ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ನವಜಾತ ಶಿಶು ಕಚ್ಚಿಕೊಂಡು ಓಡಾಡಿದ ನಾಯಿಯೊಂದು ಓಡಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದುರದೃಷ್ಟವಶಾತ್ ಆ ಶಿಶು (New Born Baby Death) ಮೃತಪಟ್ಟಿದೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಬಳಿ ಮಾರ್ಚ್ 31ರಂದು ಈ ಘಟನೆ ನಡೆದಿದೆ. ನಾಯಿಯನ್ನು ಭದ್ರತಾ ಸಿಬ್ಬಂದಿ ಓಡಿಸಿದ್ದಾರೆ. ಆಗ ನಾಯಿಯು ಶಿಶುವನ್ನು ಸ್ಥಳದಲ್ಲೇ ಬಿಟ್ಟು ಓಡಿದೆ. ಬಳಿಕ ಶಿಶುವನ್ನು ವೈದ್ಯರ ಬಳಿ ಕೊಂಡೊಯ್ಯಲಾಗಿದೆ. ಶಿಶುವನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಜನಿಸಿದ ತಕ್ಷಣ ನವಜಾತ ಶಿಶುವನ್ನು ಆಸ್ಪತ್ರೆ ಹಿಂಭಾಗದಲ್ಲಿ ಯಾರೋ ಬಿಟ್ಟು ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದರೆ, ನಾಯಿಯಿಂದ ಶಿಶು ಮೃತಪಟ್ಟಿದೆಯೋ? ಅಥವಾ ಮೊದಲೇ ಮೃತಪಟ್ಟ ಶಿಶುವನ್ನು ಹಾಕಲಾಗಿದೆಯೋ ಎಂಬ ಮಾಹಿತಿ ಲಭ್ಯವಾಗಿಲ್ಲ. ಮಗು ಯಾರದ್ದು, ಮಗು ಬಿಟ್ಟು ಹೋದ ಪೋಷಕರು ಯಾರು ಎಂಬ ಬಗ್ಗೆ ಪತ್ತೆ ಹಚ್ಚುವಂತೆ ಆಸ್ಪತ್ರೆಯ ಸಿಬ್ಬಂದಿ ಆಗ್ರಹಿಸಿದ್ದಾರೆ. ಈ ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Audio Viral: ಸ್ಥಳೀಯ ಮುಖಂಡನಿಗೆ ಬೆದರಿಕೆ ಹಾಕಿದರೇ ಬಿಜೆಪಿ ಶಾಸಕ?: ಆಡಿಯೊ ವೈರಲ್
ಚಳ್ಳಕೆರೆಯ ಹಿರೇಹಳ್ಳಿ ಬಳಿ ಕಾರು ಪಲ್ಟಿ; ತೊಗಲು ಗೊಂಬೆ ಕಲಾವಿದ ಬೆಳಗಲ್ಲು ವೀರಣ್ಣ ಸಾವು
ಚಿತ್ರದುರ್ಗ/ಬಳ್ಳಾರಿ: ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿ ಕಾರೊಂದು ಪಲ್ಟಿ (Road Accident) ಹೊಡೆದಿದ್ದು, ತೊಗಲು ಗೊಂಬೆ ಕಲಾವಿದರೊಬ್ಬರು ಮೃತಪಟ್ಟಿದ್ದಾರೆ. ತೊಗಲು ಗೊಂಬೆ ಕಲಾವಿದ, ನಾಡೋಜ ಬೆಳಗಲ್ಲು ವೀರಣ್ಣ (91) ಮೃತಪಟ್ಟವರು. ಬಳ್ಳಾರಿ ಮೂಲದವರಾಗಿದ್ದು, ತೊಗಲುಗೊಂಬೆ ಆಟದ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಕಾರಿನಲ್ಲಿದ್ದ ಅವರ ಪುತ್ರ ಹನುಮಂತಪ್ಪಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಕಾರನ್ನು ಕ್ರೇನ್ ಮೂಲಕ ಎತ್ತಿದ್ದಾರೆ. ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಹಿರಿಯೂರು ಬಳಿ ಬಸ್, ಟಾಟಾ ಏಸ್, ಲಾರಿಗಳ ಸರಣಿ ಅಪಘಾತ; ಒಬ್ಬ ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ
ಹಿರಿಯೂರು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆದಿವಾಲ ಬಳಿ ತಡರಾತ್ರಿ ಕೆಎಸ್ಸಾರ್ಟಿಸಿ ಬಸ್, ಟಾಟಾ ಏಸ್, ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿ, ಒಬ್ಬರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ಗದಗ ಟಾನ್ ನಿವಾಸಿ ಸೈಯದ್ ಮುಜಾಹಿದ್ದೀನ್ (40) ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗದಿಂದ ಬಸ್ ಬೆಂಗಳೂರು ಕಡೆ ಹೋಗುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸಪ್ತಪದಿ ತುಳಿದ ಹತ್ತೇ ದಿನಕ್ಕೆ ಮಸಣ ಸೇರಿದ ನವ ದಂಪತಿ
ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರು ಗ್ರಾಮದ ಬಳಿ ಕಾರು ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ನವ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭೀಕರ ರಸ್ತೆ ಅಪಘಾತ (Road Accident) ನಡೆದಿದ್ದರಿಂದ ಸಪ್ತಪದಿ ತುಳಿದ ಹತ್ತೇ ದಿನಕ್ಕೆ ನವ ದಂಪತಿ ಮಸಣ ಸೇರಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer : ಡಾಲರ್ ಮಾದರಿಯಲ್ಲಿ ಅಂತಾರಾಷ್ಟ್ರೀಯ ಕರೆನ್ಸಿಯಾಗಲಿದೆಯೇ ರೂಪಾಯಿ?
ಮಹಾರಾಷ್ಟ್ರ ಮೂಲದ ಇಂದ್ರಜಿತ್ ಮೋಹನ್ ಡಮ್ಮನಗಿ (27), ಕಲ್ಯಾಣಿ ಇಂದ್ರಜಿತ್ ಡಮ್ಮಣಗಿ (24) ಮೃತರು. ನವ ದಂಪತಿ ಶನಿವಾರ ಕಾರಿನಲ್ಲಿ ಬಾದಾಮಿಯ ಬನಶಂಕರಿ ದೇವಿ ದರ್ಶನ ಪಡೆದು ಮರಳಿ ಮನೆಗೆ ತೆರಳುವಾಗ ನಿಪ್ಪಾಣಿ- ಮುದೋಳ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಾಗೂ ಟ್ಯಾಂಕರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಇಬ್ಬರೂ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.