ಬೆಂಗಳೂರು: ನಾಯಿ ಮಾಂಸ (Dog Meat) ಸಾಗಣೆಯ ವಾಹನವನ್ನು ತಡೆದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧಿತರಾಗಿರುವ ಪುನೀತ್ ಕೆರೆಹಳ್ಳಿ (Puneeth Kerehalli) ಅವರನ್ನು ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಿದೆ. ಹಾಗಾಗಿ, ಇನ್ನೂ 14 ದಿನ ದಿನ ಪುನೀತ್ ಕೆರೆಹಳ್ಳಿಯು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕಳೆಯಲಿದ್ದಾರೆ. ಬೆಂಗಳೂರಿನ 5ನೇ ಎಸಿಎಂಎಂ ನ್ಯಾಯಾಲಯದ ಜಡ್ಜ್ ವಿಜಯ್ ಕುಮಾರ್ ಅವರು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ.
ಬೆಂಗಳೂರಿಗೆ ಕುರಿ ಮಾಂಸದ ನೆಪದಲ್ಲಿ ನಾಯಿ ಮಾಂಸ ಬೇರೆ ರಾಜ್ಯದಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿ, ಮೆಜೆಸ್ಟಿಕ್‌ಗೆ ಬರುತ್ತಿದ್ದ ಮಾಂಸದ ವಾಹನಗಳನ್ನು ತಡೆದಿದ್ದರು. ಪೊಲೀಸರು ಮಧ್ಯಪ್ರವೇಶಿಸಿದ್ದು, ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಭದ್ರತೆಯಲ್ಲಿ ಕೋಲ್ಡ್ ಸ್ಟೋರೇಜ್‌ಗೆ ಮಾಂಸ ತುಂಬಿದ ನಾಲ್ಕು ವಾಹನಗಳು ರವಾನೆಯಾಗಿವೆ.
ಇದೇ ಸಂದರ್ಭದಲ್ಲಿ, ಬಿಎನ್ಎಸ್ 132 ಆ್ಯಕ್ಟ್ (ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ) ಹಾಗೂ 351 (2) ಸೆಕ್ಷನ್ ಆರೋಪದಡಿ ಕಾಟನ್ ಪೇಟೆ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದರು. ಠಾಣೆಯಲ್ಲಿ ಸುಸ್ತಾಗಿ ಮಲಗಿದ್ದ ಪುನೀತ್‌ನನ್ನು ಸಿಬ್ಬಂದಿಗಳು ಕೆಸಿ ಜನರಲ್ ಆಸ್ಪತ್ರೆಗೆ ವ್ಹೀಲ್‌ಚೇರ್‌ನಲ್ಲಿ ಕರೆದೊಯ್ದಿದ್ದು, ಈ ವೇಳೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಬೆಳಗಿನ ಜಾವ 4.45ಕ್ಕೆ ತೀವ್ರವಾಗಿ ಅಸ್ವಸ್ಥಗೊಂಡ ಆರೋಪಿಯನ್ನು ಆತುರಾತುರದಲ್ಲಿ ಆಸ್ಪತ್ರೆಗೆ ಕರೆತಂದಿದ್ದರು. ಇದಾದ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಜಾಮೀನು ಅರ್ಜಿ ಸಲ್ಲಿಕೆ
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧಿತನಾಗಿರುವ ಪುನೀತ್ ಕೆರೆಹಳ್ಳಿ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. “ಜಾಮೀನು ಅರ್ಜಿ ಸಲ್ಲಿಕೆಯಾಗಿದೆ. ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ” ಎಂಬುದಾಗಿ ಪುನೀತ್ ಕೆರೆಹಳ್ಳಿ ಪರ ವಕೀಲ ಉಮಾಶಂಕರ್ ಮಾಹಿತಿ ನೀಡಿದ್ದಾರೆ.
ನಾಯಿ ಮಾಂಸ ಸಾಗಾಟ ಆರೋಪದ ಹಿನ್ನೆಲೆಯಲ್ಲಿ ವ್ಯಾಪಾರಿ ಅಬ್ದುಲ್ ರಜಾಕ್ ಅವರಿಗೂ ಸಂಕಷ್ಟ ಎದುರಾಗಿದೆ. ಪ್ರಕರಣದ ಕುರಿತು ಮಾತನಾಡಿರುವ ಅಬ್ದುಲ್ ರಜಾಕ್, ಎರಡು ದಿನಕ್ಕೆ ಒಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತದೆ. ಇವತ್ತು ಎರಡು ಸಾವಿರ ಕೆಜಿ ಮಾಂಸ ಬಂದಿದೆ. ಹನ್ನೆರಡು ವರ್ಷದಿಂದ ಈ ವ್ಯವಹಾರ ನಡೀತಿದೆ. ಯಾವುದೇ ಆಹಾರ ಇಲಾಖೆ ಬಂದು ಚೆಕ್ ಮಾಡಲಿ. ರಾಜಸ್ಥಾನದ ಕುರಿಗಳಿಗೆ ಬಾಲ ಇದೇ ರೀತಿ ಇರುತ್ತೆ. ಪುನೀತ್ ಕೆರೆಹಳ್ಳಿ ಅದನ್ನು ನಾಯಿ ಅಂತಿದ್ದಾರೆ. ಹಣ ವಸೂಲಿ ಮಾಡೋಕೆ ಈ ರೀತಿ ಮಾಡ್ತಾ ಇದಾರೆ. ನಾಳೆ ಈ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತೇವೆ. ಈ ಬಗ್ಗೆ ಪುನೀತ್ ಕೆರೆಹಳ್ಳಿ ವಿರುದ್ಧ ದೂರು ಕೊಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Dog Meat: 15 ವರ್ಷದಿಂದ ಅಬ್ದುಲ್ ರಜಾಕ್ ನಾಯಿ ಮಾಂಸ ತಿನ್ನಿಸುತ್ತಿದ್ದಾರೆ: ಪ್ರಮೋದ್ ಮುತಾಲಿಕ್ ಶಾಕಿಂಗ್ ಹೇಳಿಕೆ