಲ್ಲಿ ಕೂರಿಸಿದ್ದಾರೆ. ಹೀಗಾಗಿ ಈಗ ಕಾಂಗ್ರೆಸ್ ಅಭ್ಯರ್ಥಿ ರಾಜಣ್ಣ ಗೆದ್ದಂತೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.