Site icon Vistara News

Domestic violence | ಪತ್ನಿಯ ಕಿರುಕುಳ ತಾಳಲಾರದೆ ಮದುವೆಯಾದ ಮೂರೇ ತಿಂಗಳಲ್ಲಿ ಗಂಡ ಆತ್ಮಹತ್ಯೆ

kavana- maheshwar

ಬೆಂಗಳೂರು: ಕೌಟುಂಬಿಕ ಹಿಂಸೆ (Domestic violence) ಎಂದರೆ ಗಂಡ ಮತ್ತು ಮನೆ ಮಂದಿ ಮದುವೆಯಾಗಿ ಬಂದ ಹೆಣ್ಮಗಳಿಗೆ ಹಿಂಸೆ ನೀಡುವುದು ಎಂದೇ ಜನಜನಿತವಾಗಿದೆ. ಅದರೆ, ಇತ್ತೀಚಿನ ದಿನಗಳಲ್ಲಿ ಪುರುಷರೂ ಕೌಟುಂಬಿಕ ಹಿಂಸಾಚಾರಕ್ಕೆ ಗುರಿಯಾಗುತ್ತಿರುವುದು ಬೆಳಕಿಗೆ ಬರುತ್ತಿದೆ. ಬೆಂಗಳೂರಿನಲ್ಲಿ ನಡೆದಿರುವ ಈ ವಿದ್ಯಮಾನ ಅದಕ್ಕೆ ಸಾಕ್ಷಿಯಾಗಿದೆ. ಐಷಾರಾಮಿ ಜೀವನದ ಬೆನ್ನು ಬಿದ್ದ ಹೆಂಡತಿಯ ಕಾಟ ತಾಳಲಾರದೆ ಗಂಡನೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಅದೂ ಮದುವೆಯಾಗಿ ಮೂರೇ ತಿಂಗಳಲ್ಲಿ.

ಬೆಂಗಳೂರಿನ ಉಳ್ಳಾಲದ ಎಂ.ವಿ. ಲೇಔಟ್‌ನಲ್ಲಿ ಮಹೇಶ್ವರ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನರೆ. ಇದಕ್ಕೆ ಕಾರಣ ಹೆಂಡತಿ ನೀಡುತ್ತಿದ್ದ ಕಿರುಕುಳ ಕಾರಣ ಎನ್ನುವುದು ಬಯಲಾಗಿದೆ.

ನಿಜವೆಂದರೆ, ಮಹೇಶ್ವರ ಮತ್ತು ಕವನಾ ಅವರ ಮದುವೆ ನಡೆದು ಇನ್ನೂ ಮೂರು ತಿಂಗಳು ಅಷ್ಟೆ. ಆಗಸ್ಟ್‌ ೨೧ರಂದು ಅವರಿಬ್ಬರ ಮದುವೆ ಅದ್ಧೂರಿಯಾಗಿಯೇ ನಡೆದಿತ್ತು. ಮೇಲ್ನೋಟಕ್ಕೆ ಇಬ್ಬರೂ ಅನುರೂಪ ಜೋಡಿಯಂತೆ ಕಾಣುತ್ತಾರೆ. ಆತ ಹೀರೊನಂತೆ ಕಂಡರೆ, ಆಕೆ ನಿಜಕ್ಕೂ ಸೌಂದರ್ಯವತಿ. ಮಹೇಶ್ವರ್‌ (೨೪) ಅವರು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಕೊಡ್ಲೂರಿನ ರತ್ನಮ್ಮ ಅವರ ಮಗ. ಮಹೇಶ್ವರ್‌ ಅವರಿಗೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊನ್ನಲಗೆರೆ ಗ್ರಾಮದ ಆತ್ಮಾನಂದ ಮತ್ತು ಪದ್ಮ ದಂಪತಿಯ ಪುತ್ರಿ ಕವನಾ (೨೨) ಜತೆ ಮದುವೆ ನಡೆದಿತ್ತು.

ಮಹೇಶ್ವರ್‌ ತಾಯಿ ನೀಡಿದ ದೂರಿನಲ್ಲಿ ಏನಿದೆ?
ಆತ್ಮಹತ್ಯೆ ಮಾಡಿಕೊಂಡಿರುವ ಮಹೇಶ್ವರ ಅವರ ತಾಯಿ ರತ್ನಮ್ಮ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ, ಸೊಸೆ ಕವನಾಳ ಕಿರುಕುಳವೇ ಮಗನ ಆತ್ಮಹತ್ಯೆಗೆ ಕಾರಣ ಎಂದು ಹೇಳಿದ್ದಾರೆ. ಕವನಾಗೆ ಹೊಂದಾಣಿಕೆಯ ಮನಸ್ಥಿತಿಯೇ ಇರಲಿಲ್ಲ. ಮದುವೆಯಾದ ಕೆಲವೇ ಸಮಯದಲ್ಲಿ ಒಡವೆಗಾಗಿ ಪೀಡಿಸುವುದು, ದುಬಾರಿ ಬೆಲೆಯ ಆಭರಣ ಕೊಡಿಸುವಂತೆ ಒತ್ತಾಯಿಸುವುದು, ಕೊಡದೆ ಇದ್ದಾಗ ನಿಂದಿಸುವುದು, ಆತ್ಮಹತ್ಯೆ ಮಾಡಿಕೊಳ್ಳುವಂತೆ ನಿಂದಿಸುವುದು, ಮಾನಸಿಕವಾಗಿ ಚಿತ್ರ ಹಿಂಸೆ ಕೊಡುವುದು ಮಾಡುತ್ತಿದ್ದಳು. ಹಿರಿಯರಿಗೆ ಗೌರವ ತೋರಿಸದೆ ಅಪಮಾನ ಮಾಡುತ್ತಿದ್ದಳು ಎಂದು ದೂರಿನಲ್ಲಿ ಹೇಳಿದ್ದಾರೆ.

ಮದುವೆಯಾಗಿ ಮೂರೇ ತಿಂಗಳಾಗಿರುವುದಾದರೂ ಮಹೇಶ್ವರ್‌ ಕಳೆದ ನಾಲ್ಕೈದು ವರ್ಷಗಳಿಂದ ಕವನಾಳ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುತ್ತಿದ್ದರು ಎಂದು ರತ್ನಮ್ಮ ಹೇಳಿದ್ದಾರೆ. ಮದುವೆಯ ನಂತರವೂ ತನ್ನ ಹೆತ್ತವರ ಜವಾಬ್ದಾರಿ ವಹಿಸಬೇಕು, ಬೇರೆ ಮನೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಳು. ಒಬ್ಬನೇ ಮಗನ ಹಿತದೃಷ್ಟಿಯಿಂದ ಅದಕ್ಕೂ ಒಪ್ಪಿ ಮನೆಯ ಎಲ್ಲ ಪರಿಕರಗಳನ್ನೂ ನೀಡಿ ಮನೆ ಮಾಡಿಕೊಡುವ ಬಗ್ಗೆ ಮಾತಾಗಿತ್ತು. ಆದರೂ ತನ್ನ ನಡತೆಯನ್ನು ಸರಿಪಡಿಸಿಕೊಳ್ಳದ ಆಕೆ ಚಿತ್ರಹಿಂಸೆ ನೀಡುತ್ತಿದ್ದಳು. ಇದರಿಂದ ನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರತ್ನಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Suicide case | ಕೌಟುಂಬಿಕ ಕಲಹದ ಯಾತನೆ: ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ

Exit mobile version