ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕೆಲವೇ ದಿನಗಳ ಬಾಕಿಯಿದೆ. ಕೋವಿಡ್ ನಂತರ ನಡೆಯುತ್ತಿರುವ ಅದ್ದೂರಿ ದಸರಾ ಉದ್ಘಾಟಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿದ್ದಾರೆ. ರಾಷ್ಟ್ರಪತಿಗಳು ಉದ್ಘಾಟಿಸುವ ವೇದಿಕೆಯ ಮೇಲೆ ಕಳಂಕ ಹೊತ್ತಿರುವ ರಾಜ್ಯದ ಸಚಿವರಿಗೆ ಅವಕಾಶ ನೀಡಬಾರದು ಅನ್ನುವ ಮನವಿ ಈಗ ಸದ್ದು ಮಾಡಿದೆ.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ನಡೆದ ಬಿಡಿಎ ವಸತಿ ಹಗರಣಕ್ಕೆ ಸಂಬಂಧಿಸಿ ಸಚಿವರಾಗಿರುವ ಎಸ್.ಟಿ. ಸೋಮಶೇಖರ್ ಅವರ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶವಾಗಿದೆ. ಎಸ್.ಟಿ. ಸೋಮಶೇಖರ್ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ ಅವರು ಸೆ. ೨೬ರಂದು ನಡೆಯಲಿರುವ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳ ಜತೆ ವೇದಿಕೆ ಹಂಚಿಕೊಳ್ಳಲು ಅವಕಾಶವಿದೆ. ಇದಕ್ಕೆ ಅವಕಾಶ ನೀಡಬಾರದು ಎನ್ನುವುದು ಆಮ್ ಆದ್ಮಿ ಪಾರ್ಟಿ ಮುಖಂಡ ಎ.ಕೆ. ಮಥಾಯಿ ಅವರ ಬೇಡಿಕೆ.
ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ 2021ರಲ್ಲಿ ಕ್ರಿಮಿನಲ್ ಅರ್ಜಿಯೊಂದನ್ನು ಸಲ್ಲಿಸಿದ್ದರು. ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಈ ಕ್ರಿಮಿನಲ್ ಅರ್ಜಿಯಲ್ಲಿ ಸಚಿವ ಎಸ್ ಟಿ ಸೋಮಶೇಖರ್ 6ನೇ ಪ್ರತಿವಾದಿಯಾಗಿದ್ದಾರೆ. 12 ಕೋಟಿ ರೂಪಾಯಿ ಲಂಚ ಪಡೆಯುವ ಹಣದ ವಿಚಾರವಾಗಿ ದಾಖಲಾಗಿರೋ ಈ ಅರ್ಜಿಯಲ್ಲಿ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ. ಈ ಕಾರಣದಿಂದ ಆರೋಪ ಹಾಗು ಕಳಂಕ ಹೊತ್ತಿರೋ ಸಚಿವರನ್ನು ರಾಷ್ಟ್ರಪತಿಗಳು ಕುಳಿತುಕೊಳ್ಳೋ ವೇದಿಕೆಯಲ್ಲಿ ಕೂರಿಸದಂತೆ ಮನವಿ ಮಾಡಲಾಗಿದೆ. ರಾಷ್ಟ್ರಪತಿಗಳ ಕಚೇರಿಗೆ ಇಮೇಲ್ ಮುಖೇನ ಮನವಿ ಸಲ್ಲಿಸಲಾಗಿದೆ.
ಎ.ಕೆ. ಮಥಾಯಿ ನೇತೃತ್ವದಲ್ಲಿ ಆಮ್ ಆದ್ಮಿ ಮುಖಂಡರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಮುಂದಾದರು. ಆದರೆ, ರಾಜ್ಯಪಾಲರು ಇಲ್ಲದೆ ಇದ್ದುದರಿಂದ ಅಲ್ಲಿನ ಸಿಬ್ಬಂದಿ ಮನವಿ ಸಲ್ಲಿಸಲು ನಿರಾಕರಿಸಿದರು. ಎರಡು ದಿನ ಬಿಟ್ಟು ಬರುವಂತೆ ಸೂಚಿಸಿದ್ದಾರೆ. ಇದರ ನಡುವೆ ನೇರವಾಗಿ ರಾಷ್ಟ್ರಪತಿ ಭವನಕ್ಕೇ ಇ-ಮೇಲ್ ಮೂಲಕ ಮನವಿ ಸಲ್ಲಿಸಿರುವುದರಿಂದ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.
STAY | ಯಡಿಯೂರಪ್ಪ ವಿರುದ್ಧದ ಲೋಕಾಯಕ್ತ ತನಿಖೆಗೆ ಸುಪ್ರೀಂ ಕೋರ್ಟ್ ತಡೆ, ಉಳಿದವರ ವಿಚಾರಣೆ ಅಬಾಧಿತ