ದಾವಣಗೆರೆ: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿರುವುದು ನಾಯಿ ಮಾಂಸವಲ್ಲ, ಅದು ಮೇಕೆ ಮಾಂಸ. ಪ್ರಯೋಗಾಲಯದ ವರದಿಯಲ್ಲಿ ಮೇಕೆ ಮಾಂಸ ಎಂದು ಬಂದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರು ನಾಯಿ ಮಾಂಸ ಪ್ರಕರಣ ವಿಚಾರ ನಗರದಲ್ಲಿ ಪ್ರತಿಕ್ರಿಯಿಸಿ, ಲ್ಯಾಬ್ ಪರೀಕ್ಷೆಯಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ದುರುದ್ದೇಶದಿಂದ ಈ ಬಗ್ಗೆ ದೂರು ದಾಖಲಾಗಿತ್ತು. ರಾಜಸ್ಥಾನದಿಂದ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ, ವಾರಕ್ಕೊಮ್ಮೆ, 15 ದಿವಸಕ್ಕೊಮ್ಮೆ ಮಾಂಸ ಮಾರಾಟ ಮಾಡುತ್ತಾರೆ. ನಾಯಿ ಮಾಂಸ ಅಲ್ಲ, ಅದು ಮೇಕೆ ಮಾಂಸ ಎನ್ನುವುದು ವರದಿಯಲ್ಲಿ ಧೃಡವಾಗಿದೆ. ಇವತ್ತು ವರದಿ ಬಂದಿದೆ ಎಂದು ತಿಳಿಸಿದ್ದಾರೆ.
ಪುನೀತ್ ಕೆರೆಹಳ್ಳಿಗೆ 14 ದಿನ ನ್ಯಾಯಾಂಗ ಬಂಧನ
ನಾಯಿ ಮಾಂಸ (Dog Meat) ಸಾಗಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧಿತರಾಗಿರುವ ಪುನೀತ್ ಕೆರೆಹಳ್ಳಿಗೆ (Puneeth Kerehalli) ನ್ಯಾಯಾಲಯವು ಶನಿವಾರ 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಿತ್ತು. ಹಾಗಾಗಿ, ಇನ್ನೂ 14 ದಿನ ದಿನ ಪುನೀತ್ ಕೆರೆಹಳ್ಳಿಯು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕಳೆಯಲಿದ್ದಾರೆ. ಬೆಂಗಳೂರಿನ 5ನೇ ಎಸಿಎಂಎಂ ನ್ಯಾಯಾಲಯದ ಜಡ್ಜ್ ವಿಜಯ್ ಕುಮಾರ್ ಅವರು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದರು.
ಬೆಂಗಳೂರಿಗೆ ಕುರಿ ಮಾಂಸದ ನೆಪದಲ್ಲಿ ನಾಯಿ ಮಾಂಸ ಬೇರೆ ರಾಜ್ಯದಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿ, ಮೆಜೆಸ್ಟಿಕ್‌ಗೆ ಬರುತ್ತಿದ್ದ ಮಾಂಸದ ವಾಹನಗಳನ್ನು ತಡೆದಿದ್ದರು. ಪೊಲೀಸರು ಮಧ್ಯಪ್ರವೇಶಿಸಿದ್ದು, ಮಾಂಸವನ್ನು ವಶಪಡಿಸಿಕೊಂಡಿದ್ದರು. ಪೊಲೀಸರ ಭದ್ರತೆಯಲ್ಲಿ ಕೋಲ್ಡ್ ಸ್ಟೋರೇಜ್‌ಗೆ ಮಾಂಸ ತುಂಬಿದ ನಾಲ್ಕು ವಾಹನಗಳು ರವಾನೆಯಾಗಿತ್ತು. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಬಿಎನ್ಎಸ್ 132 ಆ್ಯಕ್ಟ್ (ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ) ಹಾಗೂ 351 (2) ಸೆಕ್ಷನ್ ಆರೋಪದಡಿ ಕಾಟನ್ ಪೇಟೆ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದರು.
ಏನಿದು ಪ್ರಕರಣ?
ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿದೆ ಎಂದು ಆರೋಪಿಸಿ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಜು.26ರಂದು ರಾಷ್ಟ್ರ ಜಾಗೃತಿ ಸಂಘಟನೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಲವು ಹಿಂದು ಕಾರ್ಯಕರ್ತರು ದಾಳಿ ನಡೆಸಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಮಾಂಸದ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ವಿರುದ್ಧ ನಾಯಿ ಮಾಂಸ ದಂಧೆ ಆರೋಪ ಕೇಳಿಬಂದಿದೆ. ಪರಿಶೀಲನೆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ | Dog Meat: ಅಬ್ದುಲ್ ರಜಾಕ್ ತರಿಸುವ ಮಾಂಸದ ಮೇಲೆ ಹೆಚ್ಚುತ್ತಿದೆ ಅನುಮಾನ! ಹಲವು ಹೋಟೆಲ್ ಮಾಲಿಕರಿಗೆ ನೋಟೀಸ್
ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಮೂಲಕ ನಾಯಿ ಮಾಂಸ ತಂದು, ನಗರದ ವಿವಿಧ ಹೋಟೆಲ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಪ್ಲೈ ಆಗುತ್ತಿದ್ದು, ಕುರಿ ಮಾಂಸ ಅಂತ ಹೇಳಿ ನಾಯಿ ಮಾಂಸವನ್ನು ತರಿಸಿ ಇಲ್ಲಿನ ಹೋಟೆಲ್‌ಗಳಿಗೆ 700-800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದರು.