ಬೆಂಗಳೂರು: ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ನಗರದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಕೆಜಿ ಶಂಕಿತ ನಾಯಿ ಮಾಂಸವನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರ ಜಾಗೃತಿ ಸಂಘಟನೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಲವು ಹಿಂದು ಕಾರ್ಯಕರ್ತರು ದಾಳಿ ನಡೆಸಿದ ವೇಳೆ ಮಾಂಸದ ಪಾರ್ಸೆಲ್‌ಗಳಲ್ಲಿ ನಾಯಿ ಮಾಂಸ (Dog Meat) ಕಂಡುಬಂದಿದೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಎಂಬುವವರಿಂದ ನಾಯಿ ಮಾಂಸ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪಗಳನ್ನು ಅಬ್ದುಲ್ ರಜಾಕ್ ಅಲ್ಲಗಳೆದಿದ್ದಾರೆ. ನಾಯಿ ಮಾಂಸದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದು ಸಂಘಟನೆಗಳು ದಾಳಿ ಮಾಡಿದ್ದು, ಈ ವೇಳೆ ಸಾವಿರಾರು ಕೆ.ಜಿ ಮಾಂಸ ಪತ್ತೆಯಾಗಿದೆ. ಆದರೆ, ಎರಡು ದಿನಕ್ಕೊಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತದೆ. ಇವತ್ತು ಎರಡು ಸಾವಿರ ಕೆಜಿ ಮಾಂಸ ಬಂದಿದೆ. ಹನ್ನೆರಡು ವರ್ಷದಿಂದ ಈ ವ್ಯವಹಾರ ನಡೆಯುತ್ತಿದೆ. ಆಹಾರ ಇಲಾಖೆ ಅಧಿಕಾರಿಗಳು ಬೇಕಿದ್ದರೆ ಬಂದು ಚೆಕ್ ಮಾಡಲಿ ಎಂದು ಅಬ್ದುಲ್ ರಜಾಕ್ ಹೇಳಿದ್ದಾರೆ.
ಮಾಂಸದ ಪಾರ್ಸೆಲ್‌ಗಳಲ್ಲಿ ಪ್ರಾಣಿಯ ಬಾಲ ಉದ್ದವಾಗಿರೋದು ಕಂಡುಬಂದಿದ್ದರಿಂದ, ಕುರಿ ಬಾಲ ಈ ರೀತಿ ಇರುತ್ತದಾ ಎಂದು ಹಿಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಈ ವೇಳೆ ರಾಜಸ್ಥಾನ ಕುರಿಗಳಿಗೆ ಇದೇ ರೀತಿ ಬಾಲ ಉದ್ದವಾಗಿರುತ್ತೆ, ಅದನ್ನು ನಾಯಿ ಎನ್ನುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡ ಹೇಳಿದ್ದಾರೆ.
ಪುನೀತ್ ಕೆರೆಹಳ್ಳಿ ಹಣ ವಸೂಲಿ ಮಾಡಲು ಈ ರೀತಿ ಮಾಡುತ್ತಿದ್ದಾರೆ. ನಾಳೆ ಈ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತೇವೆ. ಅವರ ವಿರುದ್ಧ ದೂರು ನೀಡುತ್ತೇವೆ ಎಂದು ಅಬ್ದುಲ್ ರಜಾಕ್ ತಿಳಿಸಿದ್ದಾರೆ.
