ಬೆಂಗಳೂರು : ವಾಕರ್ ಕಿರಿಕಿರಿ ಉಂಟಾಗುತ್ತಿರುವ ಕಾರಣದಿಂದ ಜುಲೈ 1 ರಿಂದ ಸಾಕು ನಾಯಿಗಳಿಗೆ ಕಬ್ಬನ್ ಪಾರ್ಕ್ಗೆ ಪ್ರವೇಶ ನಿರ್ಬಂಧಕ್ಕೆ ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ.
ಈ ಹಿಂದೆ ನಾಯಿಗಳನ್ನು ಕರೆತರುವ ನಾಯಿ ಪ್ರೇಮಿಗಳಿಗೆ ಒಂದಿಷ್ಟು ನಿಯಮಗಳನ್ನು ಮಾಡಲಾಗಿತ್ತು. ನಾಯಿಗೆ ಬೆಲ್ಟ್ ಹಾಕಿರಬೇಕು, ಇತರರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಯಾರನ್ನೂ ಕಚ್ಚದಂತೆ ನಾಯಿಯ ಬಾಯಿಗೆ ಮಾಸ್ಕ್ ಹಾಕಬೇಕು. ನಾಯಿ ಮಾಡಿದ ಗಲೀಜನ್ನು ಕರೆತಂದವರೇ ಶುಚಿಗೊಳಿಸಬೇಕು ಎಂಬ ನಿಯಮಗಳನ್ನು ಮಾಡಲಾಗಿತ್ತು. ಆದರೆ, ಈ ನಿಯಮಗಳು ಸರಿಯಾಗಿ ಪಾಲನೆಯಾಗದ ಹಿನ್ನೆಲೆ ತೋಟಗಾರಿಕೆ ಇಲಾಖೆ ನಾಯಿಗಳಿಗೆ ಪ್ರವೇಶ ನಿರ್ಬಂಧಿಸಲು ಮುಂದಾಗಿದೆ.
ಸದ್ಯ ನಾಯಿಯ ಪ್ರವೇಶಕ್ಕೆ ನಿರ್ಬಂಧ ಹೇರಿರುವುದಕ್ಕೆ ನಾಯಿ ಪ್ರೇಮಿಗಳು ಹಾಗೂ ಪ್ರಾಣಿ ಸಂರಕ್ಷಣಾ ಸಂಘಟನೆಯ ಪದಾಧಿಕಾರಿಗಳು ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮೊದಲು ಇದೇ ರೀತಿಯ ನಿರ್ಬಂಧ ಹೇರಲು ತೋಟಗಾರಿಕೆ ಇಲಾಖೆ ಮುಂದಾಗಿತ್ತು. ಆದರೆ, ಇದಕ್ಕೆ ಭಾರೀ ಜನಾಕ್ರೋಶ ವ್ಯಕ್ತವಾದ ಹಿನ್ನೆಯಲ್ಲಿ ಯೋಜನೆ ಕೈ ಬಿಟ್ಟಿತ್ತು. ಈಗ ಮತ್ತೆ ನಿರ್ಬಂಧಕ್ಕೆ ಮುಂದಾಗಿದೆ.
ತೋಟಗಾರಿಕೆ ಇಲಾಖೆಯ ಈ ನಿಯಮದಿಂದ ಸಾಕು ಪ್ರಾಣಿಗಳಿಗೆ ಸ್ವತಂತ್ರವಾಗಿ ಓಡಲು, ಆಟವಾಡಲು ಸಾಧ್ಯವಾಗುವುದಿಲ್ಲಿ . ಹೀಗಾಗಿ ತೋಟಗಾರಿಕೆ ಇಲಾಖೆಯು ತಮ್ಮ ಆದೇಶವನ್ನು ಹಿಂಪಡೆಯಬೇಕು ಎಂದು change.org ಜಾಲತಾಣದಲ್ಲಿ ಕಬ್ಬನ್ ಪಾರ್ಕ್ ಕ್ಯಾನಿಸ್ ಮತ್ತು ಕಬ್ಬನ್ ಡಾಗ್ ಪಾರ್ಕ್ ಸ್ವಯಂ ಸೇವಕರು ಒತ್ತಾಯ ಮಾಡಿದ್ದಾರೆ.
ಇನ್ನು ಕಬ್ಬನ್ ಪಾರ್ಕ್ನಲ್ಲಿ ನಾಯಿಗಳ ಪ್ರವೇಶ ನಿರ್ಬಂಧ ಮಾಡಬೇಕು ಎಂದು 300 ಕ್ಕೂ ಹೆಚ್ಚು ದೂರುಗಳು ಬಂದಿದ್ದವು. ದೂರಿನಲ್ಲಿ ಪಾರ್ಕ್ನಲ್ಲಿ ನಾಯಿಗಳು ಎಲ್ಲೆಂದರಲ್ಲಿ ಓಡಾಡುತ್ತವೆ. ಗಲಿಜು ಮಾಡುತ್ತವೇ. ಇದರಿಂದ ವಾಕರ್ಗಳಿಗೆ ಭಾರೀ ತೊಂದರೆಯಾಗುತ್ತಿದೆ ಎಂದು ಉಲ್ಲೇಖಿಸಿ ದೂರು ನೀಡಲಾಗಿತ್ತು. ಹೀಗಾಗಿ ತೋಟಗಾರಿಕೆ ಇಲಾಖೆ ನಾಯಿಗಳ ಪ್ರವೇಶ ನಿಷೇಧಿಸಲು ಮುಂದಾಗಿದೆ. ಸದ್ಯ ಈ ಪ್ರಸ್ತಾವಕ್ಕೆ ಈಗಾಗಲೇ 5,500 ಮಂದಿ ಸಹಮತ ಸೂಚಿಸಿದ್ದಾರೆ.