ಆಹಾರ ಸುರಕ್ಷತಾ ಅಧಿಕಾರಿಗಳ ಪರಿಶೀಲನೆ
ಸ್ಥಳಕ್ಕೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. 5 ಬಾಕ್ಸ್‌ಗಳಲ್ಲಿ ಇದ್ದ ಕುರಿ ಮಾಂಸದ ಸ್ಯಾಂಪಲ್ ತೆಗೆದುಕೊಂಡಿದ್ದೇವೆ. ಮೇಲ್ನೋಟಕ್ಕೆ ಇದು ಕಳಪೆಯಾಗಿ ತೋರುತ್ತಿದೆ. ಇದನ್ನು ನಾವು ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತೇವೆ. 14 ದಿನದ ಬಳಿಕ ರಿಪೋರ್ಟ್ ಸಿಗುತ್ತದೆ ಎಂದು ಅಧಿಕಾರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಹೋಟೆಲ್‌ಗಳಿಗೆ 700-800 ರೂಪಾಯಿಗೆ ಮಾರಾಟ
ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಮೂಲಕ ನಾಯಿ ಮಾಂಸ, ನಗರದ ವಿವಿಧ ಹೋಟೆಲ್‌ಗಳಿಗೆ ಸರಬರಾಜು ಆಗುತ್ತಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಪ್ಲೈ ಆಗುತ್ತಿದೆ ಎನ್ನಲಾಗಿದೆ. ರಾಜಸ್ಥಾನದಿಂದ ಕುರಿ ಮಾಂಸ ಅಂತ ಹೇಳಿ ನಾಯಿ ಮಾಂಸವನ್ನು ತರಿಸಿ ಇಲ್ಲಿನ ಹೋಟೆಲ್‌ಗಳಿಗೆ 700-800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದು ಒಂದು ದೊಡ್ಡ ದಂಧೆ ಆಗಿದ್ದು, ಅಧಿಕಾರಿಗಳು, ಸಚಿವ ಜಮೀರ್ ಅಹ್ಮದ್ ಎಲ್ಲರೂ ಭಾಗಿ ಆಗಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದಾರೆ.
ಮತ್ತೊಂದೆಡೆ ಕಳೆದೊಂದು ವರ್ಷದಿಂದ 700 ರೂ.ಗಳಿಗಿಂತ ಹೆಚ್ಚಿನ ದರಕ್ಕೆ ಕುರಿ ಹಾಗೂ ಮೇಕೆಯ ಮಟನ್ ಮಾಂಸ ಮಾರಾಟವಾಗುತ್ತಿದೆ. ಆದರೆ, ಬೆಂಗಳೂರಿನ ಶಿವಾಜಿನಗರ ಸೇರಿ ಕಡೆ ಕೆಲ ವ್ಯಾಪಾರಿಗಳು ಪ್ರತಿ ಕೆ.ಜಿ. ಮಾಂಸವನ್ನು 500 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟು ಕಡಿಮೆ ದರಕ್ಕೆ ಮಾಂಸ ಹೇಗೆ ಸಿಗುತ್ತೆ ಎಂದು ಅನುಮಾನಗೊಂಡ ಮುಸ್ಲಿಂ ವ್ಯಾಪಾರಿಗಳೇ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಕಡಿಮೆ ದರಕ್ಕೆ ನಾಯಿ ಮಾಂಸ ತರಿಸಿಕೊಂಡು ಹೆಚ್ಚಿನ ದರಕ್ಕೆ ಕುರಿ ಮಾಂಸವೆಂದು ಮಾರಾಟ ಮಾಡಲಾಗುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಫಿಶ್ ಎಂದು ಸ್ಟಿಕ್ಕರ್ ಹಾಕಿಕೊಂಡು ಏನು ಪ್ಯಾಕ್ ಮಾಡಿದ್ದಾರೋ ನೋಡಿ, ಕುರಿಯ ಬಾಲ ಇಷ್ಟು ಉದ್ದ ಇರುತ್ತಾ? ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ಎಲ್ಲ ಮಾಂಸ ಆಹಾರ ಗುಣಮಟ್ಟ ಚೆಕ್ ಮಾಡಬೇಕು ಎಂದು ಹಿಂದುಪರ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಈ ವೇಳೆ ಪುನೀತ್ ಕೆರೆಹಳ್ಳಿ ಸೇರಿ ಹಲವು ಕಾರ್ಯಕರ್ತರನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದಿದ್ದಾರೆ.